ಶುಕ್ರವಾರ, ಮೇ 20, 2022
25 °C
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಶಿಫಾರಸು

ಹೇಮಾವತಿ ಅಕ್ರಮ: ತನಿಖೆಗೆ ವಿಶೇಷ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ (ಸುವರ್ಣ ವಿಧಾನಸೌಧ): ಹೇಮಾವತಿ/ಯಗಚಿ/ವಾಟೆಹೊಳೆ ಜಲಾಶಯ ಯೋಜನೆಗಳ ಭೂ ಪರಿಹಾರ ಅಕ್ರಮದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ.

ಈ ಯೋಜನೆಗಳ ಭೂಸಂತ್ರಸ್ತರಿಗೆ ಮೀಸಲಿಟ್ಟ ಸರ್ಕಾರಿ ಜಮೀನುಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಭೂ ಸಂತ್ರಸ್ತರಲ್ಲದವರಿಗೆ ಭೂ ಮಂಜೂರಾತಿ ಮಾಡಿರುವ ಕುರಿತ ಮಧ್ಯಂತರ ವರದಿಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು. 2005ರ ನಂತರ ಆಗಿರುವ ಅಕ್ರಮ ಭೂ ಪರಭಾರೆಗಳನ್ನು ರದ್ದುಪಡಿಸಿ ಸಮಿತಿಗೆ ಸಮಗ್ರ ವರದಿ ಸಲ್ಲಿಸಬೇಕು ಎಂದೂ ಶಿಫಾರಸು ಮಾಡಿದೆ.

ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲಿಸಿ ಶಿಸ್ತುಕ್ರಮ ಕೈಗೊಂಡು ಸಮಿತಿ ವರದಿ ಸಲ್ಲಿಸಬೇಕು. ನೈಜ ಸಂತ್ರಸ್ತರಿಗೆ ಸಲ್ಲಬೇಕಾದ ಶಾಸನಬದ್ಧ ಹಿಸ್ಸೆಯನ್ನು ಲಭ್ಯವಾಗುವಂತೆ ಮಾಡಲು ಮತ್ತು ಅಧಿಕೃತ ಭೂ ಸಂತ್ರಸ್ತರಿಗೆ ಭೂಮಿ ಮಂಜೂರಾಗಿದ್ದರೆ, ಭೂಮಿಯನ್ನು ಅವರ ಬಳಿ ಉಳಿಯುವಂತೆ ಮಾಡಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಸಮಿತಿ ಸೂಚಿಸಿದೆ.

ಈ ಜಲಾಶಯಗಳ ಮುಳುಗಡೆ ರೈತರಿಗೆ ಭೂಮಿ ಮಂಜೂರು ಮಾಡುವ ಸಂಬಂಧ 15 ವರ್ಷಗಳ ಭೂ ಮಂಜೂರಾತಿ ಪರಭಾರೆ ನಿಷೇಧ ಷರತ್ತನ್ನು ಮರು ಸೇರಿಸಿ, ಸಂತ್ರಸ್ತ ಕುಟುಂಬದವರ ಬಳಿಯೇ ನಿರ್ದಿಷ್ಟ ಅವಧಿಗೆ ಜಮೀನು ಉಳಿಯುವಂತೆ ಮಾಡಿ, ಆಗಿರುವ ಅಕ್ರಮ ಭೂ ಖಾತಾ ಬದಲಾವಣೆಯನ್ನು ತಪ್ಪಿಸಬೇಕು. ಈ ಎಲ್ಲ ಶಿಫಾರಸುಗಳನ್ನು ಆರು ತಿಂಗಳಲ್ಲಿ ಇಲಾಖೆ ಅನುಷ್ಠಾನ ಮಾಡಬೇಕು ಎಂದು ಸಮಿತಿ ನಿರ್ದೇಶನ ನೀಡಿದೆ.

ಸರ್ಕಾರವು 1971ರಲ್ಲಿ ಪ್ರಾರಂಭಿಕ ಅಧಿಸೂಚನೆಯಲ್ಲಿ ನಿಗದಿಪಡಿಸಿದ ಭೂ ಪರಿಹಾರದ ಪ್ರಮಾಣಕ್ಕಿಂತ ಬಹಳ ಹೆಚ್ಚು ಪ್ರಮಾಣದಲ್ಲಿ ಪರಿಹಾರ ನೀಡಲಾಗಿದೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಯೋಜನೆಯ ಭೂ ಪರಿಹಾರ ಅಕ್ರಮದ ಬಗ್ಗೆ ಎಸ್‌.ಆರ್‌.ಬೊಮ್ಮಾಯಿ ನೇತೃತ್ವದ ಸಮಿತಿ 1982ರಲ್ಲೇ ವರದಿ ನೀಡಿದೆ. ಆದರೆ, 40 ವರ್ಷಗಳು ಕಳೆದ ಬಳಿಕವೂ ಭೂ ಸಂತ್ರಸ್ತರಿಗೆ ಭೂ ಮಂಜೂರಾತಿ ಪ್ರಕ್ರಿಯೆ ನಡೆಯುತ್ತಿದೆ. ಬೊಮ್ಮಾಯಿ ಸಮಿತಿಯ ಶಿಫಾರಸುಗಳ ಬಗ್ಗೆ ಕಂದಾಯ ಇಲಾಖೆ ಇಲ್ಲಿಯ ವರೆಗೆ ಕಠಿಣ ಕ್ರಮ ಕೈಗೊಂಡಿಲ್ಲ ಎಂದೂ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಜಲಾಶಯ ಮುಳುಗಡೆ ವಿಸ್ತೀರ್ಣವನ್ನು ಭೂ ಮಂಜೂರಾತಿಗೆ ಹೋಲಿಸಿದಾಗ, ಭೂ ಪರಿಹಾರದ ಅಕ್ರಮ ಮಂಜೂರಾತಿ ಅತ್ಯಂತ ಹೇರಳವಾಗಿದ್ದು, ಇದರ ಆಳ ಮತ್ತು ಅಗಲ ಅಳತೆಗೆ ನಿಲುಕದ್ದು ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ. 

1,654 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ರಚಿಸಿದ್ದ ತನಿಖಾ ತಂಡ ವರದಿ ನೀಡಿದೆ. ಆದರೂ, ಕಂದಾಯ ಇಲಾಖೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಸಮಿತಿ ತಿಳಿಸಿದೆ.

ಈ ಯೋಜನೆಗಳಿಗೆ ಭೂ ಮಂಜೂರಾತಿಗಾಗಿ 95 ಸಾವಿರ ಎಕರೆ ಕಾಯ್ದಿರಿಸಲಾಗಿತ್ತು. 2015–16ರ ನಂತರ 979 ಪ್ರಕರಣಗಳಲ್ಲಿ ಭೂ ಮಂಜೂರಾತಿ ಆಗಿದೆ. ಅವುಗಳ ಪೈಕಿ 569 ಪ್ರಕರಣಗಳು ವಿಶೇಷ ಭೂಸ್ವಾಧೀನಾಧಿಕಾರಿಗಳ ಆದೇಶದ ಅನ್ವಯ ಭೂ ಮಂಜೂರಾತಿ ಆಗಿವೆ. ಉಳಿದ 410 ಪ್ರಕರಣಗಳು ವಿಶೇಷ ಭೂಸ್ವಾಧೀನಾಧಿಕಾರಿಯವರ ಕಚೇರಿಯಿಂದ ಮಂಜೂರಾಗದೇ ಅಧಿಕಾರಿಗಳ ಸಹಿ
ಯನ್ನು ನಕಲಿ ಮಾಡಿ ಮತ್ತು ಸೃಷ್ಟಿಸಲಾದ ದಾಖಲೆಗಳಿಂದ ಮಂಜೂರಾಗಿತ್ತು ಎಂದೂ ಸಮಿತಿ ಉಲ್ಲೇಖಿಸಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ವರದಿ ಮಾಡಿರುವ 2,370 ಅನರ್ಹ ಭೂ ಮಂಜೂರಾತಿ ಪ್ರಕರಣಗಳ ಕುರಿತಂತೆ ಇಲಾಖೆ ಇಲ್ಲಿಯವರೆಗೂ ಸಮರ್ಪಕ ಕ್ರಮ ಕೈಗೊಂಡಿಲ್ಲ. ವಿಶೇಷ ಭೂಸ್ವಾಧೀನಾಧಿಕಾರಿ ಕ್ಯಾಪ್ಟನ್‌ ಶ್ರೀನಿವಾಸ ಗೌಡ ಅವಧಿಯಲ್ಲಿ 648 ಪ್ರಕರಣಗಳಲ್ಲಿ ಸೃಷ್ಟಿಸಿದ್ದ ಜಮೀನು ಮಂಜೂರಾತಿ ಪ್ರಕರಣಗಳ ತನಿಖೆ ಮಾಡಲು ಸೂಚಿಸಲಾಗಿತ್ತು. ಇದರ ಬಗ್ಗೆಯೂ ಇಲ್ಲಿಯವರೆಗೂ ವರದಿ ಸಲ್ಲಿಸಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು