ಬೆಳಗಾವಿ: ಬೆಳಗಾವಿಯನ್ನು ಡ್ರೋನ್ ಹಾಗೂ ಎಲೆಕ್ಟ್ರಿಕ್ ವಾಹನಗಳ ಹಬ್ ಆಗಿಸಲು ರೂಪಿಸಿದ ‘ಡ್ರೋಇವಿ–2023’ಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವಿಧ ಜಿಲ್ಲೆಗಳಿಂದ 16 ಕಂಪನಿಗಳ ಪ್ರತಿನಿಧಿಗಳು, 200 ಉದ್ಯಮಿಗಳು ಪಾಲ್ಗೊಂಡು ₹ 400 ಕೋಟಿ ಹೂಡಿಕೆ ಮಾಡುವುದಾಗಿ ವಾಗ್ದಾನ ಮಾಡಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಡ್ರೋಇವಿ–2023’ ಉದ್ಘಾಟನಾ ಸಮಾರಂಭದಲ್ಲಿ, ಬೆಳಗಾವಿ ಜಿಲ್ಲೆಯ 9 ಹಾಗೂ ಹೊರಜಿಲ್ಲೆಗಳ 7 ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ‘ಡ್ರೋಇವಿ ಉದಯೋನ್ಮುಖ ತಂತ್ರಜ್ಞಾನ ಕ್ಲಸ್ಟರ್ ಆಗಿದೆ. ಬೆಳಗಾವಿಯಲ್ಲಿ ಉತ್ತಮ ಅವಕಾಶಗಳಿವೆ. ದೇಶದಲ್ಲಿಯೇ ಇದನ್ನು ಮಾದರಿ ಕ್ಲಸ್ಟರ್ ಆಗಿ ರೂಪುಗೊಳಿಸಲಾಗುವುದು. ಕನಿಷ್ಠ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ’ ಎಂದರು.
‘ಬೆಳಗಾವಿಯಲ್ಲಿ ಒಂದು ವರ್ಷದಿಂದ ಏರೋಸ್ಪೇಸ್ ಉತ್ಪಾದನಾ ವಲಯ ಕ್ರಿಯಾಶೀಲವಾಗಿದೆ. ಈವರೆಗೆ ₹400 ಕೋಟಿ ಮೊತ್ತದ ಉತ್ಪಾದನೆ ಮಾಡಿದೆ. ಡ್ರೋನ್ ಮತ್ತು ಎಲೆಕ್ಟ್ರಿಕ್ ವಾಹನ ಕ್ಲಸ್ಟರ್‌ಗೆ ಇದು ಪೂರಕವಾಗಿ ಕೆಲಸ ಮಾಡಲಿದೆ’ ಎಂದು ತಿಳಿಸಿದರು.
ಉದ್ಯಮಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಎಲೆಕ್ಟ್ರಾನಿಕ್ಸ್, ಐಟಿ–ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ‘ಉತ್ಪಾದನೆಗೆ ಅನುಕೂಲಕರ ಪರಿಸರ ಸೃಷ್ಟಿ ಮಾಡುವುದು ನಮ್ಮ ಉದ್ದೇಶ. ದೇಶದ ಡಿಜಿಟಲೀಕರಣಕ್ಕೆ ಕೊಡುಗೆ ನೀಡಲಿದೆ. ಸ್ಥಳೀಯ ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ನೀಡುವುದು, ಜಾಗತಿಕ ಬಂಡವಾಳ ಹೂಡಿಕೆದಾರನ್ನು ಸೆಳೆಯುವುದು, ವಿಶ್ವವ್ಯಾಪ್ತಿಯಲ್ಲಿ ಪೂರೈಕೆ ಜಾಲ ಸೃಷ್ಟಿಸುವುದು, ಸ್ಥಳೀಯ ಪ್ರತಿಭೆಗಳ ಕೌಶಲಕ್ಕೆ ವೇದಿಕೆ ಕಲ್ಪಿಸುವುದು ಇದರಲ್ಲಿ ಸೇರಿವೆ’ ಎಂದರು.
ಕೆಡಿಇಎಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಗುಪ್ತಾ ಮಾತನಾಡಿ, ‘ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಡ್ರೋನ್ ಮಾರುಕಟ್ಟೆ ವಾರ್ಷಿಕ ಶೇ 10 ಮತ್ತು ಎಲೆಕ್ಟ್ರಿಕಲ್ ವಾಹನಗಳ ಮಾರುಕಟ್ಟೆ ಶೇ 50ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಹೊಂದಲಾಗಿದೆ’ ಎಂದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಡ್ರೋನ್– ಎಲೆಕ್ಟ್ರಿಕಲ್ ವಾಹನಗಳ ಉತ್ಪಾದಕರು, ಬಿಡಿ ಉತ್ಪನ್ನಗಳ ತಯಾರಕರು, ಬ್ಯಾಟರಿ– ಚಾರ್ಜಿಂಗ್ ಸಲಕರಣೆ ಮತ್ತು ಮೂಲಸೌಕರ್ಯ ಪೂರೈಕೆದಾರರು, ಅಟೊಮೊಬೈಲ್ ಘಟಕ ತಯಾರಕರು, ರಿಮೋಟ್ ಪೈಲೆಟ್ ಟ್ರೈನಿಂಗ್ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.