ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಲ್‌ಎಸ್‌ಗೆ ಅಮೃತ ಮಹೋತ್ಸವ ಸಂಭ್ರಮ

ಸೆ. 15ರಂದು ಸಮಾರಂಭ, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಗಿ
Last Updated 2 ಸೆಪ್ಟೆಂಬರ್ 2018, 9:04 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಟಿಳಕವಾಡಿಯಲ್ಲಿರುವ ಕರ್ನಾಟಕ ಕಾನೂನು ಸೊಸೈಟಿ (ಕೆಎಲ್ಎಸ್) ಹಾಗೂ ರಾಜಾ ಲಖಮಗೌಡ ಕಾನೂನು ಕಾಲೇಜಿನ ಅಮೃತ ಮಹೋತ್ಸವ ಸಮಾರಂಭವನ್ನು ಸೆ. 15ರಂದು ಬೆಳಿಗ್ಗೆ 11ಕ್ಕೆ ಜಿಐಟಿ ಕಾಲೇಜು ಆವರಣದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಅನಂತ ಮಂಡಗಿ ತಿಳಿಸಿದರು.

‘ರಾಷ್ಟ್ರಪತಿ ರಾಮನಾಥ ಕೋವಿಂದ್ ಉದ್ಘಾಟಿಸುವರು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ, ರಾಜ್ಯಪಾಲ ವಜೂಭಾಯಿ ಆರ್. ವಾಲಾ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳು ಭಾಗವಹಿಸಲಿದ್ದಾರೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವೇದಿಕೆ ಹಂಚಿಕೊಳ್ಳುತ್ತಿರುವುದು, ಬೆಳಗಾವಿ ಇತಿಹಾಸದಲ್ಲಿ ಇದೇ ಮೊದಲು’ ಎಂದು ಹೇಳಿದರು.

1939ರಲ್ಲಿ ಆರಂಭ:

‘ಕೆಎಲ್‌ಎಸ್‌ ರಾಜ್ಯದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಸಮಾಜಸೇವಾ ಮನೋಭಾವ ಹೊಂದಿದ ವಕೀಲರು, ಸ್ವಾತಂತ್ರ್ಯ ಹೋರಾಟಗಾರರು 1939ರಲ್ಲಿ ಸ್ಥಾಪಿಸಿದರು. ಆರಂಭದಲ್ಲಿ ಕಾನೂನು ಶಿಕ್ಷಣಕ್ಕೆ ಸೀಮಿತವಾಗಿತ್ತು. ನಂತರ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ, ವಾಣಿಜ್ಯ, ಎಂಜಿನಿಯರಿಂಗ್, ವ್ಯವಸ್ಥಾಪನಾ ವಿಷಯದವರೆಗೆ 13 ಸಂಸ್ಥೆಗಳನ್ನು ನಡೆಸುತ್ತಿದೆ’ ಎಂದು ವಿವರಿಸಿದರು.

‘ಸಪ್ತರ್ಷಿಗಳಾದ ಎನ್. ಶ್ರೀಖಂಡೆ, ವಿ.ಎ. ನಾಯಕ್, ಬಿ.ಎನ್. ದಾತರ, ವಿ.ಡಿ. ಬೆಲ್ವಿ, ಎಸ್.ಎನ್. ಅಂಗಡಿ, ವಿ.ಆರ್. ಕೊಟಬಾಗಿ, ಡಿ.ಎಸ್. ಪರಮಾಜ ಇದರ ಸಂಸ್ಥಾಪಕರು. ಅವರ ದೂರದೃಷ್ಟಿಯ ಯೋಜನೆಯನ್ನು ಮಹಾಪೋಷಕರಾದ ರಾಜಾ ಲಖಮಗೌಡ ಸರ್ ದೇಸಾಯಿ, ರಾವ್‌ ಸಾಹೇಬ ಬಿ.ಎಂ. ಗೋಗಟೆ, ಕೆ.ಕೆ. ವೇಣುಗೋಪಾಲ, ಆರ್‌.ವಿ. ದೇಶಪಾಂಡೆ ಪೋಷಿಸುತ್ತಿದ್ದಾರೆ. ಸಂಸ್ಥೆಯ ಎಲ್ಲ ಕಾಲೇಜುಗಳೂ ರಾಜ್ಯದಲ್ಲಿ ಮುಂಚೂಣಿಯಲ್ಲಿವೆ. ಗುಣಮಟ್ಟ ಕಾಯ್ದುಕೊಂಡು, ತಾಂತ್ರಿಕ ಹಾಗೂ ವೃತ್ತಿಪರ ಕೌಶಲ ಬೆಳೆಸುತ್ತಿದೆ’ ಎಂದು ತಿಳಿಸಿದರು.

ಕಾನೂನು ಶಿಕ್ಷಣ:

‘ಸ್ವಾತಂತ್ರ್ಯಪೂರ್ವದಲ್ಲಿ ಮೆಟ್ರಿಕ್ ನಂತರ ವ್ಯಾಸಂಗಕ್ಕೆ ಶಿಕ್ಷಣ ಸಂಸ್ಥೆಗಳು ವಿರಳವಾಗಿದ್ದವು. ಕಾನೂನು ಶಿಕ್ಷಣ ಪಡೆಯುವುದಕ್ಕಾಗಿ ಅಂದಿನ ಮದ್ರಾಸ್‌, ಬಾಂಬೆ ಅಥವಾ ಪುಣೆಗೆ ಹೋಗಬೇಕಿತ್ತು. ಈ ಕೊರತೆ ನೀಗಿಸಲು ಹಣಕಾಸಿನ ಮುಗ್ಗಟ್ಟು ಹಾಗೂ ಆಡಳಿತಗಾರರ ತೊಡಕಿನ ನಡುವೆಯೂ ರಾಜಾ ಲಖಮಗೌಡ ಕಾನೂನು ಕಾಲೇಜು ಆರಂಭಿಸಿದರು. ಇದು ಆಂಧ್ರಪ್ರದೇಶ, ಕೇರಳ ಹಾಗೂ ಮಹಾರಾಷ್ಟ್ರ ವಿದ್ಯಾರ್ಥಿಗಳನ್ನೂ ಆಕರ್ಷಿಸಿತು. ಪರಿಣಾಮ, ಬೆಳಗಾವಿಯು ಕಾನೂನು ಶಿಕ್ಷಣದ ಪ್ರಮುಖ ಕೇಂದ್ರವೆನಿಸಿತು’ ಎಂದು ಮೆಲುಕು ಹಾಕಿದರು.

‘ಕಾಲೇಜಿನಲ್ಲಿ, ಈವರೆಗೆ 7,500 ಮಂದಿ ಕಾನೂನು ಶಿಕ್ಷಣ ಪಡೆದಿದ್ದಾರೆ. ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಇ.ಎಸ್. ವೆಂಕಟರಾಮಯ್ಯ, ರಾಜೇಂದ್ರಬಾಬು ಹಾಗೂ ಪ್ರಸ್ತುತ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ‍ಪ್ರಮುಖರಾಗಿದ್ದಾರೆ. ಪ್ರಸ್ತುತ 1500ಕ್ಕೂ ಹೆಚ್ಚಿನ ಸಿಬ್ಬಂದಿ, 15ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿದೆ. 50ಸಾವಿರಕ್ಕೂ ಹೆಚ್ಚು ಮಂದಿ ಶಿಕ್ಷಣ ಪಡೆದಿದ್ದಾರೆ. ಸಂಸದರಾದ ಸುರೇಶ ಅಂಗಡಿ, ಪ್ರಭಾಕರ ಕೋರೆ ಕೂಡ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾಗಿದ್ದಾರೆ’ ಎಂದು ತಿಳಿಸಿದರು.

‘ರಾಷ್ಟ್ರಪತಿಗಳು ಕಾರ್ಯಕ್ರಮಕ್ಕೆ ಬರುವಲ್ಲಿ ಸಂಸದ ಸುರೇಶ ಅಂಗಡಿ ಪಾತ್ರ ಮಹತ್ವದ್ದಾಗಿದೆ. ದೇಶದ ಪ್ರಥಮ ಪ್ರಜೆಗೆ, ಸಂಸ್ಥೆಯ ಇತಿಹಾಸಕ್ಕಿಂತಲೂ ಬೆಳಗಾವಿಯ ಮಹತ್ವ ತಿಳಿಸಿಕೊಡಲು ಯತ್ನಿಸಲಾಗುತ್ತಿದೆ. ಈ ಮೂಲಕ ‘ಬ್ರಾಂಡ್‌ ಬೆಳಗಾವಿ’ ಬೆಳಗಿಸುವ ಉದ್ದೇಶ ನಮ್ಮದು’ ಎಂದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಎಂ.ಆರ್. ಕುಲಕರ್ಣಿ, ಆಡಳಿತ ಮಂಡಳಿ ಸದಸ್ಯ ಆರ್.ಎಸ್. ಮುತಾಲಿಕ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT