ಭಾನುವಾರ, ಮೇ 29, 2022
24 °C

ಬೆಳಗಾವಿ: ಜಾರಕಿಹೊಳಿ ಸಹೋದರರಲ್ಲಿ ನಾಲ್ವರು ಶಾಸಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಿಧಾನಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಗೆಲುವಿನೊಂದಿಗೆ, ಜಿಲ್ಲೆಯ ಪ್ರಭಾವಿ ಮನೆತನವಾದ ಜಾರಕಿಹೊಳಿ ಕುಟುಂಬದಲ್ಲಿನ‌ ಶಾಸಕರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ರಮೇಶ ಜಾರಕಿಹೊಳಿ (ಗೋಕಾಕ) ಹಾಗೂ ಬಾಲಚಂದ್ರ ಜಾರಕಿಹೊಳಿ (ಅರಭಾವಿ) ಬಿಜೆಪಿ ಶಾಸಕರಾಗಿದ್ದಾರೆ. ಸತೀಶ ಜಾರಕಿಹೊಳಿ (ಯಮಕನಮರಡಿ) ಕಾಂಗ್ರೆಸ್  ಶಾಸಕರಾಗಿದ್ದಾರೆ. ಇದೀಗ ಲಖನ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ಚುನಾಯಿತ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ತಮ್ಮನಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂಬ ಸಹೋದರರ ಆಸೆ ಈಡೇರಿದಂತಾಗಿದೆ ಮತ್ತು ಅವರು ರೂಪಿಸಿದ್ದ ಕಾರ್ಯತಂತ್ರವೂ ಯಶಸ್ವಿಯಾಗಿದೆ.

ಓದಿ: 

ಲಖನ್ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ರಮೇಶ ಜಾರಕಿಹೊಳಿ ಕಾಂಗ್ರೆಸ್‌ನಲ್ಲಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಸ್ಪರ್ಧಿಸಿದ್ದರು.

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಣ್ಣ‌ ರಮೇಶ ಜಾರಕಿಹೊಳಿ ವಿರುದ್ಧ ಲಖನ್ ಕಣಕ್ಕಿಳಿದಿದ್ದರು.‌ ಆ ಚುನಾವಣೆಯಲ್ಲಿ ‌ಸೋಲನುಭವಿಸಿದ್ದರು. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಬೆಳಗಾವಿ‌ ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿಯ ‌ಮಂಗಲಾ ಅಂಗಡಿ ಪರವಾಗಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದರು.

'ಈ‌ ಚುನಾವಣೆಯಲ್ಲಿ ಲಖನ್‌ ಅನ್ನು 2ನೇ ಅಭ್ಯರ್ಥಿಯಾಗಿ ಪರಿಗಣಿಸಿ ಬಿಜೆಪಿ ಟಿಕೆಟ್ ಕೊಡಬೇಕು' ಎಂದು ಸಹೋದರ ಬಾಲಚಂದ್ರ ಬಹಿರಂಗವಾಗಿಯೇ ವರಿಷ್ಠರನ್ನು ಕೋರಿದ್ದರು. ಆದರೆ, ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಸಡ್ಡು ಹೊಡೆದಿದ್ದರು.

ಓದಿ: 

ಅವರ ಸ್ಪರ್ಧೆ ಬಿಜೆಪಿಗೆ ಮುಳುವಾಗಿ ಪರಿಣಮಿಸಿರುವುದು ಫಲಿತಾಂಶದಿಂದ ಹೊರಬಿದ್ದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು