ಸೋಮವಾರ, ಸೆಪ್ಟೆಂಬರ್ 20, 2021
22 °C
ಹೊಸ ಮುಖಗಳಿಗೆ ಅವಕಾಶ ಸಾಧ್ಯತೆ

ಬೆಳಗಾವಿ: ಗಡಿ ನಾಡಿನಲ್ಲಿ ಸಚಿವರಾಗುವವರಾರು?

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಗೆ ದಿನಗಣನೆ ಶುರುವಾಗಿದ್ದು, ಜಿಲ್ಲೆಗೆ ಎಷ್ಟು ಪ್ರಾತಿನಿಧ್ಯ ಸಿಗಬಹುದು ಮತ್ತು ಯಾರಾರಿಗೆ ಅವಕಾಶ ದೊರೆಯಬಹುದು ಎನ್ನುವ ಚರ್ಚೆ ಮತ್ತು ಲೆಕ್ಕಾಚಾರಗಳು ಆರಂಭವಾಗಿವೆ.

ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಬೆಂಗಳೂರಿನ ನಂತರ ಹೆಚ್ಚಿನ ಪ್ರಾತಿನಿಧ್ಯ ದೊರೆತಿತ್ತು.

ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾದವರಲ್ಲಿ ಪ್ರಮುಖರು ಎನ್ನಲಾದ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನಡೆದ ಉಪ ಚುನಾವಣೆಯಲ್ಲಿ ಗೆದ್ದ ರಮೇಶ ಜಾರಕಿಹೊಳಿ (ಗೋಕಾಕ), ಅವರೊಂದಿಗೆ ಬಂದಿದ್ದ ಕಾಗವಾಡದ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಅದಲ್ಲದೇ, ವಿಧಾನಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರಿಗೆ ಅವಕಾಶ ದೊರೆತಿತ್ತು. ಅವರು ಉಪ ಮುಖ್ಯಮಂತ್ರಿಯೂ ಆಗಿದ್ದರು. ನಿಪ್ಪಾಣಿಯ ಶಶಿಕಲಾ ಜೊಲ್ಲೆ ಮತ್ತು ಹುಕ್ಕೇರಿಯ ಹಿರಿಯ ಶಾಸಕ ಉಮೇಶ ಕತ್ತಿ ಅವರು ಸ್ಥಾನ ಪಡೆದಿದ್ದರು. ಪ್ರಮುಖ ಖಾತೆಗಳು ಜಿಲ್ಲೆಯ ಪಾಲಾಗಿದ್ದವು.

ರಾಜೀನಾಮೆ ನೀಡಿದ್ದರು

ಬೆಂಗಳೂರು ನಂತರ ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿದ್ದು ಬಹಳ ಚರ್ಚೆಗೂ ಗ್ರಾಸವಾಗಿತ್ತು. ಸಿ.ಡಿ. ಪ್ರಕರಣದಲ್ಲಿ ಸಿಲುಕಿದ್ದ ರಮೇಶ ಜಾರಕಿಹೊಳಿ ಅವರು ವಿರೋಧ ಪಕ್ಷದವರ ಒತ್ತಡಕ್ಕೆ ಮಣಿದು ಮತ್ತು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬಾರಿಯೂ ಅದೇ ಪ್ರಮಾಣದಲ್ಲಿ ಪ್ರಾತಿನಿಧ್ಯ ದೊರೆಯುವುದೋ ಇಲ್ಲವೋ ಎನ್ನುವ ಕುತೂಹಲ ರಾಜಕೀಯ ಆಸಕ್ತರಲ್ಲಿದೆ.

ಆರಂಭದಲ್ಲಿ ನೆರೆಯ ಧಾರವಾಡ ಜಿಲ್ಲೆಯ ಜಗದೀಶ ಶೆಟ್ಟರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಬಳಿಕ ರಮೇಶ ಜಾರಕಿಹೊಳಿ ಅವರಿಗೆ ಆ ಸ್ಥಾನ ಕೊಡಲಾಗಿತ್ತು. ರಮೇಶ ರಾಜೀನಾಮೆ ಕೊಟ್ಟ ನಂತರ ಬಾಗಲಕೋಟೆ ಜಿಲ್ಲೆಯವರಾದ ಗೋವಿಂದ ಕಾರಜೋಳ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಸವದಿ ಅವರನ್ನು ರಾಯಚೂರು, ಶಶಿಕಲಾ–ವಿಜಯಪುರ ಮತ್ತು ಉಮೇಶ ಕತ್ತಿ ಅವರನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು.

ಹೆಚ್ಚು ಬಲ ತುಂಬಿದ ಜಿಲ್ಲೆ

ಸದ್ಯ ಬಿಜೆಪಿಗೆ ಹೆಚ್ಚಿನ ಬಲ ತುಂಬಿರುವ ಜಿಲ್ಲೆಗಳಲ್ಲಿ ಬೆಳಗಾವಿಯೂ ಒಂದು. ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು, 13 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

ವಿಧಾನಸಭೆ ಉಪಾಧ್ಯಕ್ಷರಾಗಿರುವ ಸವದತ್ತಿ–ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಅವರು, ‘ಮೂರು ಬಾರಿ ಗೆದ್ದಿರುವ ನನಗೆ ಸಚಿವ ಸ್ಥಾನ ಕೊಡದಿದ್ದರೆ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ’ ಎಂದು ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ. ಗಾದಿಗಾಗಿ ಒತ್ತಡ ತಂತ್ರವನ್ನೂ ಅನುಸರಿಸಿದ್ದಾರೆ. ಆರ್‌ಎಸ್‌ಎಸ್‌ ಜೊತೆಗೂ ನಿಕಟ ಸಂಪರ್ಕ ಹೊಂದಿದ್ದಾರೆ.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ರಾಯಬಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಕೂಡ ಒತ್ತಾಯಿಸಿದ್ದಾರೆ. 3ನೇ ಬಾರಿಗೆ ಶಾಸಕರಾಗಿರುವ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಶಾಸಕ ಗೋವಿಂದ ಕಾರಜೋಳ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಹೊಸ ಮುಖಗಳಿಗೆ ಅವಕಾಶ?

ಮತ್ತೊಮ್ಮೆ ಸಂಪುಟ ಸೇರಲು ರಮೇಶ ಜಾರಕಿಹೊಳಿ ಯತ್ನಿಸುತ್ತಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರನ್ನಾದರೂ ಪರಿಗಣಿಸಬೇಕೆಂಬ ಒತ್ತಡ ಅವರದು ಎನ್ನಲಾಗುತ್ತಿದೆ. ಬಾಲಚಂದ್ರ ಅವರೀಗ ಕೆಎಂಎಫ್‌ ಅಧ್ಯಕ್ಷರಾಗಿದ್ದಾರೆ. ಕುಡಚಿಯ ಪಿ. ರಾಜೀವ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಕೂಡ 3ನೇ ಬಾರಿ ಶಾಸಕರಾಗಿದ್ದಾರೆ. ಪಕ್ಷದ ಹಿರಿಯ ನಾಯಕರ ಜೊತೆಗೆ ಆರ್‌ಎಸ್ಎಸ್‌ ಜೊತೆಗೂ ನಂಟು ಹೊಂದಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಅವರಿಗೆ ಯಾವುದೇ ಸ್ಥಾನಮಾನ ಸಿಕ್ಕಿರಲಿಲ್ಲ. ಇದೆಲ್ಲವನ್ನೂ ಪರಿಗಣಿಸಿದರೆ ಅವರಿಗೆ ಈ ಬಾರಿ ಅವಕಾಶದ ಸಾಧ್ಯತೆ ಹೆಚ್ಚಿದೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಎಲ್ಲರಿಗೂ ಸ್ಥಾನ ದೊರೆಯುವುದು ಅನುಮಾನ. ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನುತ್ತವೆ ಪಕ್ಷದ ಮೂಲಗಳು.

ಅಥಣಿ ಶಾಸಕ ಮಹೇಶ ಕುಮಠಳ್ಳಿ ಕೂಡ ಆಕಾಂಕ್ಷಿಯಾಗಿದ್ದಾರೆ. ಬೆಂಬಲಿಗರು ತಮ್ಮ ಶಾಸಕರಿಗೆ ಸ್ಥಾನ ಸಿಗಲೆಂದು ಬೇಡಿಕೆ ಇಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವರಿಷ್ಠರ ಕೃಪೆ ಯಾರಿಗೆ ಸಿಗಲಿದೆ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು