ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಶಾಲೆಗೆ ‘ಹಸಿರು ಚಪ್ಪರ’

ಗಮನಸೆಳೆಯುವ ಖಡಕಲಾಟದ ಸಂತಾಜಿ ವಿದ್ಯಾಮಂದಿರ
ಅಕ್ಷರ ಗಾತ್ರ

ಚಿಕ್ಕೋಡಿ: ಬರೋಬ್ಬರಿ 145 ವಸಂತಗಳನ್ನು ಕಂಡಿರುವ ಶಾಲೆಯ ಆವರಣದಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಕಣ್ಮನ ಸೆಳೆಯುವ ಹಸಿರು ಸೃಷ್ಟಿಸಲಾಗಿದೆ. ಪ್ರತಿ ವರ್ಷ ಮಕ್ಕಳಿಗೆ ನೋಟ್‌ಬುಕ್‌, ಕಲಿಕಾ ಸಾಮಗ್ರಿ ಮತ್ತು ಬ್ಯಾಗ್‌ ವಿತರಿಸಲಾಗುತ್ತಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸರ್ಕಾರದಿಂದ ನೇಮಕಗೊಂಡಿರುವ ಐದು ಜನ ಶಿಕ್ಷಕರನ್ನು ಹೊರತುಪಡಿಸಿ, ಎಸ್‌ಡಿಎಂಸಿ ಮತ್ತು ಶಿಕ್ಷಕರ ವಂತಿಗೆಯಿಂದ ಹೆಚ್ಚುವರಿಯಾಗಿ ಇಬ್ಬರು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ತಾಲ್ಲೂಕಿನ ಖಡಕಲಾಟ ಗ್ರಾಮದ ಸಂತಾಜಿ ವಿದ್ಯಾಮಂದಿರದ ವಿಶಿಷ್ಠತೆ ಇದು.

ಶ್ರೀಮಂತ ಸಂತಾಜಿರಾವ್ ಘೋರ್ಪಡೆ (ಕಾಪಶಿಕರ ಸರಕಾರ) ಅವರು ಬ್ರಿಟಿಷ್‌ ಆಡಳಿತಾವಧಿಯಲ್ಲಿಯೇ ಖಡಕಲಾಟ ಮತ್ತು ಪರಿಸರದ ಮಕ್ಕಳಿಗೆ 1874ರಮಾರ್ಚ್ 20ರಲ್ಲಿ ಖಡಕಲಾಟ ಗ್ರಾಮದಲ್ಲಿ ಮರಾಠಿ ಶಾಲೆ ಸ್ಥಾಪಿಸಿದರು. ಆರಂಭದಲ್ಲಿ ಗ್ರಾಮದ ಲಕ್ಷ್ಮೀಮಂದಿರದಲ್ಲಿ ಶಾಲೆಯನ್ನು ನಡೆಸಲಾಗುತ್ತಿತ್ತು. ಕಾಪಶಿಕರ ಸರಕಾರ ಅವರೇ ದಾನವಾಗಿ ನೀಡಿದ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡದಲ್ಲಿ 1948ರಲ್ಲಿ ಶಾಲೆಯನ್ನು ಸ್ಥಳಾಂತರಿಲಾಗಿದೆ.

ಸದ್ಯ ಇಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 107 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕಚೇರಿ ಸೇರಿದಂತೆ 13 ಕೊಠಡಿಗಳಿವೆ. ಶಾಲೆಯ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದು ವಿಶೇಷವಾಗಿದೆ. ಪ್ರತಿಭಾ ಕಾರಂಜಿ, ಇಲಾಖೆ ನಡೆಸುವ ಕಬಡ್ಡಿ, ಕೊಕ್ಕೊ ಮೊದಲಾದ ಕ್ರೀಡೆಗಳಲ್ಲಿ ಶಾಲೆಯ ಮಕ್ಕಳು ಸಾಧನೆ ತೋರಿ ಗಮನಸೆಳೆದಿದ್ದಾರೆ.

‘ಶಾಲೆಯ ಒಂದು ಕೊಠಡಿಯ ಗೋಡೆಗಳ ಮೇಲೆ ಕರ್ನಾಟಕದ ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಪರಂಪರೆಯನ್ನು ಪ್ರತಿಬಿಂಬಿಸುವ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳಿಗೆ ಮೂಲ ಶಿಕ್ಷಣ ನೀಡುವ ಮಾಹಿತಿಯನ್ನು ಒಳಗೊಂಡ ಚಾರ್ಟ್‌ಗಳನ್ನು ಚಿತ್ರಗಳ ರೂಪದಲ್ಲಿ ಬಿಡಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಮಕ್ಕಳಿಗೆ ಅವುಗಳ ಕುರಿತು ಮಾಹಿತಿ ನೀಡಲಾಗುತ್ತಿದೆ. ಇದೇ ಕೊಠಡಿಯಲ್ಲಿ ವೈಫೈ ಸಂಪರ್ಕದೊಂದಿಗೆ ಟಿವಿಯೊಂದನ್ನು ಅಳವಡಿಸಿ ಮಕ್ಕಳಿಗೆ ‘ಸ್ಮಾರ್ಟ್‌ ತರಗತಿ’ಗಳ ಮೂಲಕ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾಮದೇವ ಚವಾಣ ಮತ್ತು ಉಪಾಧ್ಯಕ್ಷ ಭಾಸ್ಕರ್ ಎಂ.ಕೆ. ತಿಳಿಸಿದರು.

‘1974ರಲ್ಲಿ ಶಾಲೆಯ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಆವರಣದಲ್ಲಿ ಬಗೆ ಬಗೆಯ ಅಲಂಕಾರಿಕ ಸಸ್ಯಗಳನ್ನು ಬೆಳೆಸಿ ಪರಿಸರವನ್ನು ಸುಂದರಗೊಳಿಸಲಾಗಿದೆ. ಪ್ರತಿ ವರ್ಷ ಮಕ್ಕಳಿಗೆ ನೋಟ್‌ಬುಕ್‌, ಕಲಿಕಾ ಸಾಮಗ್ರಿ, ಬ್ಯಾಗ್‌ಗಳನ್ನು ವಿತರಿಸಲಾಗುತ್ತಿದೆ. ಶಾಲೆಯಲ್ಲಿ ಕಲಿತಿರುವ ಅನೇಕ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕರು ವೈದ್ಯರಾಗಿ ಹೆಸರು ಗಳಿಸಿದ್ದಾರೆ. ಎಂಜಿನಿಯರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದಿ ಹಾಗೂ ಮರಾಠಿ ಚಿತ್ರರಂಗದ ಖ್ಯಾತ ಅಭಿನೇತ್ರಿ ಸುಲೋಚನಾ ಲಾಟ್ಕರ್‌ ಅವರೂ ಇದೇ ಶಾಲೆಯ ಪ್ರತಿಭೆ’ ಎಂದು ಮುಖ್ಯಶಿಕ್ಷಕ ಪಿ.ಎಸ್‌. ಕುರಳುಪ್ಪೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT