ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಖಾನಾಪುರ ತಾಲ್ಲೂಕು ಆಸ್ಪತ್ರೆ

ರೋಗಿಗಳಿಗೆ ತೊಂದರೆ
Last Updated 3 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕು ಕೇಂದ್ರದ ದೊಡ್ಡ ಮತ್ತು ಏಕೈಕ ಸರ್ಕಾರಿ ಆಸ್ಪತ್ರೆಯಾದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಸುರಕ್ಷತೆ, ಸ್ವಚ್ಛತೆ ಸೇರಿದಂತೆ ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲ.

ತಾಲ್ಲೂಕು ಆಸ್ಪತ್ರೆ ಗರಿಷ್ಠ 50 ಒಳರೋಗಿಗಳಿಗೆ ಉಪಚಾರ ನೀಡುವ ವ್ಯವಸ್ಥೆ ಹೊಂದಿದೆ. ಆದರೆ, ಇತರ ತಾಲ್ಲೂಕು ಕೇಂದ್ರಗಳಂತೆ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರುವ ಅವಕಾಶದಿಂದ ವಂಚಿತವಾಗಿದೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ವಸತಿಗೃಹ ಕೊರತೆ, ವೈದ್ಯರಿಗೆ ರೆಸ್ಟ್ ರೂಂ, ಸಮರ್ಪಕ ನೀರು ಸರಬರಾಜು, ವಿಶೇಷ ನಿಗಾ ಘಟಕ, ವಿಶೇಷ ಕೊಠಡಿಗಳಿಲ್ಲ. ಪಹರೆಗಾರರು, ಸ್ವಚ್ಛತಾ ಕಾರ್ಮಿಕರ ಕೊರತೆಯಿದೆ.

ಜಿಲ್ಲಾಸ್ಪತ್ರಗೆ ಕಳುಹಿಸುತ್ತಾರೆ:ತಾಲ್ಲೂಕಿನ ಗುಡ್ಡಗಾಡು ಹಾಗೂ ಅರಣ್ಯ ಪ್ರದೇಶಗಳ ಜನರ ಆರೋಗ್ಯ ಸೇವೆಯಲ್ಲಿ ನಿರತ ಈ ಆಸ್ಪತ್ರೆಗೆ ನಿತ್ಯ ಸರಾಸರಿ 400-600 ರೋಗಿಗಳು ಬರುತ್ತಾರೆ. ಎಂ.ಡಿ. ಮೆಡಿಸಿನ್ ವೈದ್ಯರ ಕೊರತೆಯಿದೆ. ಉಳಿದಂತೆ ಆಸ್ಪತ್ರೆಯಲ್ಲಿ ರಸ್ತೆ ಅಪಘಾತ, ಕಾಡು ಪ್ರಾಣಿಗಳ ದಾಳಿ, ಹಾವು ಕಡಿತ, ಜೇನ್ನೊಣ ಕಡಿತ ಮತ್ತಿತರ ಕಾರಣಗಳಿಂದ ನಿತ್ಯ ಹತ್ತಾರು ರೋಗಿಗಳು ದಾಖಲಾಗುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಆಕ್ಸಿಜನ್, ಇಸಿಜಿ, ವೆಂಟಿಲೇಟರ್, ಐಸಿಯು ಮೊದಲಾದ ಸೌಲಭ್ಯಗಳಿಲ್ಲದ ಕಾರಣ ಪ್ರಥಮ ಚಿಕಿತ್ಸೆ ನೀಡಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಲಾಗುತ್ತದೆ.

ಆಸ್ಪತ್ರೆಯಲ್ಲಿ ಸ್ರೀಯರು, ಮಕ್ಕಳು, ವಿಶೇಷ ರೋಗಿಗಳು ಹೀಗೆ ಪ್ರತ್ಯೇಕ ರೋಗ ತಪಾಸಣೆಗೆ ಪ್ರತ್ಯೇಕ ಕೋಣೆಗಳ ಕೊರತೆ ಇದೆ. ಹೀಗಾಗಿ, ವೈದ್ಯರು ಒಂದೇ ಕೋಣೆಯಲ್ಲಿ ಕುಳಿತು ಎಲ್ಲ ರೋಗಿಗಳನ್ನು ಪರೀಕ್ಷಿಸಬೇಕಾದ ಅನಿವಾರ್ಯತೆ ಇದೆ. ವೈದ್ಯರು ಹಾಗೂ ಸಿಬ್ಬಂದಿಗೆ ಸೂಕ್ತ ವಸತಿ ಗೃಹಗಳಿಲ್ಲದ ಕಾರಣ ಆಸ್ಪತ್ರೆಯ ಮುಖ್ಯ ವೈದ್ಯರು, ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಬೆಳಗಾವಿಯಿಂದ ಬರುತ್ತಾರೆ.

ದುರ್ನಾತ:ಸಾರ್ವಜನಿಕರು ಆಸ್ಪತ್ರೆ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಆವರಣ ಗಲೀಜಿನಿಂದ ಕೂಡಿದ್ದು, ದುರ್ನಾತ ಬೀರುತ್ತಿದೆ. ತ್ಯಾಜ್ಯ ವಿಲೇವಾರಿಯೂ ಅಷ್ಟಕಷ್ಟೆ. ಈ ಹಿಂದೆ ಆಸ್ಪತ್ರೆ ಆವರಣದಲ್ಲಿದ್ದ ಹಳೆದ ವಸತಿಗೃಹಗಳನ್ನು ಕೆಡವಲಾಗಿದೆ. ಶೀಘ್ರದಲ್ಲಿ ಹೊಸ ವಸತಿಗೃಹಗಳನ್ನು ನಿರ್ಮಿಸಿಕೊಡಬೇಕು ಎನ್ನುವ ಬೇಡಿಕೆ ಆಸ್ಪತ್ರೆಯ ಸಿಬ್ಬಂದಿಯದ್ದಾಗಿದೆ.

ಪ್ರತಿ ತಿಂಗಳು ಸರಾಸರಿ 200ರಿಂದ 220 ಹೆರಿಗೆಗಳಾಗುತ್ತವೆ. ಅವುಗಳ ಪೈಕಿ 18 ರಿಂದ 20 ಸಿಜೇರಿಯನ್ ಹೊರತುಪಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಸಾಮಾನ್ಯ ಹೆರಿಗೆಗೆ ಒತ್ತು ನೀಡಲಾಗುತ್ತಿದೆ. ಪ್ರತಿ ತಿಂಗಳು ಅಂದಾಜು 70ರಿಂದ 80 ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಹೀಗಾಗಿ ಇಡೀ ತಾಲ್ಲೂಕಿನಲ್ಲೇ ಸಾಮಾನ್ಯ ಮತ್ತು ಸುರಕ್ಷಿತ ಹೆರಿಗೆಗೆ ಈ ಆಸ್ಪತ್ರೆ ಹೆಸರುವಾಸಿಯಾಗಿದೆ.

‘ಕ್ಷೇತ್ರದ ಶಾಸಕರು (ಡಾ.ಅಂಜಲಿ ನಿಂಬಾಳ್ಕರ್‌) ಸ್ವತಃ ವೈದ್ಯೆಯಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಡವರು ಮತ್ತು ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಸೌಲಭ್ಯ ಇಲ್ಲದ ಕಾರಣ ಗಂಭೀರ ಸ್ವರೂಪದ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಲಾಗುತ್ತಿದೆ. ಇಲ್ಲಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂದು ನಿವಾಸಿ ರಾಜಕುಮಾರ ಕಂಚಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT