ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರಲ್ಲಿ ಸೋಯಾಅವರೆ ಬೀಜೋತ್ಪಾದನೆ: ನೀತಾ ಖಾಂಡೇಕರ

Last Updated 6 ಜನವರಿ 2021, 16:01 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಸೋಯಾಅವರೆಯನ್ನು ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುತ್ತಿದೆ. ಈ ಭಾಗದ ಬಿತ್ತನೆ ಬೀಜ ಬೇಡಿಕೆಯನ್ನು ಪೂರೈಸಲು ಹಿಂಗಾರು ಹಂಗಾಮಿನಲ್ಲಿ ಬೀಜೋತ್ಪಾದನೆ ಕಾರ್ಯಕ್ರಮ ಆರಂಭಿಸಲಾಗುವುದು’ ಎಂದು ಇಂದೋರ್‌ನ ಐಸಿಎಆರ್-ಭಾರತೀಯ ಸೋಯಾಅವರೆ ಸಂಶೋಧನಾ ಸಂಸ್ಥೆಯ ನಿರ್ದೇಶಕಿ ನೀತಾ ಖಾಂಡೇಕರ ತಿಳಿಸಿದರು.

ಬೈಲಹೊಂಗಲ ತಾಲ್ಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಚಚಡಿಯ ಸರ್ದಾರ್‌ ವಿ.ಜಿ. ದೇಸಾಯಿ ಪ್ರತಿಷ್ಠಾನದ ಸಹಯೋಗದಲ್ಲಿ ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ದೇಸಾಯಿ ವಾಡೆಯಲ್ಲಿ ನಡೆದ ಸೋಯಾಅವರೆ ಹಾಗೂ ಗೋಧಿ ಬೆಳೆಗಳ ಕುರಿತ ಕಿಸಾನ್ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷ ಹಾಗೂ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಿ.ಆರ್. ಪಾಟೀಲ ಮಾತನಾಡಿ, ‘ಕೃಷಿ ವಿಜ್ಞಾನ ಕೇಂದ್ರದಿಂದ ಸೋಯಾಅವರೆ ಹಾಗೂ ಗೋಧಿ ಬೆಳೆಗಳ ಅಧಿಕ ಇಳುವರಿ ನೀಡುವ ವಿವಿಧ ತಳಿಗಳ ಪ್ರಯೋಗ ನಡೆಯುತ್ತಿದೆ. ಈ ವಲಯಕ್ಕೆ ಸೂಕ್ತ ತಳಿಯ ಬೀಜೋತ್ಪಾದನೆ ಕೈಗೊಂಡು ಈ ಭಾಗದ ರೈತರಿಗೆ ನೀಡುವ ಕೆಲಸವನ್ನು ಕೇಂದ್ರ ಮಾಡಲಿದೆ’ ಎಂದು ಹೇಳಿದರು.

ಕೋರೆ ಕಾರಣ: ‘ಈ ಭಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿ ಕೆಎಲ್‌ಇ ಸಂಸ್ಥೆಯು ರೈತರಿಗೆ ಸೇವೆ ಸಲ್ಲಿಸಲು ಕೃಷಿ ಪ್ರೇಮಿ ಪ್ರಭಾಕರ ಕೋರೆ ಕಾರಣರಾಗಿದ್ದಾರೆ. ಚಚಡಿಯ ದೇಸಾಯಿ ಮನೆತನವು ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ ಮತ್ತು ಐತಿಹಾಸಿಕವಾಗಿದೆ. ಇಂದಿಗೂ ಈ ಗ್ರಾಮದಲ್ಲಿ ನಾಗರಾಜ ದೇಸಾಯಿ ಅವರುಸಮಾಜ ಸೇವೆ ಮುಂದುವರಿಸಿರುವುದು ಅಭಿನಂದನಾರ್ಹ’ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಆರ್.ಆರ್. ಹಂಚಿನಾಳ ಗೋಧಿ ತಳಿಗಳ ಕುರಿತು ವಿವರಿಸಿದರು. ಸಹ ವಿಸ್ತರಣಾ ನಿರ್ದೇಶಕ ಡಾ.ಪಿ.ಎಸ್. ಹೂಗಾರ ಗೋಧಿ ಮತ್ತು ಸೋಯಾಅವರೆಯಲ್ಲಿ ಕಂಡು ಬರುವ ರೋಗ, ಕೀಟದ ನಿರ್ವಹಣೆ ಕುರಿತು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಸಲಹೆಗಾರ ಡಾ.ವಿ.ಎಸ್. ಕೋರಿಕಂಥಿಮಠ, ‘ರೈತರು ಹೆಚ್ಚು ಆದಾಯ ಪಡೆಯಲು ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು’ ಎಂದು ಸಲಹೆ ನೀಡಿದರು.

ಮೌಲ್ಯವರ್ಧಿಸಿ: ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ‘ರೈತರು ಉತ್ಪಾದಕರ ಕಂಪನಿಯನ್ನು ಪ್ರಾರಂಭಿಸಿ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮೌಲ್ಯವರ್ಧಿಸಿ ಹೆಚ್ಚು ಆದಾಯ ಪಡೆಯಬೇಕು’ ಎಂದು ತಿಳಿಸಿದರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಬೆಂಗಳೂರಿನ ‘ಅಟಾರಿ’ ಸಂಸ್ಥೆಯ ನಿರ್ದೇಶಕ ಡಾ.ವಿ. ವೆಂಕಟಸುಬ್ರಮಣಿಯನ್‌, ‘ರೈತರು ಕೃಷಿ ವಿಜ್ಞಾನ ಕೇಂದ್ರದಿಂದ ತಂತ್ರಜ್ಞಾನ ಮಾರ್ಗದರ್ಶನ ಪಡೆದು ಅಧಿಕ ಇಳುವರಿ ಪಡೆಯಲು ಪ್ರಯತ್ನಿಸಬೇಕು’ ಎಂದರು.

ಇದೇ ವೇಳೆ, ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಕಟಗೊಂಡ ಸೋಯಾಅವರೆ ಬೆಳೆಯ ತಾಂತ್ರಿಕತೆ ಹಾಗೂ ಕೃಷಿ ಕಾಯ್ದೆ 2020 ಕುರಿತ ಹಸ್ತಪ್ರತಿಗಳನ್ನು ಬಿಡುಗಡೆ ಮಾಡಲಾಯಿತು. ವಿವಿಧ ಗೋಧಿ ತಳಿಗಳ ಪರೀಕ್ಷಾ ತಾಕುಗಳಿಗೆ ಭೇಟಿ ನೀಡಲಾಯಿತು.

ಗೋಧಿ ತಳಿ ವಿಜ್ಞಾನಿ ಸುಮಾ ಬಿರಾದಾರ ಬೆಳೆಯ ತಾಂತ್ರಿಕತೆಗಳನ್ನು ವಿವರಿಸಿದರು. ಸೋಯಾಅವರೆ ಸಂಶೋಧನಾ ಸಂಸ್ಥೆಯ ಡಾ.ಸಂಜೀವ ಗುಪ್ತಾ, ಉಪ ಕೃಷಿ ನಿರ್ದೇಶಕ ಎಚ್.ಡಿ. ಕೋಳೇಕರ, ಉದಯಕುಮಾರ ದೇಸಾಯಿ, ವಿಜ್ಞಾನಿಗಳಾದ ಜಿ.ಬಿ. ವಿಶ್ವನಾಥ, ಡಾ.ಎಸ್.ಎಸ್. ಹಿರೇಮಠ ಇದ್ದರು.

ವಿಜ್ಞಾನಿ ಎಸ್.ಎಂ. ವಾರದ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥೆ ಶ್ರೀದೇವಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ದೇಸಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT