ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಗುಡಿ, ದೇಗುಲಗಳ ಹಳ್ಳಿ; 12ನೇ ಶತಮಾನದ ದೇಗುಲ ಇಲ್ಲಿಯ ವೈಶಿಷ್ಟ್ಯ

Last Updated 18 ಸೆಪ್ಟೆಂಬರ್ 2021, 19:45 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಿತ್ತೂರು ಮೊದಲಿನಿಂದಲೂ ಗುಡಿ-ಗೋಪುರ, ಶಿಲ್ಪಕಲೆಗೆ ಹೆಸರಾದ ನಾಡು. ಕಿತ್ತೂರು ಸಂಸ್ಥಾನ ಆದ್ಯಗುರು ಗುರುಸಿದ್ದೇಶ್ವರ ಮೂಲಮಠ ಇಲ್ಲಿದೆ. ಈ ಭಾಗದ ಪ್ರಖರ ಸನ್ಯಾಸಿ ಗುರು ಮಡಿವಾಳೇಶ್ವರ ಕಾಲಿಟ್ಟ ಪ್ರತಿ ಊರಿನಲ್ಲೂ ಗುಡಿಗಳು ನಿರ್ಮಾಣಗೊಂಡಿರುವ ಇತಿಹಾಸವಿದೆ.

ತಾಲ್ಲೂಕಿನ ದೇಗುಲಹಳ್ಳಿ ಹೆಸರಿಗೆ ತಕ್ಕ ಹಾಗೆಯೇ ದೇಗುಲಗಳ ತವರೂರು. ಕದಂಬರ ಕಾಲದ ದೇಗುಲ ಇಲ್ಲಿದೆ. ಜೈನ ಬಸದಿ, ಮಸೀದಿ ನಿರ್ಮಾಣ ಮಾಡಲಾಗಿದೆ. ಎಲ್ಲ ಜಾತಿ– ಜನಾಂಗಗಳ ಗುಡಿ, ದೇಗುಲಗಳನ್ನು ಹೊಂದಿರುವ ಪುಟ್ಟ ಗ್ರಾಮ ದೇಗುಲಹಳ್ಳಿ ಈ ಭಾಗದಲ್ಲಿ ಹೆಚ್ಚು ಗಮನ ಸೆಳೆಯುತ್ತದೆ.

ಕದಂಬರ ಕಾಲದ್ದು

‘ದೇಗುಲಹಳ್ಳಿಯಲ್ಲಿ ಕದಂಬರ ಕಾಲದ ಈಶ್ವರ ದೇವಾಲಯವಿದೆ. ಇದು 12ನೇ ಶತಮಾನಕ್ಕೆ ಸೇರಿದ ಪುರಾತನ ದೇವಾಲಯ’ ಎಂದು ಪುರಾತತ್ವ ಮತ್ತು ಪರಂಪರೆ ಇಲಾಖೆಯ ಕ್ಯುರೇಟರ್ ರಾಘವೇಂದ್ರ ತಿಳಿಸುತ್ತಾರೆ.

‘ಶಿಲ್ಪಕಲೆಯ ಶ್ರೀಮಂತಿಕೆಯನ್ನು ಸಾರುವ ದೇವಾಲಯವು ವೈಶಿಷ್ಟ್ಯತೆಯಿಂದ ಕೂಡಿದೆ. ಗರ್ಭಗುಡಿಯಲ್ಲಿ ಅಲಂಕೃತ ಮಂಟಪಗಳು, ಅರ್ಧಗಂಬಗಳು, ಅಲಂಕೃತ ಭಾಗದಲ್ಲಿ ಕಾಲ್ಪನಿಕ ಪ್ರಾಣಿ ಚಿತ್ರಗಳು ಸೇರಿ ಅನೇಕ ವಿಶೇಷತೆಯನ್ನು ಇದು ಒಳಗೊಂಡಿದೆ’ ಎನ್ನುತ್ತಾರೆ.

‘ಗರ್ಭಗುಡಿಯ ಮೇಲ್ಭಾಗದಲ್ಲಿ ನಾಗರ ದ್ರಾವಿಡ ಪ್ರತಿಕೃತಿ ಕೆತ್ತಲಾಗಿದೆ. ಇದೇ ದೇವಾಲಯದಲ್ಲಿ 18ನೇ ಶತಮಾನದಲ್ಲಿ ಕನ್ನಡ ಭಾಷೆಯಲ್ಲಿ ಕೆತ್ತಲಾಗಿರುವ ಶಾಸನವಿದೆ. ಇದರಲ್ಲಿ ಚಂದೂಪಾ ನಾಯಕ ಅಥವಾ ಗಂಟೆನಾಯಕನ ಉಲ್ಲೇಖವಿದೆ. ಈತ ಮರೆಹಾಳ, ನಾಗಲಾಪುರ, ತುರಮರಿ ಮತ್ತು ದೇಗುಲಹಳ್ಳಿಗಳ ಮುಖ್ಯಸ್ಥನಾಗಿದ್ದ. ಈತನಿಗಿದ್ದ ಐವರು ಮಕ್ಕಳ ಹೆಸರುಗಳನ್ನು ಶಾಸನದಲ್ಲಿ ಉಲ್ಲೇಖ ಮಾಡಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಅವರು.

ಗುಡಿಗಳ ತವರು

‘ಪುರಾತನವಾದ ಈ ದೇಗುಲ ಅಲ್ಲದೇ ನಮ್ಮೂರಿನಲ್ಲಿ ಹಲವು ಜಾತಿ, ಧರ್ಮದ ಗುಡಿಗಳಿವೆ’ ಎನ್ನುತ್ತಾರೆ ಗ್ರಾಮದ ಮುಖಂಡ ಸುನೀಲ ಬಜೆಣ್ಣವರ.

‘ಕಿತ್ತೂರು ಸಂಸ್ಥಾನ ತೊರೆದು ಹೋದ ನಂತರ ಪ್ರಖರ ಸನ್ಯಾಸಿ ಎಂದೇ ಹೆಸರಾದ ಗುರು ಮಡಿವಾಳೇಶ್ವರ ಇಲ್ಲಿಗೆ ಆಗಮಿಸಿದ್ದರು ಎಂದು ಹಿರಿಯರು ಹೇಳುತ್ತಾರೆ. ಈ ಗುರುವಿನ ಹೆಸರಿನಲ್ಲಿ ಮಠ ಸ್ಥಾಪನೆ ಮಾಡಲಾಗಿದೆ. ಪ್ರತಿ ವರ್ಷ ಪ್ರವಚನ, ಜಾತ್ರೆ ನಡೆಯುತ್ತದೆ’.

‘ಈಶ್ವರ ದೇವಸ್ಥಾನದಲ್ಲಿಯೇ ಬಸವಣ್ಣನ ಅಂದವಾದ ಮೂರ್ತಿಯಿದೆ. ಇದು ಜಕಣಾಚಾರಿ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ. ಹನುಮಂತ ದೇವರು, ಗ್ರಾಮದೇವತೆ, ಜೈನ ಬಸದಿ, ಜೈನ ಸಮಾಜದ ತಪಸ್ವಿ ಶಮೋಶರಣನ ಗುಡಿ, ನಾಯ್ಕರ ಸಮಾಜದ ಮಂಗಳಮುಡೆವ್ವ, ಕರೆಮ್ಮ, ಪಾಂಡುರಂಗ ವಿಠ್ಠಲ ಗುಡಿ, ಮಸೀದಿ ಕೂಡಾ ಈ ಊರಿನಲ್ಲಿದೆ. ಎಲ್ಲರೂ ಉತ್ತಮ ಬಾಂಧವ್ಯದಿಂದ ಬಾಳುತ್ತಿದ್ದಾರೆ’ ಎಂದು ಹೇಳಿದರು.

‘ಹೊಸ ಮನೆ ನಿರ್ಮಾಣಕ್ಕಾಗಿ ಗುಂಡಿ ತೆಗೆಯುವಾಗ ಕೆಲ ಭಿನ್ನ ಮೂರ್ತಿಗಳು ದೊರೆತಿವೆ. 4 ದಶಕದ ಹಿಂದೆ ಪಾರ್ಶನಾಥ ಮೂರ್ತಿ ಸಿಕ್ಕಿತ್ತು. ತೀರ್ಥಂಕರ ವಿಗ್ರಹವೊಂದು ಇತ್ತೀಚೆಗೆ ದೊರಕಿತ್ತು’ ಎಂದು ಮಾಹಿತಿ ನೀಡಿದರು.

ಸಂಶೋಧನೆ ನಡೆಯಲಿ

ದೇಗುಲಹಳ್ಳಿ ಗ್ರಾಮದಲ್ಲಿ ಮಂಗಳಮುಡೆವ್ವ ದೇವತೆ ಗುಡಿ ಇದೆ. ರಾಜ್ಯದಲ್ಲಿಯೇ ಈ ದೇವತೆ ಗುಡಿ ವಿರಳ ಎಂದು ಹೇಳುತ್ತಾರೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಆಗಬೇಕಿದೆ.

– ಸುನೀಲ ಬಜೆಣ್ಣವರ, ಮುಖಂಡ, ದೇಗುಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT