ಮಂಗಳವಾರ, ಸೆಪ್ಟೆಂಬರ್ 21, 2021
26 °C
ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿಕೆ

ಕೆಎಲ್‌ಇ ಕ್ಯಾನ್ಸರ್‌ ಆಸ್ಪತ್ರೆ ಫೆಬ್ರುವರಿಗೆ ಸಿದ್ಧ; ಪ್ರಭಾಕರ ಕೋರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೆಎಲ್‌ಇ ಸಂಸ್ಥೆಯಿಂದ ನಿರ್ಮಿಸಲಾಗುತ್ತಿರುವ ಕ್ಯಾನ್ಸರ್‌ ಆಸ್ಪತ್ರೆಯನ್ನು ಫೆಬ್ರುವರಿಗೆ ಜನ ಸೇವೆಗೆ ಸಮರ್ಪಿಸಲಾಗುವುದು’ ಎಂದು ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು.

ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹಿಂಬದಿಯಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಪ್ರಗತಿಯನ್ನು ಸೋಮವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಚಿಕಿತ್ಸೆಗಾಗಿ ಅಲೆದಾಡುತ್ತಾ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಆದ್ದರಿಂದ ಗುಣಮಟ್ಟದ ಚಿಕಿತ್ಸೆ ನೀಡಲು ಸುಸಜ್ಜಿತ ಹಾಗೂ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳುಳ್ಳ ಆಸ್ಪತ್ರೆ ಸಜ್ಜುಗೊಳಿಸಲಾಗುತ್ತಿದೆ’ ಎಂದು ಹೇಳಿದರು.

‘₹ 200 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 200 ಹಾಸಿಗೆಗಳ ಸಾಮರ್ಥ್ಯದ ಹಾಸಿಗೆ ಇದಾಗಿದೆ. ಕಟ್ಟಡದ ಕಾಮಗಾರಿ ಇದೇ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. ಫೆಬ್ರುವರಿ ವೇಳೆಗೆ ಎಲ್ಲ ಅಗತ್ಯ ಸಲಕರಣೆಗಳನ್ನೂ ಜೋಡಿಸಿ ಕಾರ್ಯಾರಂಭಿಸಲಾಗುವುದು’ ಎಂದು ತಿಳಿಸಿದರು.

‘ನಮ್ಮ ಆಸ್ಪತ್ರೆಯಲ್ಲಿ ಈಗಾಗಲೇ ನಿತ್ಯ ಸರಾಸರಿ 40 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಂದೆ ಕ್ಯಾನ್ಸರ್‌ ಸಂಬಂಧಿತ ಎಲ್ಲ ರೀತಿಯ ಚಿಕಿತ್ಸೆಯನ್ನೂ ನೀಡಲಾಗುವುದು. 100ಕ್ಕೂ ಅಧಿಕ ಮಂದಿಗೆ ಕಿಮೋಥೆರಪಿ ನೀಡಬಹುದು. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯೂ ಆಗಲಿದೆ’ ಎಂದರು.

‘ಸದ್ಯಕ್ಕೆ ರೆಡಿಯೋಥೆರಪಿ ನೀಡಲು 3 ಯಂತ್ರೋಪಕರಣಗಳು ಹಾಗೂ ಶಸ್ತ್ರಚಿಕಿತ್ಸೆಗೆ ಅಗ್ಯತವಿರುವ ಅತ್ಯಾಧುನಿಕ ಕೊಠಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಪ್ರಸ್ತುತ ಪ್ರತಿ ತಿಂಗಳು ಸರಾಸರಿ 130 ರೋಗಿಗಳು ಹೊಸದಾಗಿ ಕಂಡುಬರುತ್ತಿದ್ದಾರೆ. ಅವರಿಗೆ ಒಂದೇ ಸೂರಿನಡಿ ಎಲ್ಲ ವಿಧವಾದ ಚಿಕಿತ್ಸೆ ನೀಡಲು ಈ ಆಸ್ಪತ್ರೆಯು ಸಹಕಾರಿಯಾಗಲಿದೆ. ಸೂಕ್ತ ಚಿಕಿತ್ಸೆ ದೊರೆಯಲಿಲ್ಲ ಎನ್ನುವ ಕೊರಗು ಉಳಿಯಬಾರದು. ಅದಕ್ಕಾಗಿ ಈ ಭಾಗದ ಜನರಿಗೆ ಸಂಸ್ಥೆ ನೆರವಾಗುತ್ತಿದೆ’ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕರಾದ ಡಾ.ವಿ.ಎಸ್. ಸಾಧುನವರ, ಶಂಕರಣ್ಣ ಮುನವಳ್ಳಿ, ಎಸ್.ಸಿ. ಮೆಟಗುಡ್, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಕುಲಪತಿ ಡಾ.ವಿವೇಕ ಸಾವೋಜಿ, ವೈಜಾಗನ ಟಾಟಾ ಸ್ಮಾರಕ ಕ್ಯಾನ್ಸರ್‌ ಆಸ್ಪತ್ರೆ ನಿರ್ದೇಶಕ ಡಾ.ಉಮೇಶ ಮಹಾಂತಶೆಟ್ಟಿ, ಡಾ.ಕುಮಾರ ವಿಂಚುರಕರ, ಡಾ.ಇಮ್ತಿಯಾಜ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು