ಗುರುವಾರ , ಮೇ 13, 2021
39 °C
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಶಕ್ಕೆ ಆಕ್ರೋಶ

ಕೊರೊನಾ ರಾತ್ರಿ ಮಾತ್ರ ಹರಡುತ್ತದೆ ಎಂದ ವಿಜ್ಞಾನಿ ಫೊಟೊ ಕೊಡಿ: ಡಿ.ಕೆ. ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗಿರುವ ಹೋರಾಟದ ಹಕ್ಕು ಮೊಟಕುಗೊಳಿಸುತ್ತಿರುವುದು ಸರಿಯಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ರೈತ ಅಥವಾ ಕಾರ್ಮಿಕ ಮುಖಂಡರಿಗೆ ಚರ್ಚಿಸಲು ಅವಕಾಶ ಇರಬೇಕು. ಮುಷ್ಕರನಿರತ ಸಾರಿಗೆ ನೌಕರರ ಬಳಿಗೆ ಸರ್ಕಾರವೇ ಹೋಗಬೇಕು ಅಥವಾ ಮುಖಂಡರನ್ನು ಕರೆಸಿಕೊಂಡು ಸಮಾಲೋಚಿಸಿ ಸಮಸ್ಯೆ ಪರಿಹರಿಸಬೇಕು. ಈ ರೀತಿ ಬಂಧಿಸುವುದು ಸರಿಯಲ್ಲ. ದೆಹಲಿಯಲ್ಲಿ ಮಾಡಿದಂತೆ ಇಲ್ಲೂ ಮಾಡೋಣ ಎಂದು ಸರ್ಕಾರ ಮುಂದಾಗಿದೆ. ಇದು ಜಾಸ್ತಿ ದಿನ ಉಳಿಯುವುದಿಲ್ಲ. ಪೊಲೀಸರನ್ನು ಬಳಸಿಕೊಂಡು ಹೋರಾಟ ಹತ್ತಿಕ್ಕುವುದಕ್ಕೆ ಯಾವ ದರ್ಬಾರ್‌ ಎಂದು ಕರೆಯುವುದು?’ ಎಂದು ಆಕ್ರೋಶದಿಂದ ಕೇಳಿದರು.

‘ಕೊರೊನಾ ಹಗಲಲ್ಲಿ ಹರಡುವುದಿಲ್ಲ; ರಾತ್ರಿ ಮಾತ್ರ ಹರಡುತ್ತದೆ ಎಂದು ಯಾವ ವಿಜ್ಞಾನಿ ಹೇಳಿದರೂ ತಿಳಿಸಿದರೆ ಅವರ ಫೋಟೊವನ್ನು ನಾವೂ ಇಟ್ಟುಕೊಳ್ಳುತ್ತೇವೆ. ರಾತ್ರಿ ಕರ್ಫ್ಯೂ ಮಾಡಿ ಆರ್ಥಿಕತೆ ಹಾಳು ಮಾಡುತ್ತಿದ್ದಾರೆ. ಮಾನಸಿಕವಾಗಿ ಪ್ರತಿಯೊಬ್ಬರನ್ನೂ ಕುಂದಿಸುತ್ತಿದ್ದಾರೆ. ಹಗಲಲ್ಲಿ ಕೊರೊನಾ ಪಸರಿಸುವುದಿಲ್ಲವೇ? ಅವೈಜ್ಞಾನಿಕ ನಿರ್ಧಾರಗಳಿವು. ಜನ ಈ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ’ ಎಂದು ಟೀಕಿಸಿದರು.

‘ಲಕ್ಷ್ಮಣ ಸವದಿ ಸಾರಿಗೆ ಮಂತ್ರಿ ಆದಾಗಿನಿಂದ ಕೈಗೊಂಡ ನಿರ್ಧಾರಗಳೆಲ್ಲ ತಪ್ಪಾಗಿವೆ. ನೌಕರರು ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಮೊದಲು ಆ ನೌಕರರಿಗೆ ಸಂಬಳ ಕೊಡುವುದಕ್ಕೆ ಹೇಳಿ’ ಎಂದು ತಿರುಗೇಟು ನೀಡಿದರು.

‘ಸತೀಶ ಜಾರಕಿಹೊಳಿ ಹಿಂದೂ ವಿರೋಧಿಯಾಗಿದ್ದು, ಠೇವಣಿ ಕಳೆದುಕೊಳ್ಳಲಿದ್ದಾರೆ’ ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಅಭ್ಯರ್ಥಿ ದೊಡ್ಡ ನಾಯಕ. ಅವರು ಮೌಢ್ಯಗಳ ವಿರುದ್ಧ ಹೋರಾಡುತ್ತಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ನಂಬಿಕೆ ಇರುತ್ತದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲುತ್ತಾರೆ ಎಂಬ ಭಯದಿಂದ ಅರುಣ್ ಸಿಂಗ್ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ’ ಎಂದು ತಿರುಗೇಟು ನೀಡಿದರು. ‘ಅವರು ಅಗತ್ಯ ವಸ್ತುಗಳ ಬೆಲೆ ಇಳಿಸಲಿ, ನಂತರ ಅವರಿಂದ ಕಲಿಯೋಣ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು