ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಟಿಸಿಎಲ್‌ ನೇಮಕಾತಿ ಅಕ್ರಮ: ಹುಬ್ಬಳ್ಳಿಯಲ್ಲಿ ಪ್ರಮುಖ ಆರೋಪಿ ಸೆರೆ

Last Updated 2 ಸೆಪ್ಟೆಂಬರ್ 2022, 14:00 IST
ಅಕ್ಷರ ಗಾತ್ರ

ಬೆಳಗಾವಿ: ಕೆ‍ಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯ ಅಕ್ರಮದ ಪ್ರಮುಖ ಆರೋಪಿ ಸಂಜೀವ ಲಕ್ಷ್ಮಣ ಭಂಡಾರಿಯನ್ನು ಬೆಳಗಾವಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 13ಕ್ಕೆ ಏರಿದೆ.

ಈ ಆರೋಪಿ ಹಿಂದಿನ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ಎಸಗಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಕೆಪಿಟಿಸಿಎಲ್‌ ನೇಮಕಾತಿಯ ಅಕ್ರಮ ನಂತರ ತಲೆಮರೆಸಿಕೊಂಡಿದ್ದ.

‘ಹುಬ್ಬಳ್ಳಿ– ಧಾರವಾಡ ಪೊಲೀಸ್‌ ಕಮೀಷನರೇಟ್‌ನ ಬೆಂಡಿಗೇರಿ ಠಾಣೆಯ ಪೊಲೀಸರ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಲಾಗಿದ್ದು, ಗೋಕಾಕದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆರೋಪಿಯನ್ನು ಏಳು ದಿನಗಳವರೆಗೆ ಪೊಲೀಸ್‌ ವಶಕ್ಕೆ ನೀಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ಆಗಸ್ಟ್‌ 7ರಂದು ಗೋಕಾಕದಲ್ಲಿ ನಡೆದ ಪರೀಕ್ಷೆಯಲ್ಲಿ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ ಎಂಬಾತ ಸ್ಮಾರ್ಟ್‌ವಾಚ್‌ ಬಳಸಿ, ಪ್ರಶ್ನೆಪತ್ರಿಕೆ ಫೋಟೊ ತೆಗೆದು ಟೆಲಿಗ್ರಾಮ್‌ ಆ್ಯಪ್‌ ಮೂಲಕ ಹೊರಗೆ ಕಳುಹಿಸಿದ್ದ. ಈ ಬಗ್ಗೆ ಸಚಿನ್ ಎಂಬ ಇನ್ನೊಬ್ಬ ಅಭ್ಯರ್ಥಿ ದೂರು ನೀಡಿದ್ದ. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಈ ಅಕ್ರಮವು ಖಚಿತವಾಗಿತ್ತು. ವಿಶೇಷ ತಂಡದೊಂದಿಗೆ ಕಾರ್ಯ‍ಪ್ರವೃತ್ತರಾದ ಪೊಲೀಸರು, ಆ.22ರಂದು ಒಂಬತ್ತು ಮಂದಿ ಹಾಗೂ ಆ.24ರಂದು ಮೂವರು ಸೇರಿ ಒಟ್ಟು 12 ಆರೋಪಿಗಳನ್ನು ಬಂಧಿಸಿದ್ದರು.

ಗೋಕಾಕ ಮಾತ್ರವಲ್ಲದೇ, ಗದಗ ನಗರದ ಮುನ್ಸಿಪಲ್‌ ಕಾಲೇಜಿನಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ಹಾಗೂ ಅವರ ಮಗನನ್ನು ಈಗಾಗಲೇ ಬಂಧಿಸಲಾಗಿದೆ. ಬಂಧಿತರಲ್ಲಿ ಅಭ್ಯರ್ಥಿಗಳು, ಬ್ಲೂಟೂತ್‌ ಖರೀದಿಸಿದವರು, ಉತ್ತರ ರವಾನಿಸಿದವರೂ ಇದ್ದಾರೆ.

‘ಅಥಣಿಯೂ ಸೇರಿದಂತೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಅಕ್ರಮ ನಡೆದ ಅನುಮಾನ ಹುಟ್ಟಿವೆ. ಈ ಬಗ್ಗೆ ತಂಡ ಇನ್ನೂ ಶೋಧ ಕಾರ್ಯ ಮುಂದುವರಿಸಿದೆ’ ಎಂದು ಎಸ್ಪಿ ತಿಳಿಸಿದ್ದಾರೆ.

ಅಕ್ರಮಕ್ಕೆ ಬಳಸಿದ ಸ್ಮಾರ್ಟ್‌ವಾಚ್‌, ಬ್ಲೂಟೂತ್‌, ಮೊಬೈಲ್‌, ಪ್ರಿಂಟರ್‌, ಪ್ರಶ್ನೆಪತ್ರಿಕೆಯ ಪ್ರತಿಗಳು ಸೇರಿದಂತೆ ಹಲವು ದಾಖಲೆಗಳನ್ನೂ ‍ಪೊಲೀಸರು ಈ ಮುಂಚೆಯೇ ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT