ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಸ್ಮಶಾನದ ಜಮೀನು ವಿವಾದ: ಮಹಿಳೆಯರಿಂದ ಅಂತ್ಯಕ್ರಿಯೆ

Published 17 ಫೆಬ್ರುವರಿ 2024, 15:58 IST
Last Updated 17 ಫೆಬ್ರುವರಿ 2024, 15:58 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಕವಳೇವಾಡಿ ಗ್ರಾಮದಲ್ಲಿ ಶನಿವಾರ ಮಹಿಳೆಯರೇ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸ್ಮಶಾನದ ಜಮೀನು ವಿವಾದಕ್ಕೆ ಒಳಪಟ್ಟಿದ್ದರಿಂದ ಪುರುಷರು ಹಿಂಜರಿದರು.

ಕವಳೇವಾಡಿಯ ತುಕಾರಾಮ್ ಮೋರೆ ಅವರು ಅನಾರೋಗ್ಯದ ಕಾರಣ ಶುಕ್ರವಾರ ರಾತ್ರಿ ನಿಧನರಾದರು. ಸ್ಮಶಾನ ಭೂಮಿ ಇಲ್ಲದ ಕಾರಣ ಗ್ರಾಮಸ್ಥರು ಓಮನಿ ಗಾವಡೆ ಎಂಬುವರ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಮುಂದಾದರು. ಆದರೆ, ಓಮನಿ ಗಾವಡೆ ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಅಲ್ಲಿಯೇ ಶವ ಇಟ್ಟು ಪ್ರತಿಭಟನೆ ನಡೆಸಿದರು. ಗ್ರಾಮದ ಹಿರಿಯರು ಮತ್ತು ಪೊಲೀಸರು ಸಂಧಾನ ನಡೆಸಿದರೂ ಫಲಕಾರಿ ಆಗಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಶವವನ್ನು ಅಲ್ಲೇ ಬಿಟ್ಟು ಮನೆಗೆ ತೆರಳಿದರು.

ಆದರೆ, ಊರಿನ ಮಹಿಳೆಯರೆಲ್ಲ ಒಂದಾಗಿ ಮಂತ್ರಗಳನ್ನು ಹೇಳಿ, ಪೂಜೆ ಸಲ್ಲಿಸುವ ಮೂಲಕ ಅಂತ್ಯಕ್ರಿಯೆಗೆ ಮುಂದಾದರು. ಚಿತೆಯ ಮೇಲೆ ಶವ ಇಟ್ಟು ಅಗ್ನಿಸ್ಪರ್ಶ ಮಾಡಿದರು. ಆಗಲೂ ಓಮನಿ ಗಾವಡೆ ತೀವ್ರ ಆಕ್ಷೇಪಿಸಿದರು. ಆದರೆ, ಶವ ಸಂಪೂರ್ಣ ಭಸ್ಮ ಆಗುವವರೆಗೂ ಮಹಿಳೆಯರು ಸ್ಥಳದಲ್ಲೇ ಉಳಿದರು. ಮೃತ ವ್ಯಕ್ತಿಯ ಪುತ್ರಿ ಕೂಡ ಇದ್ದರು.

ನಂತರ ಸುದ್ದಿಗಾರರ ಜೊತೆ ಲಕ್ಷ್ಮಿ ಯಶವಂತಪುರಿ ಮಾತನಾಡಿ, ‘ಹಿರಿಯರ ಕಾಲದಿಂದ ಇದೇ ಜಾಗದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದೇವೆ. ಊರಲ್ಲಿ ಯಾರೇ ನಿಧನರಾದರೂ ಒಂದೇ ಜಾಗದಲ್ಲಿ ಹೂಳುವುದು, ಸುಡುವುದು ನಡೆದಿದೆ. ಈಗ ಓಮನಿ ಗಾವಡೆ ಅವರ ಅದು ತಮ್ಮ ಜಮೀನು, ಅಲ್ಲಿ ಅಂತ್ಯಕ್ರಿಯೆ ಮಾಡುವಂತಿಲ್ಲ ಎನ್ನುತ್ತಾರೆ. ಹೀಗೆ ಏಕಾಏಕಿ ವಿರೋಧಿಸಿದರೆ, ಶವಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕೇ? ಜಿಲ್ಲಾಧಿಕಾರಿ ಇದಕ್ಕೆ ಪರಿಹಾರ ಹುಡುಕಬೇಕು’ ಎಂದರು.

‘ಹಲವು ವರ್ಷಗಳಿಂದ ಗಾವಡೆ ಅವರ ಜಮೀನಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಇದನ್ನು ವಿರೋಧಿಸಿ ಗಾವಡೆ ಅವರು ನ್ಯಾಯಾಲಯ ಮೊರೆ ಹೋಗಿದ್ದರು. ಸ್ಮಶಾನದ ಜಮೀನು ಗಾವಡೆ ಅವರಿಗೆ ಸೇರಿದೆ ಎಂದು ನ್ಯಾಯಾಲಯ ಈಚೆಗೆ ಆದೇಶ ನೀಡಿದೆ. ಹೀಗಾಗಿ, ವಿವಾದವಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT