ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ದಿನಸಿ ಕಿಟ್ ಪಡೆಯಲು ನೂಕುನುಗ್ಗಲು: ಲಘು ಲಾಠಿಪ್ರಹಾರ

Last Updated 4 ಜೂನ್ 2020, 13:45 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕಾಡಾ ಕಚೇರಿ ಆವರಣದಲ್ಲಿ ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಗುರುವಾರ ವಿತರಿಸುತ್ತಿದ್ದ ಉಚಿತ ದಿನಸಿ ಕಿಟ್ ಪಡೆಯಲು ನೂಕುನುಗ್ಗಲು ಉಂಟು ಮಾಡಿದವರನ್ನು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕಚೇರಿಯೂ ಇಲ್ಲಿದೆ. ವಿತರಣೆ ಕಾರ್ಯಕ್ಕೆ ಸಚಿವರು ಹಾಗೂ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಚಾಲನೆ ನೀಡಿದ್ದರು. ಆಗ ಸರದಿ ಇತ್ತು. ಕ್ರಮೇಣ ನೂರಾರು ಕಾರ್ಮಿಕ ಹಾಗೂ ನೇಕಾರರು (ಬಹುತೇಕರು ಮಹಿಳೆಯರೇ ಇದ್ದರು) ಕಿಟ್ ಪಡೆಯಲು ಅಂತರವನ್ನೂ ಮರೆತು ಮುಗಿಬಿದ್ದರು. ಗೇಟ್ ಬಳಿಯಿಂದ ಓಡಿ ಬರುವಾಗ ಕೆಲವರು ಬಿದ್ದ ಘಟನೆಯೂ ನಡೆಯಿತು. ಜನರನ್ನು ನಿಯಂತ್ರಿಸಲು ಹಾಗೂ ಸರದಿಯಲ್ಲಿ ನಿಲ್ಲಿಸಲು ಚನ್ನಮ್ಮ ಪಡೆಯ ಮಹಿಳಾ ಪೊಲೀಸ್ ಸಿಬ್ಬಂದಿ ಪರದಾಡಿದರು.

ಕಿಟ್ ಸಿಗದಿರಬಹುದು ಎಂಬ ದಾವಂತದಿಂದ ಮುನ್ನುಗ್ಗುತ್ತಿದ್ದವರ ಮೇಲೆ ಪೊಲೀಸರು ಲಾಠಿ ಬೀಸಿದರು. ಬಳಿಕ ಗೇಟ್‌ ಒಳಗಡೆಗೆ ಎಲ್ಲರನ್ನೂ ಸೇರಿಸಿ ಸರದಿಯಲ್ಲಿ ಒಬ್ಬೊಬ್ಬರಾಗಿ ಹೊರ ಕಳುಹಿಸಿದರು. ಅವರಿಗೆ ಹೊರಗಡೆ ಟೆಂಪೊದಲ್ಲಿದ್ದ ಕಿಟ್‌ಗಳನ್ನು ವಿತರಿಸಲಾಯಿತು.

ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿದ್ದ 2ಸಾವಿರ ಕೂಲಿಕಾರ್ಮಿಕರು ಹಾಗೂ ನೇಕಾರರಿಗೆ ಕಿಟ್ ವಿತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಕೆಲವು ದಿನಗಳ ಹಿಂದೆ, ದಿನಸಿ ಕಿಟ್‌ ವಿತರಿಸಲಾಗುತ್ತಿದೆ ಎಂಬ ವದಂತಿ ನಂಬಿ ನೂರಾರು ಮಹಿಳೆಯರು ಈ ಕಚೇರಿ ಆವರಣದಲ್ಲಿ ಜಮಾಯಿಸಿದ್ದರು. ಸಚಿವ ಸುರೇಶ ಅಂಗಡಿ ಅವರಿಗೆ ಮುತ್ತಿಗೆ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT