ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಗತ್ತಿನ ಸಂಶೋಧನಾ ಕ್ಷೇತ್ರವನ್ನು ಭಾರತ ಮುನ್ನಡೆಸಲಿ: ಡಾ.ದೀಪಕ್ ವೈಕಾರ್

Published 19 ನವೆಂಬರ್ 2023, 14:20 IST
Last Updated 19 ನವೆಂಬರ್ 2023, 14:20 IST
ಅಕ್ಷರ ಗಾತ್ರ

ಬೆಳಗಾವಿ: ‘ಭಾರತದಲ್ಲಿ ಮಾನವ ಸಂಪನ್ಮೂಲ ಹೆಚ್ಚಿದೆ. ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿದ್ದು, ಮೂಲಸೌಕರ್ಯ ಕೂಡ ವೃದ್ಧಿಸಿವೆ. ಈ ಅವಕಾಶ ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನೆ ಕೈಗೊಂಡರೆ, ಗುಣಾತ್ಮಕ ಉತ್ಪನ್ನಗಳು ಹೊರಬರಲು ಸಾಧ್ಯ’ ಎಂದು ಸಿಂಗಾಪುರದ ಸಂಶೋಧಕ ಡಾ.ದೀಪಕ್ ವೈಕಾರ್ ಅಭಿಪ್ರಾಯಪಟ್ಟರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್.ಶೇಷಗಿರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇನ್‌ಸ್ಟಿಟ್ಯೂಟ್‌ ಆಫ್ ಎಲೆಕ್ಟ್ರಿಕಲ್ ಆ್ಯಂಡ್‌ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್(ಐಇಇಇ) ಉತ್ತರ ಕರ್ನಾಟಕ ವಲಯ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ತಂತ್ರಜ್ಞಾನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದಿನ ಕಾಲದಿಂದಲೂ ಸಂಶೋಧನಾ ಕ್ಷೇತ್ರಕ್ಕೆ ಭಾರತ ಮಹತ್ವದ ಕೊಡುಗೆ ನೀಡುತ್ತ ಬಂದಿದೆ. ಮುಂದಿನ ದಿನಗಳಲ್ಲಿ ಇಡೀ ಜಗತ್ತಿನ ಸಂಶೋಧನಾ ಕ್ಷೇತ್ರವನ್ನು ಭಾರತವೇ ಮುನ್ನಡೆಸಬೇಕು’ ಎಂದ ಅವರು, ‘ಭವಿಷ್ಯ ಗಮನದಲ್ಲಿಟ್ಟುಕೊಂಡು ನೈಸರ್ಗಿಕ ಇಂಧನವನ್ನು ಮಿತವಾಗಿ ಬಳಸುವತ್ತ ಗಮನಹರಿಸಬೇಕು. ಕೆಎಲ್‌ಇ ಸಂಸ್ಥೆ ಸಂಶೋಧನೆಗೆ ಆದ್ಯತೆ ನೀಡಿ, ಈ ಕ್ಷೇತ್ರ ಬಲಪಡಿಸಬೇಕು’ ಎಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಸಿ.ಮೆಟಗುಡ್, ‘ಶಿಕ್ಷಣ, ಆರೋಗ್ಯ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಕೆಎಲ್‌ಇ ಸಂಸ್ಥೆ ಸಾಧನೆ ಮೆರೆದಿದೆ. ಸಂಶೋಧನೆಗೆ ಒತ್ತು ನೀಡುತ್ತ ಬಂದಿದೆ’ ಎಂದರು.

ಐಇಇಇಯ ಉತ್ತರ ಕರ್ನಾಟಕ ವಲಯದ ಚೇರ್‌ಪರ್ಸನ್‌ ಡಾ.ಕೃಪಾ ರಸಾನೆ, ಬೆಂಗಳೂರಿನ ಐಐಬಿಟಿಯ ನಿರ್ದೇಶಕ ಡಾ.ದೇಬಬ್ರತ ದಾಸ್ ಉಪನ್ಯಾಸ ನೀಡಿದರು. ಡಾ.ರಾಖಿ ಕಳ್ಳಿಮನಿ ಇತರರಿದ್ದರು. ಡಾ.ಸ್ವಾತಿ ನಕಟ್ಟಿಮಠ ಹಾಗೂ ಡಾ.ನಯನಾ ಹೂಲಿಕಂಟಿಮಠ ಕಾರ್ಯಕ್ರಮ ನಿರ್ವಹಿಸಿದರು.

ವಿವಿಧ ರಾಜ್ಯಗಳು ಹಾಗೂ ವಿದೇಶದ ತಾಂತ್ರಿಕ ಮತ್ತು ಪಿಎಚ್‍.ಡಿ ವಿಭಾಗದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಂಶೋಧಕರು, ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು. ಸುಮಾರು 200 ಸಂಶೋಧನಾ ಪ್ರಬಂಧ ಮಂಡನೆಯಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT