ಸೋಮವಾರ, ಸೆಪ್ಟೆಂಬರ್ 27, 2021
23 °C
ಕೆಲಸವಿಲ್ಲದೆ ಕಂಗಾಲಾಗಿರುವ ವರ್ಗ

ಲಾಕ್‌ಡೌನ್‌: ಛಾಯಾಗ್ರಾಹಕರು ಅತಂತ್ರ, ಪರಿಹಾರಕ್ಕೆ ಮನವಿ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮನುಕುಲಕ್ಕೆ ಕಂಟಕವಾಗಿ ಪರಿಣಮಿಸಿರುವ ಕೋವಿಡ್-19 ದಿಂದ ಎಲ್ಲ ಸ್ತರಗಳಲ್ಲಿನ ಜನರ ಬದುಕು ಕನಲಿ ಹೋಗಿದೆ. ಅದರಲ್ಲೂ ಛಾಯಾಗ್ರಾಹಕರ ಜೀವನ ಚಿತ್ರಣವೇ ಬದಲಾಗಿದ್ದು, ಉಪ ಜೀವನಕ್ಕಾಗಿ ಅನ್ಯ ಉದ್ಯೋಗ ಅರಸುವಂತಹ ಅನಿವಾರ್ಯತೆ ಹಾಗೂ ಪರದಾಟ ಎದುರಾಗಿದೆ.

ಚಿಕ್ಕೋಡಿ ಪಟ್ಟಣದ 20ಕ್ಕೂ ಹೆಚ್ಚು ಸೇರಿದಂತೆ ತಾಲ್ಲೂಕಿನಲ್ಲಿ ಸುಮಾರು 350 ಜನರು ಛಾಯಾಗ್ರಹಣವನ್ನೇ ನಂಬಿಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದಾರೆ. ಆದರೆ, ಲಾಕ್‍ಡೌನ್‍ನಿಂದಾಗಿ ಅದ್ಧೂರಿ ಮದುವೆ ಸಮಾರಂಭಗಳೂ ನಡೆಯುತ್ತಿಲ್ಲ. ಮದುವೆ, ಸಭೆ–ಸಮಾರಂಭಗಳಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಬಹಳಷ್ಟು ಮದುವೆ ಸರಳವಾಗಿ ನಡೆದಿವೆ. ಪರಿಣಾಮ, ಛಾಯಾಗ್ರಾಹಕರಿಗೆ ಕೆಲಸ ದೊರಕದಂತಾಗಿದೆ. ಸತತ ಎರಡು ವರ್ಷಗಳಿಂದ ಆರ್ಥಿಕ ಸಂಕಷ್ಟವನ್ನು ಅವರು ಎದುರಿಸುತ್ತಿದ್ದಾರೆ.

ಎರಡು ದಶಕಗಳ ಹಿಂದೆ ಮದುವೆ, ಮಕ್ಕಳ ನಾಮಕರಣ ಸಮಾರಂಭ ಮೊದಲಾದ ಮಂಗಲ ಕಾರ್ಯಕ್ರಮಗಳು, ಸಭೆ ಸಮಾರಂಭಗಳಲ್ಲಿ ಛಾಯಾಗ್ರಹಣ ಕಡ್ಡಾಯ ಎಂಬಂತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಫೋನ್‌ಗಳ ಕಾರಣದಿಂದ ವೃತ್ತಿಪರ ಛಾಯಾಗ್ರಾಹಕರು ತತ್ತರಿಸಿ ಹೋಗಿದ್ದಾರೆ. ಸಣ್ಣಪುಟ್ಟ ಸಭೆ ಸಮಾರಂಭ, ಸರಳ ಮದುವೆ ಮತ್ತಿತರ ಶುಭ ಕಾರ್ಯಗಳಲ್ಲಿ ಮೊಬೈಲ್‌ನಲ್ಲೇ ಫೋಟೊ ಕ್ಲಿಕ್ಕಿಸಿಕೊಳ್ಳುವ ಟ್ರೆಂಡ್ ಆರಂಭಗೊಂಡಿದೆ. ಇದರಿಂದಾಗಿ ವೃತ್ತಿಪರ ಛಾಯಾಗ್ರಾಹಕರು ಕೆಲಸವಿಲ್ಲದೆ ಪರದಾಡುವಂತಾಗಿದೆ.

ವೃತ್ತಿಪರ ಛಾಯಾಗ್ರಾಹಕರಿಗೆ ಪ್ರಮುಖ ಆದಾಯ ತಂದುಕೊಡುವುದೇ ಮದುವೆ ಸೀಜನ್. ಬಹುತೇಕ ಮದುವೆ ಸಮಾರಂಭಗಳು ಮಾರ್ಚ್‌– ಮೇ ತಿಂಗಳವರೆಗೆ ನಡೆಯುತ್ತವೆ. ಆದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಲಾಕ್‍ಡೌನ್‍ ಹೇರಿಕೆಯಿಂದಾಗಿ ಛಾಯಾಗ್ರಾಹಕರು ಕೆಲಸ ಕಳೆದುಕೊಳ್ಳುವಂತಾಯಿತು. ಈ ವರ್ಷವೂ ಅದೇ ಪರಿಸ್ಥಿತಿ ಪುನರಾವರ್ತನೆಯಾಗಿದೆ. ಇದರಿಂದ ಸಂಕಷ್ಟ ಎದುರಿಸುವಂತಾಗಿದೆ ಎಂದು ವೃತ್ತಿಪರ ಛಾಯಾಗ್ರಾಹಕರು ಅಳಲು ತೋಡಿಕೊಂಡರು.

‘ಕಳೆದ ವರ್ಷ ಹಲವು ಅದ್ದೂರಿ ಮದುವೆ, ಸಭೆ ಸಮಾರಂಭಗಳೂ ರದ್ದಾಗಿದ್ದವು. ಅವುಗಳ ಛಾಯಾಗ್ರಹಣದ ಮುಂಗಡ ಪಡೆದಿದ್ದ ಅನೇಕ ಛಾಯಾಗ್ರಾಹಕರು ಗ್ರಾಹಕರಿಗೆ ಮರಳಿ ಹಣ ನೀಡುವಂತಾಗಿತ್ತು. ಪ್ರಸಕ್ತ ವರ್ಷವೂ ಕೊರೊನಾ ಕಾಟ ಹೆಚ್ಚಾಗಿದ್ದು, ಲಾಕ್‍ಡೌನ್‍ ಜಾರಿಯಾಗಿದೆ. ಅವರಿಗೆ ಕೆಲಸ ಇಲ್ಲದಂತಾಗಿದೆ. ಸಾವಿರಾರು ರೂಪಾಯಿ ಆದಾಯ ನಷ್ಟವಾಗಿದ್ದು, ಸ್ಟುಡಿಯೊ ಬಾಡಿಗೆ ಭರಿಸುವುದಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಫೋಟೊ ಪ್ರಿಟಿಂಗ್ ಲ್ಯಾಬ್, ವಿಡಿಯೊ ಮಿಕ್ಸಿಂಗ್ ಉದ್ಯಮಕ್ಕೂ ಬಿಸಿ ತಟ್ಟಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಆರಂಭಿಸಿರುವ ಲ್ಯಾಬ್‌ಗಳ ಮಾಲೂಕರು ಅರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

‘ಸರ್ಕಾರ ಕುಶಲಕರ್ಮಿಗಳು, ಹಣ್ಣು ತರಕಾರಿ ಮಾರಾಟಗಾರರು ಸೇರಿದಂತೆ ಹಲವು ಅಗತ್ಯ ಸೇವಾ ವಲಯದ ಕಾರ್ಮಿಕರಿಗೆ ಧನ ಸಹಾಯ ನೀಡುತ್ತಿರುವುದು ಸ್ವಾಗತಾರ್ಹ. ಸರ್ಕಾರಕ್ಕೆ ಛಾಯಾಗ್ರಹಣ ಅಗತ್ಯ ಸೇವೆ ಎನಿಸದೇ ಇರಬಹುದು. ಆದರೆ, ಇದೇ ವೃತ್ತಿಯನ್ನು ನಂಬಿಕೊಂಡಿರುವ ಸಾವಿರಾರು ಕುಟುಂಬಗಳಿವೆ ಎನ್ನುವುದನ್ನು ಗಮನಿಸಬೇಕು’ ಎಂದು ಛಾಯಾಗ್ರಾಹಕ ರಾಜು ಸಂಕೇಶ್ವರೆ ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು