ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ | ಸತೀಶ ‘ಚಾಣಕ್ಯ ನೀತಿ’ಗೆ ಗೆಲುವು; ಬಿಜೆಪಿಗೆ ಅನಿರೀಕ್ಷಿತ ಸೋಲು

Published 5 ಜೂನ್ 2024, 5:56 IST
Last Updated 5 ಜೂನ್ 2024, 5:56 IST
ಅಕ್ಷರ ಗಾತ್ರ

ಚಿಕ್ಕೋಡಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ‘ಚಾಣಕ್ಯ ನೀತಿ’ ಅವರ ಪುತ್ರಿ ಪ್ರಿಯಾಂಕಾ ಅವರನ್ನು ಸಂಸತ್‌ ಭವನಕ್ಕೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಗರು ನಿರೀಕ್ಷೆಯನ್ನೂ ಮಾಡದಂಥ ಸೋಲು ಅನುಭವಿಸಿದ್ದಾರೆ.

ಬಿಜೆಪಿ ನಾಯಕರಲ್ಲಿನ ಒಡಕನ್ನು ಸಮರ್ಥವಾಗಿ ಬಳಸಿಕೊಂಡಿದ್ದು ಹಾಗೂ ಕಾಂಗ್ರೆಸ್‌ ನಾಯಕರಲ್ಲಿನ ಒಗ್ಗಟ್ಟು ಸಡಿಲವಾಗದಂತೆ ನೋಡಿಕೊಂಡಿದ್ದು ಸತೀಶ ಅವರ ಸಾಮರ್ಥ್ಯಕ್ಕೆ ಕೈಗನ್ನಡಿ.

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಸತೀಶ ಅವರೂ ಸೇರಿದಂತೆ ಜಾರಕಿಹೊಳಿ ಸಹೋದರರು ಚಿಕ್ಕೋಡಿ ಭಾಗದಲ್ಲಿ ಸಾಕಷ್ಟು ತಾಲೀಮು ಮಾಡಿದ್ದರು. ಕ್ಷೇತ್ರದಲ್ಲಿ ಎಂಟರ ಪೈಕಿ ಐದು ಕಡೆ ಗೆಲ್ಲಿಸಲು ಶ್ರಮಿಸಿದ್ದರು. ಆಗಿನಿಂದಲೇ ಲೋಕಸಭೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸುತ್ತ ಬಂದಿದ್ದರು.

ಹಿರಿಯ ನಾಯಕ ಪ್ರಕಾಶ ಹುಕ್ಕೇರಿ ಅವರೂ ಸೇರಿದಂತೆ ಎಲ್ಲ ಶಾಸಕರು, ನಾಯಕರು ಒಂದಾಗಿ ಚುನಾವಣೆ ಮಾಡಿದರು. ಚಿಕ್ಕೋಡಿ ಭಾಗದಲ್ಲಿ ಲಿಂಗಾಯತ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ, ಅಲ್ಪಸಂಖ್ಯಾತ, ಹಿಂದುಳಿತ, ದಲಿತ ಮತಗಳು ಒಂದಾಗಿದ್ದು ಈ ಬಾರಿ ವಿಶೇಷ. ಮೇಲಾಗಿ, ಲಿಂಗಾಯತ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಸಚಿವ ಸತೀಶ ಜಾರಕಿಹೊಳಿ ಕೆಲವು ಮಠ– ಮಂದಿರಗಳನ್ನೂ ಸುತ್ತಿದರು. ಆರಂಭದಿಂದಲೂ ನಿರುಮ್ಮಳವಾಗಿದ್ದ ಅವರು ಚಾಣಾಕ್ಷ ನಡೆಯಿಂದ ಗೆಲುವು ಸಾಧಿಸಲು ಸಾಧ್ಯ ಎಂದು ತೋರಿಸಿಕೊಟ್ಟರು.

ಘಟಾನುಘಟಿ ರಾಜಕಾರಣಿಗಳಿಗೆ ನೆಲೆ ಒದಗಿಸಿದ್ದ ಈ ಕ್ಷೇತ್ರದಲ್ಲಿ ಹಿರಿಯರಾದ, ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಮತ್ತು ಯುವ ರಾಜಕಾರಣಿ ಪ್ರಿಯಾಂಕಾ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿತ್ತು. 27ನೇ ವಯಸ್ಸಿನ ಪ್ರಿಯಾಂಕಾ ಅವರು ಈ ಕ್ಷೇತ್ರದಲ್ಲಿ ಇದೂವರೆಗೆ ಗೆದ್ದ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ದಾಖಲೆ ಬರೆದರು.

ಬೆನ್ನಿಗೆ ನಿಂತ ‘ಕೈ’ ಶಾಸಕರು: ‘ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಯಮಕನಮರಡಿ, ಚಿಕ್ಕೋಡಿ–ಸದಲಗಾ, ಕುಡಚಿ, ಅಥಣಿ, ಕಾಗವಾಡ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಲು ಸತೀಶ ಜಾರಕಿಹೊಳಿ ಶ್ರಮಿಸಿದ್ದರು. ಈ ಬಾರಿ ಪ್ರಿಯಾಂಕಾ ಗೆಲ್ಲಿಸಲು ಅವರು ಸಚಿವರ ಬೆನ್ನಿಗೆ ನಿಂತರು. ಅಲ್ಲದೆ, ಸತೀಶ ಜಾರಕಿಹೊಳಿ ಅವರು ಲಿಂಗಾಯತರು, ಜೈನರು, ಕುರುಬರು ಸೇರಿದಂತೆ ಎಲ್ಲ ಸಮುದಾಯದವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು. ಅಹಿಂದ ಮತಗಳೆಲ್ಲ ಒಟ್ಟಾದವು. ಇದರ ಪ್ರತಿಫಲವಾಗಿ ಪ್ರಿಯಾಂಕಾ ಗೆಲುವು ಸಾಧ್ಯವಾಯಿತು’ ಎಂದು ವಿಶ್ಲೇಷಿಸಲಾಗುತ್ತಿದೆ.

ಮುನಿಸಿಕೊಂಡವರನ್ನು ಒಲಿಸಿಕೊಳ್ಳಲಿಲ್ಲ: ಈ ಬಾರಿ ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಮೇಲೆ ಹಲವು ಆಕಾಂಕ್ಷಿಗಳು ಕಣ್ಣಿಟ್ಟಿದ್ದರು. ತಮಗೆ ಟಿಕೆಟ್‌ ಕೈತಪ್ಪಿದ್ದರಿಂದ ಹಾಗೂ ಕಳೆದ ಐದು ವರ್ಷಗಳಲ್ಲಿ ತಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆ ಪಕ್ಷದಲ್ಲಿನ ಹಲವರು ಅಸಮಾಧಾನಗೊಂಡಿದ್ದರು. ಆದರೆ, ಜೊಲ್ಲೆ ಮುನಿಸಿಕೊಂಡವರನ್ನು ಒಲಿಸಿಕೊಳ್ಳಲಿಲ್ಲ. ಮಾಜಿ ಸಂಸದ ರಮೇಶ ಕತ್ತಿ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಮತ್ತಿತರ ನಾಯಕರು ಜೊಲ್ಲೆ ಪರವಾಗಿ ಗಟ್ಟಿಯಾಗಿ ನಿಲ್ಲಲಿಲ್ಲ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಲ್ಲಿಗೆ ಬಂದು ಪ್ರಚಾರ ಮಾಡಿದರೂ ಹಿಂದೂ ಸಮುದಾಯದ ಮತಗಳು ಕ್ರೋಢೀಕರಣವಾಗದ್ದರಿಂದ ಬಿಜೆಪಿಗೆ ಹಿನ್ನಡೆಯಾಯಿತು.

ಗ್ಯಾರಂಟಿ ಬಲ: ‘ಪ್ರಧಾನಿ ನರೇಂದ್ರ ಮೋದಿ ಬೆಳಗಾವಿ ಮಹಾನಗರಕ್ಕೆ ಬಂದು, ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಪ್ರಚಾರ ಮಾಡಿದರು. ಆದರೆ, ಮತದಾರರನ್ನು ಸೆಳೆಯಲಾಗಲಿಲ್ಲ. ರಾಜ್ಯ ಸರ್ಕಾರ ಜಾರಿಗೊಳಿಸಿದ ‘ಗ್ಯಾರಂಟಿ’ ಕಾರ್ಯಕ್ರಮಗಳು, ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಗೆಲುವಿಗೆ ನೆರವಾದವು. ಮೂಲತಃ ಗೋಕಾಕದವರಾದರೂ ಚಿಕ್ಕೋಡಿ ಕ್ಷೇತ್ರದ ಜನ ಪ್ರಿಯಾಂಕಾ ಕೈಹಿಡಿದರು’ ಎಂಬುದು ಜನರ ಮಾತು.

ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಶಂಭು ಕಲ್ಲೋಳಿಕರ ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದರಿಂದ ಕಾಂಗ್ರೆಸ್‌ಗೆ ಒಳಪೆಟ್ಟು ಬಿದ್ದರೂ ಅಚ್ಚರಿಯಿಲ್ಲ ಎನ್ನಲಾಗಿತ್ತು. ಆದರೆ, ಕಲ್ಲೋಳಿಕರ ಕೇವಲ 25,466 ಮತ ಪಡೆದರು. ಅವರ ಸ್ಪರ್ಧೆಯಿಂದ ‘ಕೈ’ ಪಡೆ ಅಭ್ಯರ್ಥಿಗೆ ಯಾವ ಅಡ್ಡಿಯಾಗಲಿಲ್ಲ.

ಕ್ಷೇತ್ರದಿಂದ ಗೆದ್ದ 2ನೇ ಮಹಿಳೆ

1996ರಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜನತಾ ದಳದ ಅಭ್ಯರ್ಥಿ ರತ್ನಮಾಲಾ ಸವಣೂರ ಅವರು ಸತತ ಏಳು ಬಾರಿ ಗೆದ್ದಿದ್ದ ಕಾಂಗ್ರೆಸ್‌ನ ಬಿ.ಶಂಕರಾನಂದ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಅದಾದ ನಂತರ ಚಿಕ್ಕೋಡಿಯಿಂದ ಮಹಿಳಾ ಅಭ್ಯರ್ಥಿಗಳು ಗೆದ್ದಿರಲಿಲ್ಲ. 28 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಮತ್ತೆ ಮಹಿಳಾ ಅಭ್ಯರ್ಥಿಯೊಬ್ಬರನ್ನು ಮತದಾರರು ಗೆಲ್ಲಿಸಿದ್ದಾರೆ. ವಕೀಲರಾಗಿದ್ದ ರತ್ನಮಾಲಾ ಮೊದಲ ಯತ್ನದಲ್ಲೇ ಗೆಲುವು ಸಾಧಿಸಿದ್ದರು. ಈಗ ಪ್ರಿಯಾಂಕಾ ಸಹ ಮೊದಲ ಪ್ರಯತ್ನದಲ್ಲೇ ಸಂಸತ್ತಿಗೆ ಅರ್ಹತೆ ಗಳಿಸಿದ್ದಾರೆ. ಈವರೆಗೆ ನಡೆದ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಎರಡನೇ ಮಹಿಳಾ ಅಭ್ಯರ್ಥಿ ಪ್ರಿಯಾಂಕಾ.

ಜಾರಕಿಹೊಳಿ ‘ಸಾಮ್ರಾಜ್ಯ’ ವಿಸ್ತರಣೆ

ಸತೀಶ ಜಾರಕಿಹೊಳಿ ಈಗ ಲೋಕೋಪಯೋಗಿ ಸಚಿವ. ಅವರ ಸಹೋದರರಾದ ರಮೇಶ ಮತ್ತು ಬಾಲಚಂದ್ರ ಶಾಸಕರು. ಮತ್ತೊಬ್ಬ ಸಹೋದರ ಲಖನ್‌ ವಿಧಾನ ಪರಿಷತ್ ಸದಸ್ಯ. ಈಗ ಪ್ರಿಯಾಂಕಾ ಸಂಸದರಾದರು. ಪ್ರಿಯಾಂಕಾ ಮೂಲಕ ಜಾರಕಿಹೊಳಿ ಕುಟುಂಬವರು ತಮ್ಮ ರಾಜಕೀಯ ಸಾಮ್ರಾಜ್ಯವನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT