ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಲೋಕಸಭೆ ಕ್ಷೇತ್ರ| ಮೇಲೆ ನೋಡಿದ್ರೆ ಏನಿದೆ: ಡಾ. ಅಂಜಲಿ ಪ್ರಶ್ನೆ

ಮೇಲೆ ನೋಡಿ ವೋಟ್ ಹಾಕಿ ಎನ್ನುವ ಅಭ್ಯರ್ಥಿಯ ತರಾಟೆ
Published 30 ಏಪ್ರಿಲ್ 2024, 15:46 IST
Last Updated 30 ಏಪ್ರಿಲ್ 2024, 15:46 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘ನನ್ನನ್ನು ನೋಡಬೇಡಿ, ಮೇಲೆ ನೋಡಿ ವೋಟ್ ಹಾಕಿ’ ಎನ್ನುತ್ತಾರೆ. ಮೇಲೆ ನೋಡಿದರೆ ಏನಿದೆ, ದೇವರೇ ಕಾಣುವುದಿಲ್ಲ; ಇನ್ನು ಮೋದಿ ಎಲ್ಲಿ ಕಾಣಬೇಕು’ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಲೇವಡಿ ಮಾಡಿದರು.

ಸೋಮವಾರ ಇಲ್ಲಿಯ ಸೋಮವಾರ ಪೇಟೆಯ ಚನ್ನಮ್ಮ ವರ್ತುಲದಲ್ಲಿ ಲೋಕಸಭೆ ಚುನಾವಣೆ ಪ್ರಯುಕ್ತ ಬಹಿರಂಗ ಪ್ರಚಾರ ಭಾಷಣ ಮಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಅದಾನಿ ಮತ್ತು ಅಂಬಾನಿಯ ಮನೆ ತುಂಬಿಸುವ ಕೆಲಸವನ್ನು ಕೇಂದ್ರದ ಮೋದಿ ಸರ್ಕಾರ ಮಾಡುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಮತದಾರ ಇಲ್ಲಿಯವರೆಗೆ ಕಣ್ಮುಚ್ಚಿ ಮತ ಹಾಕುತ್ತ ಬಂದಿದ್ದಾನೆ. ಆಯ್ಕೆಯಾಗಿ ಹೋದ ಸಂಸದನಿಂದ ಏನೂ ಜನಹಿತ ಕಾರ್ಯಗಳಾಗಿಲ್ಲ. ಈ ಒಂದು ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು’ ಎಂದು ಅವರು ಮನವಿ ಮಾಡಿಕೊಂಡರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ‘ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಯ ಭರವಸೆಗಳನ್ನೆಲ್ಲ ಈಡೇರಿಸಿ ನುಡಿದಂತೆ ನಡೆದಿದ್ದೇವೆ’ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಕರವೇ ಕಾರ್ಯಕರ್ತ ದಶರಥ ಬನೋಶಿ ಮಾತನಾಡಿ, ‘ಇಬ್ಬರು ದೇಶ ಮಾರುತ್ತಿದ್ದಾರೆ, ಇಬ್ಬರು ಕೊಳ್ಳುತ್ತಿದ್ದಾರೆ. ಮಾರುವವರು, ಕೊಳ್ಳುವವರು ಎಲ್ಲರೂ ಗುಜರಾತ ರಾಜ್ಯದವರಾಗಿದ್ದಾರೆ’ ಎಂದು ಮೋದಿ, ಅಮಿತ್ ಶಾ, ಅದಾನಿ ಮತ್ತು ಅಂಬಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ರೈತ ಸಂಘಟನೆಗಳ ಒಕ್ಕೂಟದ ಮುಖಂಡ ಬಸನಗೌಡ ಪಾಟೀಲ ಮಾತನಾಡಿ, ‘ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ನೀಡದ, ಗೊಬ್ಬರ ಬೆಲೆ ಮಾತ್ರ ದುಪ್ಪಟ್ಟು ಮಾಡಿದ ನರೇಂದ್ರ ಮೋದಿ ಈ ಚುನಾವಣೆಯಲ್ಲಿ ಸೋಲಬೇಕು’ ಎಂದರು.

ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಮುಖಂಡರಾದ ಶಂಕರ ಹೊಳಿ, ಎಂ. ಎಫ್. ಜಕಾತಿ, ಸಿದ್ದು ಮಾರಿಹಾಳ, ಕೃಷ್ಣ ಬಾಳೇಕುಂದ್ರಿ, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT