ಗುರುವಾರ , ಮೇ 6, 2021
30 °C

ಮಹದಾಯಿ ತೀರ್ಪು: ಅಧಿಸೂಚನೆ ಹೊರಡಿಸುವಂತೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಳಗಾವಿ: ಮಹದಾಯಿ ನ್ಯಾಯಾಧೀಕರಣದ ತೀರ್ಪಿನನ್ವಯ ಕೂಡಲೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ನಾಯಕ ಎನ್‌.ಎಚ್‌.ಕೋನರಡ್ಡಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. 

ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜೆಡಿಎಸ್‌ ಮುಖಂಡರು, ಕರ್ನಾಟಕ ಸಂಗ್ರಾಮ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಸೇರಿ ವಿವಿಧ ಸಂಘಟನೆಗಳು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಮಹದಾಯಿ ನ್ಯಾಯಾದೀಕರಣವು ಈಗಾಗಲೇ ತೀರ್ಪು ನೀಡಿದೆ. ಇದರ ಅನ್ವಯ ಕೇಂದ್ರ ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸಬೇಕು. ನರೇಂದ್ರ ಮೋದಿ ತುಮಕೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಈ ಬಗ್ಗೆ ಘೋಷಿಸಬೇಕು’ ಎಂದು ಎನ್‌.ಎಚ್‌. ಕೋನರಡ್ಡಿ ಒತ್ತಾಯಿಸಿದರು.

‘ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಿರಂತರ ಹೋರಾಟ ನಡೆಯುತ್ತಿವೆ. ನ್ಯಾಯಾಲಯವು ತೀರ್ಪು ನೀಡಿ 1 ವರ್ಷ ಕಳೆದಿದೆ. ಆದರೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತಿಲ್ಲ. ಕೂಡಲೇ ಅಧಿಸೂಚನೆ ಹೊರಡಿಸಬೇಕು. ಹೋರಾಟದಲ್ಲಿ ಭಾಗಿಯಾಗಿದ್ದ ರೈತರ ಮೇಲೆ ದಾಖಲಿಸಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದರು.

‘ಮಹದಾಯಿ ನದಿ ವ್ಯಾಪ್ತಿಯ ಶಾಸಕರು, ಸಂಸದರು ಹಾಗೂ ಸಚಿವರುಗಳ ಸಭೆಯನ್ನು ಇದೇ 5 ರಂದು ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದೆ. ಅಲ್ಲಿ ವಿಸ್ತೃತವಾಗಿ ಚರ್ಚಿಸಲಾಗುವುದು’ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ರೈತ ಮುಖಂಡರಾದ ಚೂನಪ್ಪಾ ಪೂಜಾರಿ, ಜಯಶ್ರೀ ಗುರನ್ನವರ, ಶ್ವೇತಾ ದುಮನಾಳ, ಯಶೋಧಾ ಬಿರಡಿ, ನಿರ್ಮಲಾ ಹಡಗಲಿ, ಈಶ್ವರಗೌಡಾ ಪಾಟೀಲ, ಶಾಂತಾ ಸಿಂದೆ, ಮಹಾದೇವಿ ಹಿರೇಮಠ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು