ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಹಾರಾಷ್ಟ್ರದಿಂದ ಆರೋಗ್ಯ ವಿಮೆಗೆ ₹34 ಕೋಟಿ ಅನುದಾನ!

ಗಡಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆ: ಹಣ ನೇರವಾಗಿ ಆಸ್ಪತ್ರೆಗೆ ಜಮೆ
Published 9 ಜನವರಿ 2024, 21:21 IST
Last Updated 9 ಜನವರಿ 2024, 21:21 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕದ ಗಡಿಯೊಳಗಿನ 865 ಹಳ್ಳಿ–ಪಟ್ಟಣಗಳ ಜನರಿಗಾಗಿ ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಿರುವ ‘ಮಹಾತ್ಮ ಜ್ಯೋತಿರಾವ್‌ ಫುಲೆ ಜನಾರೋಗ್ಯ ವಿಮೆ’ ಯೋಜನೆಗೆ ಅಲ್ಲಿನ ಸರ್ಕಾರ ₹34 ಕೋಟಿ ಅನುದಾನ ಮೀಸಲಿಟ್ಟಿದೆ.

ಫಲಾನುಭವಿಗಳ ಆಯ್ಕೆಗೆ ಬೆಳಗಾವಿ ನಗರದಲ್ಲಿ ನಾಲ್ಕು ಕೇಂದ್ರಗಳನ್ನು ತೆರೆಯಲಾಗಿದೆ. ಜನವರಿ 4ರಿಂದ 7ರವರೆಗೆ ಖಡಕ್‌ ಗಲ್ಲಿಯ ಕೇಂದ್ರದಲ್ಲಿ 17 ಅರ್ಜಿಗಳು ಬಂದಿದ್ದು, ಮೂರೇ ದಿನಗಳಲ್ಲಿ ಆರು ಮಂದಿಗೆ ₹50 ಸಾವಿರದಿಂದ ₹3 ಲಕ್ಷದವರೆಗೆ ವಿಮೆ ಜಮೆಯಾಗಿದೆ.

‘ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ ತಕ್ಷಣ ಮೊಬೈಲ್‌ ಸಂಖ್ಯೆಗೆ ಲಿಂಕ್‌ ಬರುತ್ತದೆ. ಆನ್‌ಲೈನ್‌ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಿಫಾರಸು ಪತ್ರ, ‘ನಾನು ಮರಾಠಿ ಭಾಷಿಗ’ ಎಂಬ ಮುಚ್ಚಳಿಕೆ ಮತ್ತು ಆಸ್ಪತ್ರೆ ಬಿಲ್‌ ಲಗತ್ತಿಸಿ ಅಪ್‌ಲೋಡ್‌ ಮಾಡಬೇಕು. ಹಣ ನೇರವಾಗಿ ಆಸ್ಪತ್ರೆಗೆ ಜಮೆಯಾಗುತ್ತದೆ’ ಎಂದು ಜನಾರೋಗ್ಯ ವಿಮೆಯ ಸೇವಾಪ್ರತಿನಿಧಿಗಳು ತಿಳಿಸಿದ್ದಾರೆ.

‘ಕರ್ನಾಟಕ ಸರ್ಕಾರ ನೀಡುವ ಯಶಸ್ವಿನಿ, ಆಯುಷ್ಮಾನ್‌–ಆರೋಗ್ಯ ಕರ್ನಾಟಕ ಯೋಜನೆಗಳ ಫಲಾನುಭವಿ ಆಗಲು ಹತ್ತಾರು ನಿಯಮಗಳಿವೆ. ಅಂತ್ಯೋದಯ ಕಾರ್ಡ್‌ ಹೊಂದಿರಬೇಕು, ಮನೆಯಲ್ಲಿ ವಾಹನ ಇರಬಾರದು, ಆದಾಯ ತೆರಿಗೆ ಪಾವತಿಸವವರಾಗಿರಬಾರದು, ಬ್ಯಾಂಕ್‌ ಖಾತೆ– ಆಧಾರ್‌ ಸಂಖ್ಯೆ ಜೋಡಣೆ... ಮುಂತಾದ ಅಡೆತಡೆಗಳಿವೆ. ಇಷ್ಟೆಲ್ಲ ಜಂಜಾಟವೇ ಬೇಡ ಎಂದು ಮರಾಠಿಗರು ಮಹಾರಾಷ್ಟ್ರದ ಯೋಜನೆಗೆ ಮೊರೆ ಹೋಗಬಹುದು. ಇದನ್ನು ಕರ್ನಾಟಕ ಸರ್ಕಾರ ಈಗಲೇ ನಿಲ್ಲಿಸಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

ಡಾ.ಮಹೇಶ ಕೋಣೆ
ಡಾ.ಮಹೇಶ ಕೋಣೆ
ಅಶೋಕ ಚಂದರಗಿ
ಅಶೋಕ ಚಂದರಗಿ

ಮರಾಠಿಗರು ಕನ್ನಡಿಗರೊಂದಿಗೆ ಮುಖ್ಯವಾಹಿನಿಯಲ್ಲಿ ಬೆರೆತಿದ್ದಾರೆ. ಅವರನ್ನು ರಾಜಕೀಯ ಅಥವಾ ಭಾವನಾತ್ಮಕವಾಗಿ ಸೆಳೆಯಲು ಆಗದು. ಅದಕ್ಕೆ ಹಣದ ಆಮಿಷ ಒಡ್ಡಲಾಗುತ್ತಿದೆ

–ಅಶೋಕ ಚಂದರಗಿ ಅಧ್ಯಕ್ಷ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ಮಹಾರಾಷ್ಟ್ರ ಆರೋಗ್ಯ ವಿಮೆ ಜಾರಿ ಮಾಡಿದ ಬಗ್ಗೆ ಯಾರಾದರೂ ದೂರು ನೀಡಿದರೆ ಮಾತ್ರ ಪರಿಶೀಲಿಸುತ್ತೇವೆ. ಈ ವಿಚಾರದಲ್ಲಿ ನಮ್ಮ ಸರ್ಕಾರದ ನಿರ್ದೇಶನ ಪಾಲಿಸುತ್ತೇವೆ

–ನಿತೇಶ್‌ ಪಾಟೀಲ ಜಿಲ್ಲಾಧಿಕಾರಿ

ಮಹಾರಾಷ್ಟ್ರ ಸರ್ಕಾರ ಯಾವ ಆಸ್ಪತ್ರೆಗೆ ವಿಮೆ ಪಾವತಿಸುತ್ತಿದೆ ಗೊತ್ತಾಗಿಲ್ಲ. ವಿಮೆ ಪಾವತಿ ಸಂಬಂಧ ಯಾವ ಮನವಿ ಕೂಡ ನನಗೆ ಬಂದಿಲ್ಲ

–ಡಾ.ಮಹೇಶ್‌ ಕೋಣೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಆಸ್ಪತ್ರೆಗಳೂ ಮರಾಠಿಮಯ!

ಬೆಳಗಾವಿ ಬೀದರ್‌ ಕಾರವಾರ ನಗರಗಳಲ್ಲಿ ಮರಾಠಿ ಭಾಷೆ ಬಳಸುವ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕು ಎಂಬ ನಿಯಮ ಮಹಾರಾಷ್ಟ್ರ ಸರ್ಕಾರ ಮಾಡಿದೆ. ಅಂಥ 10 ಆಸ್ಪತ್ರೆಗಳನ್ನು ಗುರುತಿಸಿದೆ. 2023ರ ಮಾರ್ಚ್‌ 2ರಂದು ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಆದೇಶದಲ್ಲೇ ಈ ಅಂಶವಿದೆ. ‘ಯಾವ ಆಸ್ಪತ್ರೆ ಕನ್ನಡಿಗರಿಗೆ ಒಳಪಟ್ಟಿದೆಯೋ ಅದರತ್ತ ಮರಾಠಿಗರು ಇಣುಕಿ ಕೂಡ ನೋಡಬಾರದು ಎಂಬುದು ಇದರ ಉದ್ದೇಶ. ಯೋಜನೆಗೆ 1000 ಆಸ್ಪತ್ರೆಗಳನ್ನು ಮೊದಲು ಗುರುತಿಸಲಾಗಿತ್ತು. 865 ಹಳ್ಳಿಗಳಿಗೆ ವಿಸ್ತರಣೆ ಮಾಡಿದ ಮೇಲೆ ಗಡಿ ಭಾಗದ ಎಂಟು ಜಿಲ್ಲೆಗಳ 140 ಆಸ್ಪತ್ರೆಗಳನ್ನು ಸೇರಿಸಲಾಗಿದೆ’ ಎಂದು ಕನ್ನಡಪರ ಹೋರಾಟಗಾರರು ಹೇಳುತ್ತಾರೆ.

–––––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT