ಸೋಮವಾರ, ಮೇ 23, 2022
21 °C
ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಸಂಭ್ರಮಕ್ಕೆ ಕ್ಷಣಗಣನೆ

ಬೆಳಗಾವಿ: ಪುಣ್ಯ ಸ್ನಾನ, ಪರಿಸರ ಭೋಜನಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆ ಮಾಡಿಕೊಂಡಿದ್ದಾರೆ.

ಹಬ್ಬದ ಮುನ್ನಾ ದಿನವಾದ ಬುಧವಾರ ಹಣ್ಣು, ಹೂವು, ಪೂಜಾ ಸಾಮಗ್ರಿಗಳು ಮೊದಲಾದ ಅಗತ್ಯ ವಸ್ತುಗಳ ಖರೀದಿ ಮಾರುಕಟ್ಟೆಯಲ್ಲಿ ಜೋರಾಗಿ ನಡೆಯಿತು. ಕ್ಯಾಲೆಂಡರ್ ವರ್ಷದ ಮೊದಲನೇ ಹಬ್ಬವಾದ ಸಂಕ್ರಾಂತಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಎಳ್ಳು, ಬೆಲ್ಲ ಹಂಚಿ ಸ್ನೇಹ ಬೆಸೆಯುವ ಆಚರಣೆಗಾಗಿ, ಎಳ್ಳು, ಶೇಂಗಾ, ಬೆಲ್ಲ ಮೊದಲಾದ ಅಗತ್ಯ ಸಾಮಗ್ರಿಗಳ ಬೆಲೆ ಗಗಮನಕ್ಕೇರಿದೆ.

ಕುಟುಂಬದವರು, ಸ್ನೇಹಿತರು, ಬಂಧುಗಳು ಸೇರಿ ನದಿ, ಹೊಳೆಗಳ ದಂಡೆಗಳಲ್ಲಿ ಊಟ ಸೇವಿಸಿ ಸಂಭ್ರಮವನ್ನು ಹಂಚಿಕೊಳ್ಳುವುದು ಈ ಹಬ್ಬದ ವಿಶೇಷ. ಸುಗ್ಗಿ ಹಬ್ಬವನ್ನು ಅರ್ಥಪೂರ್ಣ ಹಾಗೂ ಆರೋಗ್ಯಕರ ಶೈಲಿಯಲ್ಲಿ ಆಚರಿಸುವುದು ಇಲ್ಲಿನ ಸಂಪ್ರದಾಯ.

ವಿವಿಧ ಬಗೆಯ ತಿನಿಸುಗಳನ್ನು ಮಾಡಿಕೊಂಡು ಕುಟುಂಬದವರು, ಬಂಧು–ಮಿತ್ರರೊಂದಿಗೆ ನದಿಗಳು ಅಥವಾ ಹೊಳೆಗಳ ಬಳಿಗೆ ತೆರಳುತ್ತಾರೆ. ಅಲ್ಲಿ ಪುಣ್ಯಸ್ನಾನ ಮಾಡಿ ದೇವರಿಗೆ ನಮಿಸುತ್ತಾರೆ. ಬಳಿಕ ಎಲ್ಲರೂ ಸೇರಿ ಊಟ ಮಾಡಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ವಾಪಸಾಗುತ್ತಾರೆ. ಅಂದು ವಿವಿಧ ಕಡೆಗಳಲ್ಲಿ ಜಾತ್ರಾ ಮಹೋತ್ಸವ, ರಥೋತ್ಸವಗಳು ಕೂಡ ನೆರವೇರುವುದು ವಾಡಿಕೆ. ಆದರೆ, ಈ ಬಾರಿ ಕೋವಿಡ್–19 ಭೀತಿ ಇರುವುದರಿಂದಾಗಿ ಹಲವು ಕಡೆಗಳಲ್ಲಿ ಜಾತ್ರೆ, ರಥೋತ್ಸವ ರದ್ದುಪಡಿಸಲಾಗಿದೆ.

ಎಂ.ಕೆ. ಹುಬ್ಬಳ್ಳಿ ಸಮೀಪದ ಶರಣೆ ಗಂಗಾಬಿಕಾ ಐಕ್ಯಮಂಟಪದ ಬಳಿ ಸೇರಿದಂತೆ ಹಲವೆಡೆ ಜಾತ್ರೆ ನಡೆಯುತ್ತಿಲ್ಲ. ಆದರೆ, ಜನರು ಜಲಮೂಲಗಳ ದಂಡೆಗೆ ಅಥವಾ ಹೊರವಲಯದ ಜಮೀನುಗಳಿಗೆ ತೆರಳಿ ‘ಪರಿಸರ ಭೋಜನ’ಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಎಳ್ಳಮಾವಾಸ್ಯೆಯ ದಿನವಾದ ಬುಧವಾರವೂ ನೆರೆಹೊರೆಯವರಿಗೆ ರೊಟ್ಟಿ, ವಿವಿಧ ಪಲ್ಯಗಳು ಮತ್ತು ಸಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದ್ದು ಕಂಡುಬಂತು.

ಸಜ್ಜೆ, ಜೋಳದ ಖಡಕ್ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ, ವಿವಿಧ ಕಾಳುಗಳಿಂದ ಸಿದ್ಧಪಡಿಸಿದ ಪಲ್ಯ, ‌‌‌‌ಮೊಸರು, ಶೇಂಗಾ, ಗುರೆಳ್ಳು ಚಟ್ನಿ, ಶೇಂಗಾ ಹೋಳಿಗೆ, ಶೇಂಗಾ ಚಟ್ನಿ, ಈ ಸಂದರ್ಭದಲ್ಲಿ ಸಿಗುವ ಅವರೆಕಾಳುಗಳು ಹಾಗೂ ಸೊಪ್ಪುಗಳಿಂದ ತಯಾರಿಸಿದ ಪಲ್ಯಗಳು, ಬೇಳೆ ಹೋಳಿಗೆ, ಕೆಂಪು ಚಟ್ನಿ, ಜುನಕದ ವಡೆ, ಮಾದೇಲಿ, ಮೊಸರನ್ನ, ಖರ್ಜಿಕಾಯಿ... ಹೀಗೆ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ಈ ಹಬ್ಬದಲ್ಲಿ ತಯಾರಿಸಿ ಸವಿಯುತ್ತಾರೆ. ನೆರೆಹೊರೆಯ ಮನೆಗಳಿಗೂ ಹಂಚಿ ಖುಷಿಪಡುತ್ತಾರೆ.

ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ಮಾರ್ಕಂಡೇಯ... ಹೀಗೆ ನದಿ ತೀರದಲ್ಲಿರುವ ದೇವಸ್ಥಾನಗಳಿಗೆ ಜನರು ಭೇಟಿ ಕೊಡುತ್ತಾರೆ. ಸುಗ್ಗಿಯ ಸಮಯವಾದ್ದರಿಂದ ರೈತರಿಗೆ ಹೆಚ್ಚಿನ ಸಂತೋಷ. ಬೆಳೆಗಳಿಗೆ ಪೂಜೆ ಸಲ್ಲಿಸಿ, ಭೂಮಿ ತಾಯಿಗೂ ನಮಿಸುತ್ತಾರೆ. ಜಾನುವಾರು ಪೂಜೆ ಸಲ್ಲಿಸುತ್ತಾರೆ.

ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ, ರಕ್ಕಸಕೊಪ್ಪ ಜಲಾಶಯ, ಬೈಲಹೊಂಗಲ ತಾಲ್ಲೂಕಿನ ಸಿದ್ದನಕೊಳ್ಳ, ಖಾನಾಪುರ ತಾಲ್ಲೂಕಿನ ಹಬ್ಬಾನಟ್ಟಿ, ಅಸೋಗ, ಸವದತ್ತಿಯ ನವಿಲುತೀರ್ಥ ಜಲಾಶಯದ ಪ್ರದೇಶ, ಸೊಗಲ, ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಉದ್ಯಾನ ಹೀಗೆ ಮೊದಲಾದ ಕಡೆಗಳಲ್ಲಿ ನೂರಾರು ಮಂದಿ ಕುಟುಂಬ ಸಮೇತ ಕಾಣಸಿಗುತ್ತಾರೆ. ಮಹಿಳೆಯರು ಗಂಗೆಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸುತ್ತಾರೆ. ಬುತ್ತಿ ಊಟ ಮಾಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು