ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸೌಲಭ್ಯ ವಂಚಿತ ಶ್ರೀನಗರ ಬಡಾವಣೆ

ತೆರಿಗೆ ಕಟ್ಟಿದರೂ ಸಿಗದ ಸವಲತ್ತು; ನಿವಾಸಿಗಳ ಬೇಸರ
Last Updated 9 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಉಗರಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಶ್ರೀನಗರ ಬಡಾವಣೆ ನಿರ್ಮಾಣವಾಗಿ ಎರಡು ದಶಕವಾಗುತ್ತಾ ಬಂದಿದೆ. ಆದರೂ ಕೆಲವು ಮೂಲಸೌಲಭ್ಯಗಳು ಇನ್ನೂ ಸಿಕ್ಕಿಲ್ಲ ಎಂದು ದೂರುತ್ತಾರೆ ನಾಗರಿಕರು.

ಆರಂಭದಿಂದಲೂ ನಿಧಾನಗತಿಯಲ್ಲಿ ಈ ಬಡಾವಣೆಯಲ್ಲಿ ಮನೆಗಳು ನಿರ್ಮಾಣಗೊಳ್ಳುತ್ತಾ ಸಾಗಿದವು. ದೀರ್ಘ ಅವಧಿ ತೆಗೆದುಕೊಂಡಿದ್ದರೂ ಸಂಪೂರ್ಣವಾಗಿ ಈ ಬಡಾವಣೆ ಭರ್ತಿಯಾಗಿಲ್ಲ. 15 ಕುಟುಂಬಗಳು ಮಾತ್ರ ಇಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಅವರು.

ಬಡಾವಣೆ ರಚನೆಯಾದ ನಂತರ ಮಣ್ಣಿನ ರಸ್ತೆಯಷ್ಟೇ ಇಲ್ಲಿಯ ಮುಖ್ಯ ಸೌಲಭ್ಯವಾಗಿತ್ತು. ತಾಲ್ಲೂಕು ಕೇಂದ್ರವಾದ ಕಿತ್ತೂರಿಂದ ಕೂಗಳತೆ ದೂರದಲ್ಲಿರುವ ಈ ಬಡಾವಣೆ ನಿರೀಕ್ಷೆಯಂತೆ ಅಭಿವೃದ್ಧಿ ಕಾಣಲಿಲ್ಲ. ಇಲ್ಲಿರುವ ಪ್ರತಿ ಕುಟುಂಬಗಳು ಸ್ವತಃ ಮನೆಗೊಂದು ಕೊಳವೆಬಾವಿ ತೋಡಿಸಿ ನೀರಿನ ಸೌಲಭ್ಯ ಮಾಡಿಕೊಂಡಿದ್ದಾರೆ.

ಆಗ ಪರಿಗಣಿಸಲಿಲ್ಲ:

ಈ ಬಡಾವಣೆಯ ಮೊದಲ ಮನೆಯಾಗಿದ್ದರಿಂದ ವಿದ್ಯುತ್ ಸೌಲಭ್ಯ ಪಡೆಯಲು ಇಲ್ಲಿಯ ನಿವಾಸಿಯೊಬ್ಬರು ಸ್ವತಃ ವೆಚ್ಚ ಮಾಡಿದರು. ಉಗರಕೋಡ ಪಂಚಾಯ್ತಿಗೆ ತೆರಿಗೆ ಕಟ್ಟುತ್ತಾ ಬಂದಿದ್ದರೂ ಈ ಕಡೆಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರುತ್ತಾರೆ ನಿವಾಸಿಗಳು.

ನಿವೇಶನ ಸಿಗುತ್ತವೊ ಇಲ್ಲವೋ ಎಂಬ ಧಾವಂತದಲ್ಲಿದ್ದ ಕೆಲವರು ರಸ್ತೆ, ನೀರು, ಚರಂಡಿ ವ್ಯವಸ್ಥೆಯನ್ನು ಅಷ್ಟಾಗಿ ಪರಿಗಣಿಸಲಿಲ್ಲ. ಮನೆ ಕಟ್ಟಿದ ನಂತರ ಈಗ ಕುಟುಂಬಗಳು ಯಾತನೆ ಪಡುವಂತಾಗಿದೆ.

ಖಾಲಿ ನಿವೇಶನಕ್ಕಿದ್ದ ₹ 30 ತೆರಿಗೆಯನ್ನು ₹ 350ಕ್ಕೆ ಹೆಚ್ಚಿಸಲಾಗಿದೆ. ಮನೆಗಿದ್ದ ₹ 350 ತೆರಿಗೆಯನ್ನು ಈಗ ₹ 2,500ಕ್ಕೆ ಏರಿಕೆಯಾಗಿದೆ. ಇಷ್ಟು ಪ್ರಮಾಣದ ತೆರಿಗೆ ಕಟ್ಟುತ್ತಿದ್ದರೂ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ. ಇದರಿಂದ ತೊಂದರೆಪಡುವಂತಾಗಿದೆ. ತ್ವರಿತವಾಗಿ ಸೌಲಭ್ಯ ಕಲ್ಪಿಸಿಕೊಡಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು. ಈ ಮೂಲಕ ನಮಗೆ ನೆರವಾಗಬೇಕು ಎಂಬ ಒತ್ತಾಯ ಅಲ್ಲಿನ ನಿವಾಸಿಗಳದಾಗಿದೆ.

ಆದ್ಯತೆ ನೀಡಿ ಕೆಲಸ

ನಿವಾಸಿಗಳು, ಶ್ರೀನಗರ ಬಡಾವಣೆಯ ಸಮಸ್ಯೆಗಳನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಗಮನಕ್ಕೂ ಇತ್ತೀಚೆಗೆ ತಂದಿದ್ದಾರೆ. ಗ್ರಾಮ ಪಂಚಾಯ್ತಿಗೂ ಹೊಸ ಆಡಳಿತ ಮಂಡಳಿ ಬಂದಿದೆ. ಅಲ್ಲಿ ರಸ್ತೆ ಮತ್ತು ಕಾಂಕ್ರೀಟ್ ಚರಂಡಿ ವ್ಯವಸ್ಥೆಯನ್ನು ಆದ್ಯತೆಯ ಮೇಲೆ ಮಾಡಿಕೊಟ್ಟು, ನಿವಾಸಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಗುರುವೈನವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT