ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಕುಡಿಯುವ ನೀರು ಪೂರೈಕೆಗೆ ಕ್ರಮ: ಸತೀಶ ಜಾರಕಿಹೊಳಿ

Published 18 ಮೇ 2024, 4:52 IST
Last Updated 18 ಮೇ 2024, 4:52 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ವಿವಿಧೆಡೆ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದ ಬರ ಪರಿಸ್ಥಿತಿ ಸ್ವಲ್ಪಮಟ್ಟಿಗೆ ತಗ್ಗಿದೆ. ಕೆಲವೆಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ನಮ್ಮಲ್ಲಿ ಸಾಕಷ್ಟು ಮೇವು ದಾಸ್ತಾನಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಹೊಸ ಟ್ಯಾಂಕರ್‌ ಖರೀದಿಸುವಂತೆ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಸೂಚಿಸಿದ್ದೇವೆ. ಕೆಲವರು ಹೊಸ ಟ್ಯಾಂಕರ್‌ ಖರೀದಿಸಿದ್ದಾರೆ. ಇನ್ನೂಳಿದವರು ಬಾಡಿಗೆ ಮೂಲಕ ಪಡೆದು, ನೀರು ಸರಬರಾಜು ಮಾಡುತ್ತಿದ್ದಾರೆ. ನೀರಿನ ಸಮಸ್ಯೆ ಇರುವ ಗ್ರಾಮ ಪಂಚಾಯ್ತಿಯವರು ಆಯಾ ತಹಶೀಲ್ದಾರ್‌ ಗಮನಕ್ಕೆ ತಂದರೆ, ಟ್ಯಾಂಕರ್‌ ಸರಬರಾಜು ಮಾಡಲಾಗುವುದು’ ಎಂದು ತಿಳಿಸಿದರು.

‘ಮಾನವೀಯ ದೃಷ್ಟಿಯಿಂದ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 2 ಟಿಎಂಸಿ ಅಡಿ ನೀರು ಬಿಡುವಂತೆ ಮನವಿ ಮಾಡಿದ್ದೆವು. ಆದರೆ, ಈವರೆಗೂ ಬಿಟ್ಟಿಲ್ಲ. ಹಾಗಾಗಿ ಕುಡಿಯುವ ನೀರಿನ ಅಗತ್ಯತೆ ಪೂರೈಸಲು ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿ ಮತ್ತು ಕಾಲುವೆಗಳಿಗೆ ಒಂದು ಟಿಎಂಸಿ ಅಡಿ ನೀರು ಬಿಡಲಾಗಿದ್ದು, ಅಗತ್ಯಬಿದ್ದರೆ ಮತ್ತೊಂದು ಟಿಎಂಸಿ ಅಡಿ ನೀರು ಬಿಡುತ್ತೇವೆ’ ಎಂದರು.

‘ಕುಡಿಯುವ ಉದ್ದೇಶಕ್ಕಾಗಿ ಬಿಡುಗಡೆಯಾದ ನೀರನ್ನು ಕೆಲವರು ಕೃಷಿಗಾಗಿ ಬಳಸುತ್ತಿರುವುದು ಕಂಡುಬಂದಿದೆ. ಆದರೆ, ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಳ್ಳಾರಿ ನಾಲೆ ಪ್ರವಾಹದಿಂದ ಬೆಳಗಾವಿ ನಗರದಲ್ಲಿ ರೈತರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮತ್ತು ನಾಲೆ ವಿಸ್ತರಣೆಗಾಗಿ ಭೂಮಿ ಸ್ವಾಧೀನಪಡಿಸಿಳ್ಳಲು ಲೋಕಸಭೆ ಚುನಾವಣೆ ಮಾದರಿ ನೀತಿಸಂಹಿತೆ ತೆರವಾದ ನಂತರ ಸಭೆ ನಡೆಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಸತೀಶ ಉತ್ತರಿಸಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಕೊಲೆ ಪ್ರಕರಣಗಳು ಎಲ್ಲ ಸರ್ಕಾರಗಳ ಅವಧಿಯಲ್ಲೂ ನಡೆದಿವೆ. ಇಂತಹ ಘಟನೆಗಳ ಮೇಲೆ ಪೊಲೀಸ್‌ ಇಲಾಖೆ ನಿಗಾ ವಹಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT