ಭಾನುವಾರ, ಜೂನ್ 26, 2022
26 °C

ಬೆಳಗಾವಿ: ಕನ್ನಡ ಹಾಡು ಹಾಕಿದ್ದಕ್ಕೆ ಮದುವೆ ಮೆರವಣಿಗೆ ಮೇಲೆ ಎಂಇಎಸ್ ಪುಂಡರ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಾಲ್ಲೂಕಿನ ಧಾಮಣೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಕಾರ್ಯಕರ್ತರು ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ 9 ಜನರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಘಟನೆಯಲ್ಲಿ ವರ ಸಿದ್ದು ಸೈಬಣ್ಣವರ, ವಧು ರೇಷ್ಮಾ ಸೇರಿ ಐವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

‘ನಾವು ಮೆರವಣಿಗೆಯಲ್ಲಿ ವಧು–ವರನನ್ನು ಮನೆಗೆ ಕರೆದುಕೊಂಡು ಹೋಗುತ್ತ ಕನ್ನಡ ಬಾವುಟ ಹಿಡಿದು ಕನ್ನಡ ಗೀತೆಗೆ ಕುಣಿಯುತ್ತಿದ್ದೆವು. ಇದನ್ನು ನೋಡಿ ಸಹಿಸಲಾಗದ ಎಂಇಎಸ್‌ನವರು ಗಲಾಟೆ ಮಾಡಿದ್ದಾರೆ’ ಎಂದು ಗಾಯಗೊಂಡವರು ಆರೋಪಿಸಿದ್ದಾರೆ.

‘ಅಣ್ಣನ ಮದುವೆ ಮೆರವಣಿಗೆಯಲ್ಲಿ ಕನ್ನಡ ಧ್ವಜ ಹಿಡಿದು ಕುಣಿಯುತ್ತಿದ್ದೆವು. ಎಂಇಎಸ್‌ನವರು ನಮ್ಮನ್ನು ಪಕ್ಕಕ್ಕೆ ಕರೆದು ಗಲಾಟೆ ತೆಗೆದರು. ಬಡಿಗೆಯಲ್ಲಿ ಹೊಡೆದರು’ ಎಂದು ಚಿಕಿತ್ಸೆ ಪಡೆಯುತ್ತಿರುವ ಭರಮಾ ಸೈಬಣ್ಣವರ ಎಂಬುವವರು ಆರೋಪಿಸಿದ್ದಾರೆ

‘ಎರಡು ತಿಂಗಳ ಹಿಂದೆ ಕೆಲವರು ನಮ್ಮ ಗಾಡಿಯನ್ನೂ ಸುಟ್ಟಿದ್ದರು. ನಮ್ಮ ಮನೆ ಮುಂದೆ ಚನ್ನಮ್ಮನ ಫಲಕ ಹಾಕಿದ್ದೇವೆ. ಹೀಗಾಗಿ, ಪದೇ ಪದೇ ಗಲಾಟೆ ತೆಗೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು.

*

ಹಲ್ಲೆ ಪ್ರಕರಣ ಸಂಬಂಧ 9 ಮಂದಿ ವಶ‍ಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು -ಡಾ.ಎಂ.ಬಿ. ಬೋರಲಿಂಗಯ್ಯ, ಬೆಳಗಾವಿ ನಗರ ಪೊಲೀಸ್‌ ಆಯುಕ್ತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು