ಬೆಳಗಾವಿ: ‘ಚಂದ್ರಯಾನ-3ರ ರಾಕೆಟ್, ಲ್ಯಾಂಡರ್ ಉಪಕರಣ ಮತ್ತು ರೋವರ್ ಅನ್ನು ಎತ್ತಲು ಅಗತ್ಯವಾದ ಬಿಡಿ ಭಾಗಗಳನ್ನು ಬೆಳಗಾವಿಯ ಸರ್ವೊ ಕಂಟ್ರೋಲ್ಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸಿದ್ಧಪಡಿಸಿ ನೀಡಲಾಗಿದೆ. ಈ ಮೂಲಕ ಬೆಳಗಾವಿಯ ಹಿರಿಮೆ ಚಂದ್ರನವರೆಗೆ ಚಿಮ್ಮಿದೆ’ ಎಂದು ಸರ್ವೊ ಕಂಟ್ರೋಲ್ಸ್ ಏರೊಸ್ಪೇಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಧಡೋತಿ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಸ್ರೊ ಜೊತೆಗೆ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಚಂದ್ರಯಾನ-2ರಲ್ಲೂ ಬಿಡಿಭಾಗಗಳನ್ನು ಪೂರೈಸಿದ್ದೇವು. ಮುಂದಿನ ಎಲ್ಲ ಅಂತರಿಕ್ಷ ಪ್ರಯೋಗಗಳಿಗೂ ನಾವು ಕೈಜೋಡಿಸುತ್ತೇವೆ’ ಎಂದರು.
‘ಥ್ರಸ್ಟ್ ಕಂಟ್ರೋಲ್‌ಗಳು, ಹೈಡ್ರಾಲಿಕ್‌ಗಳು, ಕ್ರಯೋಜೆನಿಕ್ ಸೆನ್ಸರ್‌ಗಳು, ಲ್ಯಾಂಡರ್ ಸಬ್‌ಜಾಯಿಂಟ್ಸ್, ರೋವರ್‌ನ ಸೋಲಾರ್ ಪ್ಯಾನಲ್‌ನ ಸೆನ್ಸರ್‌ಗಳು ಮತ್ತು ಇತರ ಬಿಡಿಭಾಗಗಳು ಕೂಡ ನಮ್ಮಲ್ಲೇ ಸಿದ್ಧಗೊಂಡಿದೆ. ಸೋಲಾರ್ ಪ್ಯಾನಲ್ ತೆರೆದುಕೊಳ್ಳುವಲ್ಲಿ ಈ ಸೆನ್ಸರ್ ಪರಿಕರಗಳು ಬಳಕೆ ಆಗುತ್ತವೆ. ‘ವಿಕ್ರಮ್ ಲ್ಯಾಂಡರ್’ನ ಪೂರ್ಣ ಚಲನವಲನ ಸೆನ್ಸರ್ ಮೇಲೆಯೇ ಅವಲಂಬಿತವಾಗಿದೆ. ಹೀಗಾಗಿ, ಈ ಚಂದ್ರಯಾನದ ಪ್ರತಿ ಹೆಜ್ಜೆಯಲ್ಲೂ ನಮ್ಮ ಕಾಣಿಕೆ ಇರಲಿದೆ’ ಎಂದರು.
‘ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್ ಭಾರತದ ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಆಧಾರವಾಗಿದೆ. ಮುಂದಿನ ವರ್ಷಗಳಲ್ಲಿ ಚಂದ್ರನು ವಿವಿಧ ಗ್ರಹಗಳ ಕಡೆಗೆ ಪ್ರಯಾಣಿಸಲು ‘ಜಂಕ್ಷನ್’ ಆಗಿ ಕಾರ್ಯನಿರ್ವಹಿಸಬಹುದು’ ಎಂದು ಅವರು ಅಭಿಪ್ರಾಯ ಪಟ್ಟರು.
‘ಚಂದ್ರಯಾನ–3ರ ಯಶಸ್ಸು ದೊಡ್ಡ ಬದಲಾವಣೆ ತರಲಿದೆ. ‘ನಾಸಾ’ ಈಗ ಮಾನವಸಹಿತ ಕಾರ್ಯಾಚರಣೆಗೆ ಸಿದ್ಧವಾಗಿದೆ. ಮುಂದಿನ 10 ವರ್ಷಗಳಲ್ಲಿ ‘ಇಸ್ರೊ’ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದ್ದು, ನಾಸಾ ಹಾಗೂ ಇಸ್ರೊ ನಡುವಿನ ಅಂತರ ಕಡಿಮೆ ಆಗಲಿದೆ’ ಎಂದೂ ಹೇಳಿದರು.
ಕಾಲೇಜಿನಲ್ಲಿ ಸೆಟಲೈಟ್ ಲ್ಯಾಬ್: ‘ತಾಲ್ಲೂಕಿನ ಶಿಂಧೊಳ್ಳಿಯ ಮೋತಿಚಂದ್ ಲೇಂಗಡೆ ಭರತೇಶ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅತ್ಯಾಧುನಿಕ ಸೆಟಲೈಟ್ ಪ್ರಯೋಗಾಲಯವನ್ನು ನಮ್ಮ ಕಂಪನಿ ನಿರ್ಮಿಸಿದೆ. ನ್ಯಾನೋ ಉಪಗ್ರಹವನ್ನು ಕೊಡುಗೆಯಾಗಿ ನೀಡಲಾಗಿದೆ. ಬೆಳಗಾವಿಯ ವಿದ್ಯಾರ್ಥಿಗಳ ಅಂತರಿಕ್ಷ ವಿಜ್ಞಾನದ ಅಧ್ಯಯನಕ್ಕೆ ಅನುಕೂಲವಾಗಲಿದೆ. ವಿಕ್ರಮ್ ಲ್ಯಾಂಡರ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬ ಮಾದರಿಯನ್ನೂ ಅಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ’ ಎಂದರು.
ಜಿಐಟಿ ಕಾಲೇಜಿನ ಏರೋನಾಟಿಕಲ್ ವಿಭಾಗದ ವಿದ್ಯಾರ್ಥಿನಿ ಸೋನಾಲಿ ಮಿಸಾರಿ ಮಾತನಾಡಿ, ‘ಚಂದ್ರಯಾನ-3ರಲ್ಲಿ ಬಿಡಿಭಾಗಗಳನ್ನು ಪೂರೈಕೆ ಮಾಡಿರುವ ಕಂಪನಿಯಲ್ಲಿ ನಾನು ಪ್ರಶಿಕ್ಷಣ ಪಡೆಯುತ್ತಿದ್ದೇನೆ. ಇದೊಂದು ಸುವರ್ಣಾವಕಾಶ’ ಎಂದರು.
ಭರತೇಶ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ವಿನೋದ ದೊಡ್ಡಣ್ಣನವರ ಮಾತನಾಡಿ, ‘₹2 ಕೋಟಿ ಮೌಲ್ಯದ ಧಡೋತಿ ನ್ಯಾನೋ ಉಪಗ್ರಹವನ್ನು ಕಾಲೇಜಿಗೆ ದೇಣಿಗೆ ನೀಡಲಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲಕರ’ ಎಂದರು.
*
‘ಅಬ್ದುಲ್ ಕಲಾಂ ಪ್ರೇರಣೆ’
‘ನಾನು ಅಮೆರಿಕದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಭಾರತಕ್ಕೆ ಬಂದು ಕಂಪನಿ ತೆರೆಯುವಂತೆ ಪ್ರೇರಣೆ ನೀಡಿದರು. ಅವರ ಸ್ಫೂರ್ತಿಯಿಂದ ತಾಯ್ನಾಡಿಗೆ ಬಂದು ಈ ಉದ್ದಿಮೆ ಆರಂಭಿಸಿದೆ’ ಎಂದು ದೀಪಕ್ ಧಡೋತಿ ಹೇಳಿದರು.
‘ಅಬ್ದುಲ್ ಕಲಾಂ ಅವರ ಜೊತೆ ಕೆಲಸ ಮಾಡುವ ಅವಕಾಶ ಕೂಡ ನನಗೆ ಸಿಕ್ಕಿತ್ತು. 2007ರಲ್ಲಿ ಹೈದರಾಬಾದ್‌ನಲ್ಲಿ ಅವರು ಹೇಳಿದ ಕೆಲವು ಕೆಲಸ ಮಾಡಿದ ತೃಪ್ತಿ ಇದೆ’ ಎಂದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.