ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಸಕರ ನಿಧಿ’ ಬಳಕೆಯಲ್ಲಿ ಬೆಳಗಾವಿ ಜಿಲ್ಲೆ ಶಾಸಕರು ಮುಂದು

ಅನೇಕ ಕೆಲಸಗಳಿಗೆ ಅನುದಾನ
Last Updated 4 ಅಕ್ಟೋಬರ್ 2021, 21:45 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯ ಸರ್ಕಾರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ (ಶಾಸಕರ ನಿಧಿ) ನಿಗದಿಪಡಿಸಿರುವ ಅನುದಾನವನ್ನು ಬಳಸುವಲ್ಲಿಬೆಳಗಾವಿ ಜಿಲ್ಲೆಯ ಶಾಸಕರು ಮುಂದಿದ್ದಾರೆ.

ಬಹುತೇಕರು ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡು ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಶಾಸಕರ ವೇಗಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಆಗದಿರುವುದು ಕೂಡ ಅಲ್ಲಲ್ಲಿ ಕಂಡುಬಂದಿದೆ!

ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಅವುಗಳಲ್ಲಿನ ಶಾಸಕರಿಗೆ 2018-19ರಲ್ಲಿ ತಲಾ ₹2 ಕೋಟಿ, 2019–20ರಲ್ಲಿ ತಲಾ ₹2 ಕೋಟಿ ಬಿಡುಗಡೆ ಆಗಿತ್ತು. 2020–21ರಲ್ಲಿ ಕೋವಿಡ್‌ ಕಾರಣ ಸರ್ಕಾರ ಅನುದಾನ ಕಡಿತಗೊಳಿಸಿ ತಲಾ ₹1 ಕೋಟಿ ನೀಡಿತ್ತು. ಅಂದರೆ, ಮೂರು ವರ್ಷಗಳಲ್ಲಿ ತಲಾ ₹ 5 ಕೋಟಿಯಂತೆ ಒಟ್ಟು ₹ 90 ಕೋಟಿ ಬಿಡುಗಡೆ ಆಗಿದೆ. ಅದರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ.

2021–22ನೇ ಸಾಲಿನಲ್ಲಿ ತಲಾ ₹ 2 ಕೋಟಿ ಸಿಗುವ ನಿರೀಕ್ಷೆ ಶಾಸಕರದಾಗಿದೆ. ಸೆಪ್ಟೆಂಬರ್‌ವರೆಗೆ ಎರಡು ಹಂತಗಳಲ್ಲಿ ತಲಾ ₹50 ಲಕ್ಷ ಬಿಡುಗಡೆ ಆಗಿದೆ. ಬಹುತೇಕ ಶಾಸಕರು ಈಗಾಗಲೇ ಕಾಮಗಾರಿ ಪಟ್ಟಿ ಸಲ್ಲಿಸಿದ್ದು, ಕೆಲವರು ಇನ್ನೂ ಸಲ್ಲಿಸಿಲ್ಲ. ಶಾಸಕರ ನಿಧಿಯಲ್ಲಿ ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿ ಕೆಲಸಗಳಿಗೆ ಸಿಂಹಪಾಲು ಬಳಕೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ಇಲ್ಲಿನ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಈ ನಿಧಿಯನ್ನು ವಿನೂತನ ಕಾರ್ಯಗಳಿಗೆ ಬಳಸಿ ಗಮನಸೆಳೆದಿದ್ದಾರೆ. ₹ 2.50 ಕೋಟಿ ವೆಚ್ಚದಲ್ಲಿ (ಮೂರು ಹಂತದಲ್ಲಿ ನೀಡಿದ್ದಾರೆ) ಇಲ್ಲಿನ ಗೋವಾವೇಸ್ ಸಮೀಪದಲ್ಲಿ ತಿನಿಸುಕಟ್ಟೆ ನಿರ್ಮಿಸಿದ್ದಾರೆ. ಅಲ್ಲಿನ ಮಳಿಗೆಗಳನ್ನು ಕೊಡುವಾಗ ಮಹಿಳಾ ಉದ್ಯಮಿಗಳಿಗೆ ಆದ್ಯತೆ ಕೊಟ್ಟಿದ್ದಾರೆ. ವೈವಿಧ್ಯ ಅಂಗಡಿಗಳು ಅಲ್ಲಿವೆ. ವಿಶೇಷ ತಿಂಡಿ–ತಿನಿಸುಗಳು ಲಭ್ಯವಾಗುತ್ತವೆ. ಹೀಗಾಗಿ, ಇದರಿಂದ ಗ್ರಾಹಕರಿಗೂ ಅನುಕೂಲವಾಗಿದೆ. ಇತರ ಶಾಸಕರು ವೀಕ್ಷಿಸಿದ್ದು, ಈ ಮಾದರಿಯನ್ನು ತಮ್ಮ ಕ್ಷೇತ್ರದಲ್ಲೂ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಧಿಯನ್ನು ಆರೋಗ್ಯ ವ್ಯವಸ್ಥೆಯ ವೃದ್ಧಿಗೆ ಅವರು ನೀಡಿದ್ದಾರೆ.

ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೆಂಟಿಲೇಟರ್ ಬದಲಿಗೆ ಬಳಸುವುದಕ್ಕಾಗಿ 4 ‘ಹೈ ಫ್ಲೋ ನೇಸಲ್ ಕೆನೂಲಾ ಆಕ್ಸಿಜನ್’ ಉಪಕರಣಗಳನ್ನು ಅವರು ಬಿಮ್ಸ್ ಆಸ್ಪತ್ರೆಗೆ ಸಮರ್ಪಿಸಿದ್ದಾರೆ. ₹ 15 ಲಕ್ಷ ವೆಚ್ಚದಲ್ಲಿ ಬಿಮ್ಸ್‌ ಆಸ್ಪತ್ರೆಗೆ ಆಂಬುಲೆನ್ಸ್ ಕೊಡಿಸಿದ್ದಾರೆ. ಕೋವಿಡ್ ಸೋಂಕಿತರಿಗೆ ಅನುಕೂಲಕ್ಕಾಗಿ 15 ಆಮ್ಲಜನಕ ಸಾಂದ್ರಕಗಳನ್ನು ಕೊಡಿಸಿದ್ದಾರೆ.

‘ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯ ವೃದ್ಧಿಸುವುದು ಅತ್ಯಂತ ಅಗತ್ಯವಾಗಿತ್ತು. ಹೀಗಾಗಿ, ಶಾಸಕರ ನಿಧಿಯ ಅನುದಾನದೊಂದಿಗೆ ವೈಯಕ್ತಿಕವಾಗಿಯೂ ಸಾಕಷ್ಟು ಆರ್ಥಿಕ ನೆರವು ನೀಡಿದ್ದೇನೆ. ತಿನಿಸು ಕಟ್ಟೆಯ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿವಿಧ ಸಮಾಜದ ಎಂಟು ಸಮುದಾಯ ಭವನಗಳಿಗೆ ಆರ್ಥಿಕ ನೆರವು ಕೊಟ್ಟಿದ್ದೇನೆ’ ಎಂದು ಅಭಯ ಪಾಟೀಲ ತಿಳಿಸಿದರು.

ಜಿಲ್ಲಾಡಳಿತದ ಮಾಹಿತಿ ‍ಪ್ರಕಾರ, ಅವರು 2018–19ರಲ್ಲಿ ಅವರು ಶಿಫಾರಸು ಮಾಡಿದ್ದರಲ್ಲಿ ₹1,71 ಕೋಟಿ ಮೊತ್ತದ 10 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿತ್ತು. ಅವು ಪ್ರಗತಿಯಲ್ಲಿವೆ. 2019–20ರಲ್ಲಿ ₹ 63 ಲಕ್ಷ ಮೊತ್ತದಲ್ಲಿ ಮೂರು ಕಾಮಗಾರಿ ಕೈಗೊಳ್ಳಲಾಗಿತ್ತು. 2 ಮುಗಿದಿವೆ. ಒಂದು ಪ್ರಗತಿಯಲ್ಲಿದೆ. 2020–21ರಲ್ಲಿ 3ಕ್ಕೆ ಮಂಜೂರಾತಿ ಸಿಕ್ಕಿದೆ. 1 ಪೂರ್ಣಗೊಂಡಿದೆ. 2 ಪ್ರಗತಿಯಲ್ಲಿವೆ. 2021–22ರಲ್ಲಿ ಈವರೆಗೆ ಒಂದು ಪ್ರಗತಿಯಲ್ಲಿದೆ. ಇನ್ನೊಂದು ಪೂರ್ಣಗೊಂಡಿದೆ. ಸರ್ಕಾರದಿಂದ ₹ 1 ಕೋಟಿ ಅನುದಾನ ಬಿಡುಗಡೆ ಬಾಕಿ ಇದೆ.

‘ಸಕಾಲಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇನೆ’ ಎನ್ನುತ್ತಾರೆ ಅವರು.

ಯಾವ್ಯಾವುದಕ್ಕೆ ಬಳಸಬಹುದು?

ಶಾಸಕರ ನಿಧಿಯ ಅನುದಾನ ಜಿಲ್ಲಾಧಿಕಾರಿಗಳ ಪಿ.ಡಿ. (ವೈಯಕ್ತಿಕ ಠೇವಣಿ) ಖಾತೆಗೆ ಹೋಗುತ್ತದೆ. ಹಣ ಪೋಲಾಗದಂತೆ ಮತ್ತು ನಿಗದಿತ ಬಾಬ್ತುಗಳಿಗೆ ಖರ್ಚಾಗುವಂತೆ ನೋಡಿಕೊಳ್ಳಲು ಸರ್ಕಾರ ಈ ವಿಧಾನ ಅನುಸರಿಸುತ್ತಿದೆ. ಸಮುದಾಯ ಭವನ, ದೇವಾಲಯ ಅಭಿವೃದ್ಧಿ, ಗ್ರಾಮೀಣ ಭಾಗದ ರಸ್ತೆ, ಚರಂಡಿ, ಕುಡಿಯುವ ನೀರು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಬಸ್ಸು ತಂಗುದಾಣ, ಗ್ರಂಥಾಲಯ ಹೀಗೆ... ಬಳಸಬಹುದು. ಶಾಸಕರು ಮಾಡುವ ಶಿಫಾರಸು ಆಧರಿಸಿ ನಿಯಮಾವಳಿ ಪ್ರಕಾರ ಅವಕಾಶವಿದ್ದಲ್ಲಿ ಹಣವನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಬಿಡುಗಡೆ ಮಾಡಲಾಗುತ್ತದೆ.

ಅನುದಾನ ನೀಡಿದ್ದೇನೆ

ವಿವಿಧ ಸಮಾಜದವರು ಸಮುದಾಯ ಭವನ ನಿರ್ಮಾಣಕ್ಕೆ ಹಣ ಕೊಡುವಂತೆ ಮನವಿ ಸಲ್ಲಿಸುತ್ತಾರೆ. ಅದಕ್ಕೆ ಸ್ಪಂದಿಸಲೇಬೇಕಾಗುತ್ತದೆ. ಹೀಗಾಗಿ, ಶಾಸಕರ ನಿಧಿಯಲ್ಲಿ ಅನುದಾನ ನೀಡಿದ್ದೇನೆ.

–ಅಭಯ ಪಾಟೀಲ, ಶಾಸಕ, ದಕ್ಷಿಣ ಮತಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT