ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಎಫೆಕ್ಟ್‌: ಮೊಬೈಲ್‌ ಗೀಳಿನತ್ತ ಮಕ್ಕಳು, ಪಾಲಕರ ಆತಂಕ

Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ ಘೋಷಣೆಯಿಂದಾಗಿ ಒಂದು ವಾರದಿಂದಲೂ ಮನೆಯಲ್ಲಿರುವ ಮಕ್ಕಳು ಟಿ.ವಿ ಹಾಗೂ ಮೊಬೈಲ್‌ಗೆ ಮೊರೆ ಹೋಗಿದ್ದು, ಇದು ಗೀಳಾಗಿ ಅಂಟಿಕೊಳ್ಳುವ ಆತಂಕ ಪಾಲಕರಲ್ಲಿ ಮೂಡಿದೆ. ಲಾಕ್‌ಡೌನ್‌ ತೆರವಾಗಲು ಇನ್ನೂ ಎರಡು ವಾರಗಳ ಸಮಯವಿದ್ದು, ಮುಂದೇನಾಗುವುದೋ ಎನ್ನುವ ಭಯದಲ್ಲಿದ್ದಾರೆ.

ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಜನರ ನಡುವಿನ ಸಂಪರ್ಕವನ್ನು ತಡೆಯಲು ಲಾಕ್‌ಡೌನ್‌ ಘೋಷಿಸಿದೆ. ತುರ್ತು ಸಂದರ್ಭಗಳನ್ನು ಹೊರತುಪಡಿಸಿದರೆ ಯಾರೂ ಮನೆಯಿಂದ ಹೊರಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಸರ್ಕಾರಿ ಕಚೇರಿಗಳು ಸೇರಿದಂತೆ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಿದೆ.

ವಾರ್ಷಿಕ ಪರೀಕ್ಷೆಗಳನ್ನು ರದ್ದುಪಡಿಸಿರುವುದರಿಂದ ಹಾಗೂ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಮಕ್ಕಳು ಮನೆಯಲ್ಲಿದ್ದಾರೆ. ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಲಾಕ್‌ಡೌನ್‌ ಆಗಿದ್ದರಿಂದ ನೆಂಟರ ಮನೆಗಾಗಲೀ, ಪ್ರವಾಸಿ ತಾಣಗಳಿಗಾಗಲಿ, ಸಿನಿಮಾ, ಪಾರ್ಕ್‌ಗಳಿಗೆ ಹೋಗಲಾಗುತ್ತಿಲ್ಲ. ದಿನದ 24 ತಾಸೂ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಅಕ್ಕಪಕ್ಕದ ಮನೆಗಳ ಮಕ್ಕಳೂ ಹೊರಗೆ ಬರುತ್ತಿಲ್ಲ. ಮೈದಾನಗಳಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಪ್ರತಿ ಮನೆಗಳ ಮಕ್ಕಳು ತಮ್ಮ ತಮ್ಮಲ್ಲಿಯೇ ಆಟವಾಡುತ್ತಿದ್ದಾರೆ. ಆಟಕ್ಕೆ ಯಾರೂ ಸಿಗದಿದ್ದಾಗ ಟಿ.ವಿ, ಮೊಬೈಲ್‌ಗೆ ಮೊರೆ ಹೋಗುತ್ತಿದ್ದಾರೆ. ಹೇಗೋ ಸಮಯ ಕಳೆಯಲಿ ಎಂದುಕೊಂಡು ಪಾಲಕರು ಕೂಡ ಕಟ್ಟುನಿಟ್ಟಾಗಿ ತಡೆಯೊಡ್ಡುತ್ತಿಲ್ಲ.

ಮೊಬೈಲ್‌ಗೆ ಹೆಚ್ಚು:ಲಾಕ್‌ಡೌನ್‌ ಅವಧಿಯಲ್ಲಿ ಜನರಿಗೆ ಟೈಂ ಪಾಸ್‌ ಆಗಲೆಂದು ರಾಮಾಯಣ, ಮಹಾಭಾರತ, ಸರ್ಕಸ್‌, ಬ್ಯೂಮಕೇಷ್‌ ಬಕ್ಷಿಯಂತಹ ಯಶಸ್ವಿ ಧಾರಾವಾಹಿಗಳನ್ನು ದೂರದರ್ಶನ ವಾಹಿನಿ ಪುನಃ ಪ್ರಸಾರ ಮಾಡುತ್ತಿದೆ. ಇದೇ ರೀತಿ, ಕೆಲವು ಖಾಸಗಿ ವಾಹಿನಿಗಳು ಕೂಡ ತಮ್ಮ ಜನಪ್ರಿಯ ಧಾರಾವಾಹಿಗಳನ್ನು ಮರುಪ್ರಸಾರ ಮಾಡುತ್ತಿವೆ. ಹೊಸ ಚಲನಚಿತ್ರಗಳನ್ನೂ ಪ್ರಸಾರ ಮಾಡುತ್ತಿವೆ.

ಟಿ.ವಿ.ಗಿಂತ ಮೊಬೈಲ್‌ನತ್ತ ಹೆಚ್ಚು ಮಕ್ಕಳು ಆಕರ್ಷಿತರಾಗಿದ್ದಾರೆ. ಮೊಬೈಲ್‌ನಲ್ಲಿ ಬರುವ ವಿಡಿಯೊ ಗೇಮ್‌, ವಾಟ್ಸ್‌ ಆ್ಯಪ್‌ ವಿಡಿಯೊ, ಟಿಕ್‌ಟಾಕ್‌ ವಿಡಿಯೊಗಳನ್ನು ವೀಕ್ಷಿಸುತ್ತಿದ್ದಾರೆ. ಅಕ್ಕಪಕ್ಕದ ಮನೆಯ ಮಕ್ಕಳೂ ಸೇರಿಸಿಕೊಂಡು ವಿಡಿಯೊ ಗೇಮ್‌ ಆಡುತ್ತಿದ್ದಾರೆ. ಟಿ.ವಿ ರಿಮೋಟ್‌ಗಿಂತ ಮೊಬೈಲ್‌ ಹ್ಯಾಂಡ್‌ಸೆಟ್‌ ಹೆಚ್ಚಾಗಿ ಕಾಣುತ್ತಿದೆ.

ಅನಿವಾರ್ಯತೆ:ಇಂದಿನ ವಿಭಜಿತ ಕುಟುಂಬ (ನ್ಯೂಕ್ಲಿಯರ್‌ ಫ್ಯಾಮಿಲಿ) ವ್ಯವಸ್ಥೆಯಲ್ಲಿ ಗಂಡ, ಹೆಂಡತಿ ಹಾಗೂ ಒಬ್ಬ ಅಥವಾ ಇಬ್ಬರು ಮಕ್ಕಳು ಇರುವುದು ಸಾಮಾನ್ಯ. ಜೊತೆಗೆ ಅಕ್ಕಪಕ್ಕದ ಮನೆಯವರ ಜೊತೆ ಸಂಪರ್ಕವೂ ಅಷ್ಟಕಷ್ಟೆ. ಹೀಗಾಗಿ ಆಟವಾಡಲು ಯಾರೂ ಇಲ್ಲದಂತಾಗಿ ಮಕ್ಕಳು ಟಿ.ವಿ, ಮೊಬೈಲ್‌ಗಳತ್ತ ಆಕರ್ಷಿತಗೊಂಡಿದ್ದಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪಾಲಕರು, ತಮ್ಮ ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುವ ಮೂಲಕ ಮೊಬೈಲ್‌ ಗೀಳು ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಮನಶಾಸ್ತ್ರಜ್ಞರು ಸಲಹೆ ನೀಡುತ್ತಾರೆ.

ಮನಶಾಸ್ತ್ರಜ್ಞರ ಸಲಹೆ:‘ಲಾಕ್‌ಡೌನ್‌ ಅವಧಿಯಲ್ಲಿ ಮಕ್ಕಳತ್ತ ಹೆಚ್ಚಿನ ಗಮನ ಹರಿಸಬೇಕು. ಟಿ.ವಿ ಅಥವಾ ಮೊಬೈಲ್‌ ಗೀಳು ಅಂಟಿಕೊಳ್ಳದಂತೆ ಪಾಲಕರು ನೋಡಿಕೊಳ್ಳುವುದು ಅವಶ್ಯಕವಾಗಿದೆ’ ಎಂದು ಮನೋರೋಗ ತಜ್ಞ ಎಸ್‌.ಎಸ್‌. ಚಾಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಕರು ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯಬೇಕು. ಮಾತನಾಡುವುದು, ಚಿತ್ರ ಬಿಡಿಸುವುದು, ಹಾಡು– ಸಂಗೀತದಲ್ಲಿ (ಅಂತಾಕ್ಷರಿ) ತೊಡಗಿಕೊಳ್ಳಬೇಕು. ಮನೆ ಉದ್ಯಾನದಲ್ಲಿ ಸಮಯ ಕಳೆಯಬೇಕು, ಮಕ್ಕಳನ್ನೂ ಸೇರಿಸಿಕೊಂಡು ಮನೆಗೆಲಸ ಮಾಡಬಹುದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT