ಎಂ.ಕೆ.ಹುಬ್ಬಳ್ಳಿ: ‘ಮುಡಾ ಹಗರಣದಲ್ಲಿ ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿದರು.
ಚನ್ನಮ್ಮನ ಕಿತ್ತೂರು ತಾಲೂಕಿನ ಕಾದರವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ಈ ಮುಂಚೆ ರಾಜೀನಾಮೆ ಕೇಳಿದಾಗ, ಪ್ರಕರಣ ದಾಖಲಾಗಿದೆಯಾ ಎಂದು ಪ್ರಶ್ನಿಸುತ್ತಿದ್ದರು. ಈಗ ಎಫ್ಐಆರ್ ದಾಖಲಾಗಿದೆ. ಈಗ್ಯಾಕೆ ರಾಜೀನಾಮೆ ಕೊಡಲು ಹಿಂಜರಿಯುತ್ತಿದ್ದೀರಾ? ತಪ್ಪು ಮಾಡದಿದ್ದರೆ, ಹೆದರುವ ಅವಶ್ಯಕತೆ ಇಲ್ಲ’ ಎಂದರು.
‘ರಾಜ್ಯದಲ್ಲಿ ರಸ್ತೆ ಕಾಮಗಾರಿ ಸೇರಿ ಯಾವುದೇ ಹೇಳಿಕೊಳ್ಳುವಂತ ಅಭಿವೃದ್ದಿ ಕಾರ್ಯ ನಡೆದಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲೇ ಕೆಲಸ ನಡೆಯುತ್ತಿವೆ. ಎಸ್‌ಸಿ, ಎಸ್‌ಟಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ ಪಾಟೀಲ, ದಾದಾಗೌಡ ಬಿರಾದರ, ಚೇತನ್ ಅಂಗಡಿ, ಸಂದೀಪ ದೇಶಪಾಂಡೆ, ಶ್ರೀಕರ ಕುಲಕರ್ಣಿ, ಚನ್ನಬಸಪ್ಪ ಮೊಕಾಶಿ, ನಿಜಲಿಂಗಯ್ಯ ಹಿರೇಮಠ, ಬಸವರಾಜ ಪರವನ್ನವರ, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.