ಭಾನುವಾರ, ಸೆಪ್ಟೆಂಬರ್ 27, 2020
24 °C

ಬಹುಗ್ರಾಮ ಯೋಜನೆಯೂ ವಿಫಲ; ರಾಯಬಾಗ ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಪರದಾಟ

ಮಲ್ಲಪ್ಪ ರಾಮದುರ್ಗ Updated:

ಅಕ್ಷರ ಗಾತ್ರ : | |

Prajavani

ರಾಯಬಾಗ: ಬಿಸಿಲಿನ ಝಳ ಹೆಚ್ಚಾದಂತೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.

ತಾಲ್ಲೂಕಿನ ಜೀವನಾಡಿಯಾದ ಕೃಷ್ಣಾನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಜನರು ಜೀವಜಲಕ್ಕಾಗಿ ಪರದಾಡುತ್ತಿದ್ದಾರೆ.

ಈ ಭಾಗದಲ್ಲಿನ ಬೆಳೆಗಳು ಒಣಗುತ್ತಿವೆ. ನದಿಯಲ್ಲಿ ನೀರಿಲ್ಲದೇ ಇರುವುದರಿಂದ ಇಲ್ಲಿನ ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಕೂಡ ಸಂಪೂರ್ಣವಾಗಿ ಸ್ಥಗಿತಗೊಂಡಿವೆ.‌

ರಾಯಬಾಗ ಮತಕ್ಷೇತ್ರದ ದಿಗ್ಗೇವಾಡಿ, ಕಂಚಕಾರವಾಡಿ, ಹಾಗೂ ಬೆಂಡವಾಡದ ಬಹುಗ್ರಾಮ ಯೋಜನೆಗೆ ನೀರು ದೊರೆಯುತ್ತಿಲ್ಲ. ಅದೇ ರೀತಿ ಕುಡಚಿ ಕ್ಷೇತ್ರದ ಸುಟ್ಟಿಟ್ಟಿ ಮೊರಬ, ನಿಲಜಿ, ಶಿರಗೂರ ಹಾಗೂ ಸುಲ್ತಾನಪುರ, ಕಪ್ಪಲಗುದ್ದಿ ಗ್ರಾಮಗಳ ಯೋಜನೆಯಿಂದಲೂ ಪ್ರಯೋಜನವಾಗುತ್ತಿಲ್ಲ.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜಲಕುಂಭಗಳಿದ್ದು ಅವೂ ಬರಿದಾಗುತ್ತಿವೆ. ನೀರಿಗಾಗಿ ಜನರು ಜಲಕುಂಭಗಳ ಬಳಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಕೆರೆ ಕಟ್ಟೆಗಳು ಬತ್ತಿರುವುದರಿಂದ, ಜಾನುವಾರುಗಳಿಗೂ ನೀರಿನ ತತ್ವಾರ ಉಂಟಾಗಿದೆ. ತಾಲ್ಲೂಕು ಆಡಳಿತದಿಂದ 11 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸುತ್ತಿದೆ.

‘ತಾಲ್ಲೂಕಿನ 39 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಕಾಮಗಾರಿ ಭರದಿಂದ ಸಾಗಿದೆ. ಆದರೆ, ಅದು ಈ ವರ್ಷ ಸಾಧ್ಯವಾಗುವ ಸಾಧ್ಯತೆ ಇಲ್ಲ. ಕೆರೆ ತುಂಬಿಸುವ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮುಂಗಾರು ಹಂಗಾಮಿನಲ್ಲಿ ನೀರು ತುಂಬುವಂತೆ ನೋಡಿಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಕೋರಲು ಶೀಘ್ರವೇ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಭೇಟಿಯಾಗಲು ನಿಯೋಗ ತೆರಳಲಿದೆ’ ಎಂದು ಶಾಸಕ ಡಿ.ಎಂ. ಐಹೊಳೆ ಪ್ರತಿಕ್ರಿಯಿಸಿದರು.‌

‘ಪಟ್ಟಣಕ್ಕೆ ಜೀವನಾಡಿಯಾದ ಹುಲ್ಯಾಳ ಕೆರೆಯಲ್ಲಿ 15 ದಿನಗಳವರೆಗೆ ಸಾಕಾಗುವಷ್ಟು ಮಾತ್ರವೇ ನೀರಿದೆ. ಆದರೆ, ಪಟ್ಟಣದ ಜಲಕುಂಭಗಳಲ್ಲಿ ನೀರಿದೆ. ಹೊಸದಾಗಿ ಕೊಳವೆಬಾವಿ ಕೊರೆಯುವ ಬದಲಿಗೆ ಇರುವ ಕೊಳವೆಬಾವಿ ಹಾಗೂ ಜಲಕುಂಭಗಳಿಂದ ಮನೆ ಮನೆಗಳಿಗೆ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ’ ಎಂದು ಪಟ್ಟಣ ಪಂಚಾಯ್ತಿ ಎಂಜಿನಿಯರ್‌ ಎಸ್.ಆರ್. ಚೌಗಲಾ ತಿಳಿಸಿದರು.

‘ತಾಲ್ಲೂಕಿನಲ್ಲಿ 987 ಕೈಪಂಪ್‌ಗಳಲ್ಲಿ 456 ಚಾಲ್ತಿಯಲ್ಲಿವೆ. 783 ಸಬ್ ಮರ್ಸಿಬಲ್‌ ಪಂಪ್‌ಗಳಲ್ಲಿ 545 ಚಾಲ್ತಿಯಲ್ಲಿವೆ. ಕುಡಿಯುವ ನೀರಿನ ವಿಷಯವಾಗಿ ಕೆಲಸ ಮಾಡಲು ಅನುದಾನದ ಕೊರತೆ ಇಲ್ಲ’ ಎಂದು ತಾಲ್ಲೂಕು ಪಂಚಾಯ್ತಿ ಇಒ ಪ್ರಕಾಶ ಹಾಲಮ್ಮನವರ ಹೇಳಿದರು.

‘ಕೃಷ್ಣಾ ನದಿಯ ದಡದಲ್ಲಿದ್ದರೂ ನಮಗೆ ಕುಡಿಯುವ ನೀರಿನ ಸಮಸ್ಯೆ ಇದೆ. ನಾವೇ ಟ್ಯಾಂಕರ್‌ ಮೂಲಕ ನೀರು ತರಿಸುತ್ತೇವೆ’ ಎಂದು ಸೌಂದತ್ತಿಯ ಈರಗೌಡ ಪಾಟೀಲ ತಿಳಿಸಿದರು. ‘ಸರ್ಕಾರ ಕೂಡಲೇ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ತಾಲ್ಲೂಕು ಆಡಳಿತ ಬರ ನಿರ್ವಹಣೆಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನ ಸುಲ್ತಾನಪುರ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಭಾಗಶಃ ಪೂರ್ಣಗೊಳ್ಳುವ ಹಂತದಲ್ಲಿದೆ. ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಕುಡಚಿ ಶಾಸಕ ಪಿ.ರಾಜೀವ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು