ಶನಿವಾರ, ನವೆಂಬರ್ 28, 2020
18 °C
ಕೈ ಎರಡು ತುಂಡು ಮಾಡಿದ ದುಷ್ಕರ್ಮಿಗಳು

ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇಲ್ಲಿನ ಶಿವಬಸವ ನಗರದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ಮೃತನನ್ನು ಸಂಗಮೇಶ್ವರ ನಗರದ ಶೈಬಾಜ ಶೇರಖಾನ ಪಠಾಣ (24) ಎಂದು ಗುರುತಿಸಲಾಗಿದೆ.

ಬರ್ತ್‌ಡೇ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಗುಂಪೊಂದು ಆತನನ್ನು ಹಿಂಬಾಲಿಸಿದೆ. ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ದಾಳಿಗೆ ಮುಂದಾಗಿದೆ. ಆಗ, ಶೈಬಾಜ್‌ ದ್ವಿಚಕ್ರವಾಹನ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ದುಷ್ಕರ್ಮಿಗಳು ಆತನನ್ನು ಬೆನ್ನಟ್ಟಿ ಕೊಚ್ಚಿ ಕೊಂದಿದ್ದಾರೆ. ಕೈಯನ್ನು ಕತ್ತರಿಸಿ ಎರಡು ಭಾಗ ಮಾಡಿದ್ದಾರೆ. ಮಚ್ಚಿನಿಂದ ಕುತ್ತಿಗೆಗೂ ಹೊಡೆದಿದ್ದಾರೆ. ಗ್ಯಾಂಗ್‌ವಾಡಿ ಪ್ರದೇಶದಲ್ಲಿ ಆತನನ್ನು ಕೆಲವರು ಹಿಂಬಾಲಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿಗಳ ಬಂಧನ:

‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಮುತ್ಯಾನಟ್ಟಿಯ ಬಸವರಾಜ ಹೊಳೆಪ್ಪ ದಡ್ಡಿ (26) ಮತ್ತು ಬಸವಣ್ಣಿ ಸಿದ್ದಪ್ಪ ನಾಯಿಕ (27) ಎನ್ನುವವರನ್ನು ಬಂಧಿಸಲಾಗಿದೆ. ಮೃತ ಶೈಬಾಜ ಮತ್ತು ಆರೋಪಿ ಲಕ್ಷ್ಮಣ ದಡ್ಡಿ ನಡುವೆ ಆಗಿದ್ದ ಗಲಾಟೆಯ ಕುರಿತು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್‌ ತಿಳಿಸಿದ್ದಾರೆ.

ಮೃತನ ತಂದೆ ಶೇರಖಾನ ಪಠಾಣ ನೀಡಿದ ದೂರಿನಂತೆ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಕೆಟ್‌ ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮುತ್ಯಾನಟ್ಟಿಯ ಯುವಕನೊಬ್ಬ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಶೈಬಾಜಗೆ ಕೆಸರು ಹಾರಿತ್ತು. ಇದರಿಂದ ಸಿಟ್ಟಾಗಿ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದ. ಈ ಪ್ರಕರಣದಲ್ಲಿ ಶೈಬಾಜ್‌ ಬಂಧಿತನಾಗಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಗುಣಮುಖನಾಗಿ ಬಿಡುಗಡೆಯಾಗಿದ್ದ. ಶೈಬಾಜ್‌ ಜಾಮೀನು ಪಡೆದು ಹೊರಗೆ  ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು