ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೌರ್ಜನ್ಯ ತಡೆಯಲು ಸಮನ್ವಯದಿಂದ ಕೆಲಸ ಮಾಡಿ: ಡಾ.ನಾಗಲಕ್ಷ್ಮಿ ಚೌಧರಿ

Published 21 ಆಗಸ್ಟ್ 2024, 15:56 IST
Last Updated 21 ಆಗಸ್ಟ್ 2024, 15:56 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ತಕ್ಷಣವೇ ಸ್ಪಂದಿಸಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಮಹಿಳೆಯರ ದೌರ್ಜನ್ಯಕ್ಕೆ ಸಂಬಂಧಿಸಿ ಸವದತ್ತಿ ತಾಲ್ಲೂಕಿನಲ್ಲಿ ಹೆಚ್ಚಿನ ದೂರು ಬಂದಿದ್ದವು. ಹಾಗಾಗಿ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದರು.

‘ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ ಮಹಿಳೆಯರ ಕಾಣೆ, ವರದಕ್ಷಿಣೆ ಕಿರುಕುಳ ನೀಡುವುದು ಮತ್ತು ದೌರ್ಜನ್ಯ ಪ್ರಕರಣ ಹೆಚ್ಚಿವೆ. ಕಳೆದ 6 ತಿಂಗಳಲ್ಲಿ 9 ಮಹಿಳೆಯರ ಕೊಲೆಯಾಗಿವೆ. ಇಂಥ ಪ್ರಕರಣಗಳಲ್ಲಿ ಯಾವ ಕಾರಣಕ್ಕೂ ತನಿಖೆ ವಿಳಂಬವಾಗಬಾರದು. ನೊಂದ ಮಹಿಳೆಯರು ಮತ್ತು ಅವರ ಕುಟುಂಬಸ್ಥರಿಗೆ ನ್ಯಾಯ ಒದಗಿಸಲು ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ತುರ್ತು ಸಂದರ್ಭ ಮಹಿಳೆಯರ ಸುರಕ್ಷತೆಗೆ ಅನುಕೂಲವಾಗಲೆಂದು ಆರಂಭಿಸಿದ ಸಹಾಯವಾಣಿ ಸಂಖ್ಯೆ 112ರ ಬಗ್ಗೆ ನಾಗರಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಮಹಿಳೆಯರ ರಕ್ಷಣೆ ಮತ್ತು ಕಾನೂನಿನ ಅರಿವು ಕುರಿತು ಜಿಲ್ಲಾಡಳಿತದಿಂದ ಹೆಚ್ಚಿನ ಜಾಗೃತಿ ಕಾರ್ಯಕ್ರಮ ನಡೆಯಬೇಕು’ ಎಂದು ಸೂಚಿಸಿದರು.

‘ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಕಾರ್ಮಿಕರಿಗೆ ಆಯಾ ಗುತ್ತಿಗೆ ಏಜೆನ್ಸಿಯವರು ಕಾರ್ಮಿಕ ಇಲಾಖೆ ಕಾಯ್ದೆ ಪ್ರಕಾರ ಇಎಸ್ಐ, ಪಿಎಫ್ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದರು.

‘ಬೆನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಡೊಂಬರ ಕಾಲೊನಿಯಲ್ಲಿ 5 ಸಾವಿರ ಜನರು ವಾಸವಿದ್ದಾರೆ. ಆದರೆ, ಕೇವಲ 10 ಸಾರ್ವಜನಿಕ ಶೌಚಗೃಹಗಳಿವೆ. ಹಾಗಾಗಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಕುಟುಂಬಕ್ಕೆ ವೈಯಕ್ತಿಕ ಶೌಚಗೃಹ ನಿರ್ಮಿಸಿ ಕೊಡಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಆಸ್ತಿ ವಿಷಯ, ಅಕ್ರಮ ಸಂಬಂಧ ಮತ್ತಿತರ ಕಾರಣಕ್ಕೆ ಜಿಲ್ಲೆಯಲ್ಲಿ ಮಹಿಳೆಯರ ಕೊಲೆಯಾಗುತ್ತಿವೆ. ಈ ಕುರಿತು ಪೊಲೀಸರು ನಿಗಾ ವಹಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ. ಮುರಳಿಮೋಹನ ರೆಡ್ಡಿ, ಐಎಎಸ್ ಪ್ರೊಬೇಷನರಿ ಅಧಿಕಾರಿ ದಿನೇಶಕುಮಾರ ಮೀನಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT