ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಜನ್ಮ ದಿನ: ಬೆಳಗಾವಿಯಲ್ಲಿ ಬಿಜೆಪಿಯಿಂದ ಸೇವಾ ಸಪ್ತಾಹ

ಸಂಜಯ ಪಾಟೀಲ ಮಾಹಿತಿ
Last Updated 16 ಸೆಪ್ಟೆಂಬರ್ 2020, 12:37 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸೆ. 17ರಂದು ಆಚರಿಸಲಾಗುವುದು. ಪಕ್ಷದ ಕಾರ್ಯಕರ್ತರು ಸೇವಾ ಸಪ್ತಾಹ ಕೈಗೊಂಡಿದ್ದಾರೆ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಬಿ. ಪಾಟೀಲ ತಿಳಿಸಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿರ್ದೇಶನದಂತೆ ಸೆ.14ರಿಂದ ಆರಂಭವವಾಗಿರುವ ಸೇವಾ ಸಪ್ತಾಹ ಸೆ. 20ರವರೆಗೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ಮಂಡಲಗಳಲ್ಲಿ 70 ಅಂಗವಿಕಲರಿಗೆ ಕೃತಕ ಅಂಗಾಂಗ ಜೋಡಣೆ ಕಾರ್ಯಕ್ರಮ ನಡೆಯಲಿದೆ. 70 ಮಂದಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುವುದು. ಕೋವಿಡ್–19 ಮಾರ್ಗಸೂಚಿಗಳನ್ನು ಪಾಲಿಸಿ ರೋಗಿಗಳು ಹಾಗೂ ಬಡವರಿಗೆ ಹಣ್ಣುಗಳನ್ನು ನೀಡಲಾಗುವುದು. ಆಸ್ಪತ್ರೆಗಳ ಮೂಲಕ ಕೋವಿಡ್-19 ಚಿಕಿತ್ಸೆಗಾಗಿ 70 ಮಂದಿಗೆ ಪ್ಲಾಸ್ಮಾ ದಾನ ಮಾಡುವ ಕಾರ್ಯಕ್ರಮ ಇರಲಿದೆ’ ಎಂದು ತಿಳಿಸಿದರು.

‘ಯುವ ಮೋರ್ಚಾದಿಂದ ರಕ್ತ ದಾನ ಶಿಬಿರ ನಡೆಯಲಿದೆ. ಪ್ರತಿ ಮತಗಟ್ಟೆಯಲ್ಲಿ 70 ಸಸಿಗಳನ್ನು ನೆಡುವುದು ಮತ್ತು ಪರಿಸರ ಸಂರಕ್ಷಣೆಯ ಸಂಕಲ್ಪ ಕಾರ್ಯಕ್ರಮ ಜರುಗಲಿದೆ. ಹಳ್ಳಿಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಸೆ. 25ರಂದು ಪಂ. ದೀನದಯಾಳ್ ಜಯಂತಿ ಅಂಗವಾಗಿ ಉಪನ್ಯಾಸ ಮೊದಲಾದ ಕಾರ್ಯಕ್ರಮ ನಡೆಯಲಿವೆ. ಅ.2ರಂದು ಗಾಂಧಿ ಜಯಂತಿ ಅಂಗವಾಗಿ ಪ್ರಧಾನಿ ಕರೆ ನೀಡಿದ್ದ ‘ಆತ್ಮನಿರ್ಭರ ಭಾರತ’ದ ಸಂಕಲ್ಪವನ್ನು ವಿವಿಧ ಪ್ರಕಾರಗಳ ಸಂವಾದ ಕಾರ್ಯಕ್ರಮಗಳ ಮೂಲಕ ಜನರಿಗೆ ತಲುಪಿಸುವ ಯೋಜನೆ ರೂಪಿಸಲಾಗಿದೆ. ಖಾದಿ ಉಪಯೋಗ ಮತ್ತು ಸ್ಥಾನೀಯ ಉತ್ಪಾದನೆಗಳನ್ನು ಪ್ರೋತ್ಸಾಹಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ರಾಜು ಚಿಕ್ಕನಗೌಡರ, ಮಾಧ್ಯಮ ಪ್ರಮುಖ ಎಫ್.ಎಸ್. ಸಿದ್ದನಗೌಡರ, ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜೇರ, ನಿತಿನ ಚೌಗುಲೆ, ಸಿದ್ದಯ್ಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT