ಬೆಳಗಾವಿ: ‘ಭಾರತದ ರಾಜ, ಮಹಾರಾಜರನ್ನು ನಿಂದಿಸುವ ಕಾಂಗ್ರೆಸ್‌ನವರು ಸುಲ್ತಾನರ, ನವಾಬರ, ನಿಜಾಮರ ಆಳ್ವಿಕೆಯನ್ನು ಕಿಂಚಿತ್ತೂ ಟೀಕಿಸುವುದಿಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಇಂಥದ್ದೇ ತುಷ್ಟೀಕರಣ ನೀತಿ ಮುಂದುವರಿಸಿದೆ. ಆ ನೀತಿಯೇ ಅವರ ಪ್ರಣಾಳಿಕೆಯಲ್ಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ನಡೆದ ‘ಬಿಜೆಪಿ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ಭಾರತದ ದೊರೆಗಳು ಬಡವರ ಸಂಪತ್ತನ್ನು ಕಿತ್ತುಕೊಂಡಿದ್ದಾರೆ ಎಂದು ಕಾಂಗ್ರೆಸ್ಸಿನ ‘ಶಹಜಾದಾ’ (ರಾಜಕುಮಾರ) ಟೀಕಿಸುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.
‘ಛತ್ರಪತಿ ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚನ್ನಮ್ಮ, ಮೈಸೂರು ದೊರೆಗಳ ಕೊಡುಗೆ ಇವರಿಗೆ ಕಾಣಿಸುವುದಿಲ್ಲ. ಬನಾರಸ್ ರಾಜರು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕಟ್ಟಿದರು. ಅಹಲ್ಯಾಬಾಯಿ ಹೋಳ್ಕರ್ ಅವರಂಥ ರಾಣಿಯರು ದೇವಾಲಯಗಳನ್ನು ರಕ್ಷಿಸಿದರು. ಬರೋಡಾದ ಗಾಯಕ್ವಾಡ ರಾಜರು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸದೇ ಇದ್ದಿದ್ದರೆ ಇಂದು ಈ ದೇಶವನ್ನು ಹೀಗೆ ನೋಡಲು ಸಾಧ್ಯವಿತ್ತೇ? ಇಂಥ ರಾಜರನ್ನು ನಿಂದಿಸುವ ಮೂಲಕ ದೇಶದ ಪರಂಪರೆಯನ್ನೇ ಅವಮಾನಿಸಿದ್ದಾರೆ’ ಎಂದರು.
‘ಔರಂಗಜೇಬನಂಥ ಅದೆಷ್ಟೋ ಸುಲ್ತಾನರು ದೇಶದಲ್ಲಿ ಅತ್ಯಾಚಾರ ಎಸಗಿದರು. ಸಂಪತ್ತು ಲೂಟಿ ಮಾಡಿದರು. ದೇವಾಲಯ, ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡಿದರು. ಇದಾವುದನ್ನೂ ಕಾಂಗ್ರೆಸ್ ಪ್ರಸ್ತಾಪಿಸುವುದಿಲ್ಲ. ದೇಶ ವಿಭಜನೆಗೆ ಕಾರಣರಾದವರನ್ನು ಪ್ರಶ್ನಿಸುವುದಿಲ್ಲ. ತುಷ್ಟೀಕರಣವನ್ನೇ ಇತಿಹಾಸದುದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ’ ಎಂದೂ ಹೇಳಿದರು.
‘ಅಪ್ಪಿತಪ್ಪಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತನ್ನು ಕೊಳ್ಳೆಹೊಡೆಯಲಿದೆ. ನೀವು ದುಡಿದು ಗಳಿಸಿದ ಸಂಪತ್ತನ್ನು ಮಕ್ಕಳಿಗೆ ವರ್ಗಾವಣೆ ಮಾಡಲು ಶೇ 55ರಷ್ಟು ತೆರಿಗೆ ಹೇರಲಿದೆ. ಮನೆಮನೆಗೂ ದಾಳಿ ನಡೆಸಿ ಧನ– ಚಿನ್ನಾಭರಣ ಕಿತ್ತುಕೊಳ್ಳಲಿದೆ. ಆ ಸಂಪತನ್ನು ತನ್ನ ‘ಮತಬ್ಯಾಂಕಿಗೆ’ ಹಂಚಲಿದೆ. ನಿಮ್ಮ ಸಂಪತ್ತು ನಿಮ್ಮ ಮಕ್ಕಳಿಗೆ ಉಳಿಯಬೇಡವೇ? ನಿಮ್ಮ ಮಂಗಳಸೂತ್ರ ನಿಮಗೆ ಉಳಿಯಬೇಡವೇ?’ ಎಂದೂ ಮೋದಿ ಜನರಿಗೆ ಪ್ರಶ್ನೆ ಮಾಡಿದರು.
‘ನಾನು ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಮೋದಿ ಬದುಕಿರುವವರೆಗೂ ಇಂಥ ದೌರ್ಜನ್ಯ ನಡೆಯಲು ಬಿಡುವುದಿಲ್ಲ’ ಎಂದೂ ಹೇಳಿದರು.
‘ಕಾಂಗ್ರೆಸ್ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಯಿತು, ಚಿಕ್ಕೋಡಿಯಲ್ಲಿ ಜೈನ ಮುನಿ ಅವರನ್ನು ತುಂಡರಿಸಲಾಯಿತು, ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಮಾಡಲಾಯಿತು, ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸಲಾಯಿತು’ ಎಂದೂ ಅವರು ಭಾಷಣದುದ್ದಕ್ಕೂ ಕಾಂಗ್ರೆಸ್ ಟೀಕೆ ಮಾಡಿದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಅಭ್ಯರ್ಥಿಗಳಾದ ಜಗದೀಶ ಶೆಟ್ಟರ್, ಅಣ್ಣಾಸಾಹೇಬ ಜೊಲ್ಲೆ, ಶಾಸಕರು ಮತ್ತು ಮುಖಂಡರು ವೇದಿಕೆ ಮೇಲಿದ್ದರು.
ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ ತಾಯಿ ಭುವನೇಶ್ವರಿ ಹಾಗೂ ಸವದತ್ತಿ ಯಲ್ಲಮ್ಮದೇವಿ ನೆನೆದರು. ಜಿಲ್ಲೆಯ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಪುರುಷರು– ಮಹಿಳೆಯರು ಸೇರಿದ್ದರು. ಕಾರ್ಯಕ್ರಮದುದ್ದಕ್ಕೂ ಮೋದಿ, ಮೋದಿ, ಜೈಶ್ರೀರಾಮ್ ಘೋಷಣೆ ಮೊಳಗಿಸಿದರು.
‘ಕಾಂಗ್ರೆಸ್ಸಿಗೆ ಸುಪ್ರೀಂಕೋರ್ಟ್ ಛೀಮಾರಿ’ ‘ಜನಪರವಾದ ಯಾವುದೇ ಯೋಜನೆಯನ್ನು ಕಾಂಗ್ರೆಸ್ಸಿಗರು ಸಹಿಸಿಕೊಳ್ಳುವುದಿಲ್ಲ. ಕೊರೊನಾ ಲಸಿಕೆಯನ್ನು ‘ಬಿಜೆಪಿ ಲಸಿಕೆ’ ಎಂದು ಟೀಕಿಸಿದಾಗ ಜನರೇ ಛೀಮಾರಿ ಹಾಕಿದರು. ಎರಡು ದಿನಗಳ ಹಿಂದಷ್ಟೇ ಇವಿಎಂ ಯಂತ್ರಗಳ ಕುರಿತಾಗಿ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ’ ಎಂದು ನರೇಂದ್ರ ಮೋದಿ ವ್ಯಂಗ್ಯವಾಡಿದರು. ‘ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಎತ್ತಿಹಿಡಿದರು. ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ತೋರಿಸಿದರು. ಆದರೆ ಕಾಂಗ್ರೆಸ್ಸಿಗರು ಇದನ್ನೇ ಅವಮಾನಿಸುತ್ತಿದ್ದಾರೆ. ಇನ್ನೂ ಗುಲಾಮಿ ಪದ್ಧತಿಯನ್ನೇ ಮುಂದುವರಿಸಲು ಬಯಸಿದ್ದಾರೆ’ ಎಂದರು. ‘10 ವರ್ಷಗಳಲ್ಲಿ ನಾವು ಭಾರತೀಯ ನ್ಯಾಯ ಸಂಹಿತೆ ಜಾರಿ ಮಾಡಿ ಗುಲಾಮಿ ಮನಸ್ಥಿತಿಯನ್ನೇ ಕಿತ್ತೊಗೆದಿದ್ದೇವೆ. 25 ಕೋಟಿ ಜನರನ್ನು ಬಡತನ ಮುಕ್ತ ಮಾಡಿದ್ದೇವೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.