ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಎನ್‌ಡಿಎ ಮಾದರಿ ತರಬೇತಿ ಅಕಾಡೆಮಿ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕಟ
Last Updated 1 ಡಿಸೆಂಬರ್ 2020, 6:23 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಲ್ಲಿ ಪೊಲೀಸ್ ಆಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ ಎನ್‌ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಮಾದರಿಯ ಅಕಾಡೆಮಿ ಸ್ಥಾಪಿಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಇಲ್ಲಿನ ಕಂಗ್ರಾಳಿಯಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ಆರ್‌ಪಿ) ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ 6ನೇ ತಂಡದ ಪುರುಷ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥಸಂಚಲನದಲ್ಲಿ ಅವರು ಮಾತನಾಡಿದರು.

‘ಇಲಾಖೆಗೆ ಹೊಸದಾಗಿ ಸೇರುವ ಸಿಬ್ಬಂದಿಗೆ ಬುನಾದಿ ತರಬೇತಿ ನೀಡಲಾಗುತ್ತದೆ. ಐಪಿಎಸ್‌ ಅಧಿಕಾರಿಗಳಿಗೂ ತರಬೇತಿ ಆಗಿರುತ್ತದೆ. ಆದರೆ, ಮಧ್ಯಮ ಹಂತದ ಅಧಿಕಾರಿಗಳು ತರಬೇತಿ ಪಡೆದು ಬಹಳ ವರ್ಷಗಳೇ ಆಗಿರುತ್ತದೆ. ಮಹತ್ವದ ಹುದ್ದೆಗಳಲ್ಲಿರುವ ಹಾಗೂ ಬಹುತೇಕ ಸ್ಥಳೀಯರೇ ಆಗಿರುವ ಅವರಿಗೆ ಕೌಶಲ ವೃದ್ಧಿಸುವ ಅಗತ್ಯವಿದೆ. ಅವರಲ್ಲಿ ದಕ್ಷತೆ ಹೆಚ್ಚಿಸುವ ಉದ್ದೇಶ ನಮ್ಮದಾಗಿದೆ. ಇದಕ್ಕಾಗಿ ಮಿಲಿಟರಿ ಅಧಿಕಾರಿಗಳ ಮಾದರಿಯಲ್ಲಿಯೇ ಅವರನ್ನು ಸಜ್ಜುಗೊಳಿಸಲಾಗುವುದು’ ಎಂದು ಹೇಳಿದರು.

ರಕ್ಷಣಾ ಇಲಾಖೆಯೊಂದಿಗೆ

‘ವಿಶೇಷ ಅಕಾಡೆಮಿ ಇದಾಗಿರಲಿದೆ. ಅದಕ್ಕೆ ತಕ್ಕಂತೆ ಪಠ್ಯಕ್ರಮ ಸಿದ್ಧಪಡಿಸಲಾಗುವುದು. ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಕಾರ್ಯಯೋಜನೆ ಸಿದ್ಧಪಡಿಸಲಾಗುವುದು. ಇಲ್ಲಿ ಅನೇಕ ರಕ್ಷಣಾ ಸಂಸ್ಥೆಗಳಿವೆ. ಅಲ್ಲಿರುವ ಮಾನವ ಸಂಪನ್ಮೂಲ ಬಳಸಿಕೊಳ್ಳುವುದಕ್ಕಾಗಿ, ಈ ನಗರ ಆಯ್ಕೆ ಮಾಡಿಕೊಳ್ಳಲಾಗಿದೆ. ಆರು ತಿಂಗಳಲ್ಲಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ರಾಜ್ಯದಲ್ಲಿ ಪೊಲೀಸಿಂಗ್ ಸುಧಾರಣೆಗೆ ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅವರು ನೀಡುವ ವರದಿಯಂತೆ ಕ್ರಮ ವಹಿಸಲಾಗುವುದು. ಸನ್ನಡತೆ ಆಧರಿಸಿ ಕೈದಿಗಳ ಬಿಡುಗಡೆಗೆ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ತಿಳಿಸಿದರು.

16ಸಾವಿರ ಹುದ್ದೆ ಭರ್ತಿ

‘2 ವರ್ಷಗಳಲ್ಲಿ 16ಸಾವಿರ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲಾಗುವುದು. ತರಬೇತಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಕೆಎಸ್‌ಆರ್‌ಪಿಗೆ ಇನ್ನಷ್ಟು ಬಲ ತುಂಬಲು ಹಾಗೂ ಸಿಬ್ಬಂದಿಗೆ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದ್ದೇವೆ. ತರಬೇತಿ ಪಠ್ಯಕ್ರಮದಲ್ಲಿ ಬದಲಾವಣೆ ತರಲಾಗುವುದು. ಸೈಬರ್ ಕ್ರೈಂ, ಫೊರೆನ್ಸಿಕ್ ಹಾಗೂ ಕಂಪ್ಯೂಟರ್ ಮೊದಲಾದ ವಿಷಯಗಳಲ್ಲಿ ಸುಧಾರಣೆಗೆ ಸಂಬಂಧಿಸಿದಂತೆ ವಿಷಯಗಳನ್ನು ಅಳವಡಿಸಲಾಗುವುದು’ ಎಂದು ಹೇಳಿದರು.

‘ಕೋವಿಡ್–19 ಕಾರಣದಿಂದಾಗಿ ಈ ವರ್ಷ ವಿನಿಮಯ ಕಾರ್ಯಕ್ರಮ ನಡೆದಿಲ್ಲ. ಮುಂದಿನ ಸಾಲಿನಲ್ಲಿ ನಮ್ಮ ಪೊಲೀಸ್ ಅಧಿಕಾರಿಗಳನ್ನು ಸ್ಕಾಟ್ಲೆಂಡ್, ಅಮೆರಿಕ ಮೊದಲಾದ ದೇಶಗಳಿಗೆ ಉನ್ನತ ತರಬೇತಿಗೆ ಕಳುಹಿಸಲಾಗುವುದು. ವಿದೇಶಿ ಅಧಿಕಾರಿಗಳು ಕೂಡ ಇಲ್ಲಿ ಬಂದು ನಮ್ಮವರಿಗೆ ತರಬೇತಿ ಕೊಡುವಂತೆ ವ್ಯವಸ್ಥೆ ಮಾಡಲಾಗುವುದು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುವುದು’ ಎಂದರು.

‘ಕೆಎಸ್‌ಆರ್‌ಪಿ ಪೊಲೀಸರಿಗೆ, ಅಂತರಶಿಸ್ತೀಯ ಸೇವೆಗೆ ಬದಲಾಣೆಗೆ ಅವಕಾಶ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ಕೆಎಸ್‌ಆರ್‌ಪಿ ಎಡಿಜಿ‍ಪಿ ಅಲೋಕ್‌ಕುಮಾರ್, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ತರಬೇತಿ ಶಾಲೆಯ ಪ್ರಾಂಶುಪಾಲ ರಮೇಶ್, ಕಮಾಂಡೆಂಟ್ ಹಂಜಾ ಹುಸೇನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT