ಬುಧವಾರ, ಜೂನ್ 23, 2021
30 °C

ಕೆಎಂಎಫ್‌ನಿಂದ ಹೊಸ ದಾಖಲೆ: ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ‘ನವರಾತ್ರಿ ಆಚರಣೆ ಸಂದರ್ಭದಲ್ಲಿ 120 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರುವ ಮೂಲಕ ಕೆಎಂಎಫ್ ಹೊಸ ದಾಖಲೆ ಸೃಷ್ಟಿಸಿದೆ’ ಎಂದು ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿನ ಗೋಕಾಕ ಶಿಕ್ಷಣ ಸಂಸ್ಥೆಯ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ‘ನಂದಿನಿ ಪಾರ್ಲರ್‌’ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಎಂಎಫ್‌ನಿಂದ ಬಿಹಾರ ಒಕ್ಕೂಟಕ್ಕೆ 1,500 ಮೆ.ಟನ್ ಕೆನೆಭರಿತ ಹಾಲಿನ ಪುಡಿ, 650 ಮೆ.ಟನ್ ಕೆನೆರಹಿತ ಹಾಲಿನ ಪುಡಿ ಮತ್ತು 800 ಮೆ.ಟನ್ ಬೆಣ್ಣೆಯನ್ನು ಮಾರಲು ಸಂಸ್ಥೆ ತೀರ್ಮಾನಿಸಿದೆ. ಪ್ರಸ್ತುತ 12.6 ಮೆ.ಟನ್ ಬೆಣ್ಣೆ ದಾಸ್ತಾನಿದೆ. ಕೆನೆರಹಿತ ಹಾಲಿನ ಪುಡಿ 27.5 ಮೆ.ಟನ್ ಇದೆ. ಒಕ್ಕೂಟದ ಒಟ್ಟು ಹಾಲಿನ ಶೇಖರಣೆ ಪ್ರತಿ ದಿನ 80 ಲಕ್ಷ ಲೀಟರ್ ಇದೆ’ ಎಂದು ಮಾಹಿತಿ ನೀಡಿದರು.

‘ನಿತ್ಯ 45.80 ಲಕ್ಷ ಲೀಟರ್‌ ಹಾಲು, ಮೊಸರು, ಗುಡ್‌ಲೈಫ್‌ ಮತ್ತು ಫ್ಲೆಕ್ಸಿ ಪ್ಯಾಕ್‌ ಹಾಲಿನ ಮಾರಾಟ ಆಗುತ್ತಿದೆ. ಬೇರೆ ರಾಜ್ಯಗಲಿಗೆ ಹೋಲಿಸಿದರೆ ಸಗಟು ಹಾಲಿನ ಮಾರಾಟ ಹೆಚ್ಚಿದೆ. ನಿತ್ಯ 3.52 ಲಕ್ಷ ಲೀಟರ್ ಮಾರಾಟವಾಗುತ್ತಿದೆ. ರಾಜ್ಯದಾದ್ಯಂತ ಪ್ರಸ್ತುತ 1,462 ನಂದಿನಿ ಪಾರ್ಲರ್ ಮತ್ತು 220ಕ್ಕೂ ಅಧಿಕ ನಂದಿನಿ ಶಾಫಿಗಳಿವೆ’ ಎಂದು ತಿಳಿಸಿದರು.

‘ಗೋಕಾಕದಲ್ಲಿ ಆರಂಭಿಸಿರುವ ‘ನಂದಿನಿ’ ಕೇಂದ್ರದಲ್ಲಿ ಉತ್ಪನ್ನಗಳು ಎಂಆರ್‌ಪಿಗೆ ಲಭ್ಯ ಇವೆ. ಜಿಲ್ಲೆಯಲ್ಲಿ ರಾಮದುರ್ಗ, ಬೈಲಹೊಂಗಲ, ರಾಯಬಾಗ, ಖಾನಾಪುರದಲ್ಲೂ ಪಾರ್ಲರ್‌ ಆರಂಭಿಸಲಾಗಿದೆ. ಪ್ರತಿ ತಾಲ್ಲೂಕು ಕೇಂದ್ರಗಳಲ್ಲೂ ಶೇಖರಣ ಕೇಂದ್ರಗಳನ್ನು ಆರಂಭಿಸುವ ಮೂಲಕ ಪ್ರತಿ ಹಳ್ಳಿ-ಹಳ್ಳಿಗಳಿಗೆ ‘ನಂದಿನಿ’ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಗ್ರಾಹಕರು ಮತ್ತು ರೈತರ ಸಹಕಾರವೇ ಒಕ್ಕೂಟದ ದೊಡ್ಡ ಶಕ್ತಿಯಾಗಿದೆ’ ಎಂದರು.

‘ಹಾಲು ಉತ್ಪಾದಕರಿಂದ ಗರಿಷ್ಠ ಬೆಲೆಗೆ ಹಾಲು ಖರೀದಿಸಿ, ಕನಿಷ್ಠ ಲಾಭದೊಂದಿಗೆ ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಕೆಎಂಎಫ್ ಮಾಡುತ್ತಿದೆ. ದೇಶದ ಅಭಿವೃದ್ಧಿಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿದೆ. ಸಾಮಾಜಿಕ ಕಾರ್ಯಗಳ ಮೂಲಕವೂ ಸಾಧನೆ ಮಾಡುತ್ತಿದೆ. ಕೊರೊನಾ ಪರಿಸ್ಥಿತಿಯಲ್ಲಿ ರೈತರು ಹಾಗೂ ಗ್ರಾಹಕರ ಅಭ್ಯುದಯಕ್ಕಾಗಿ ನಿರಂತರ ಸೇವೆ ಮಾಡಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 8 ಕೋಟಿ ದೇಣಿಗೆ ನೀಡಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್, ಮಾರುಕಟ್ಟೆ ಉಪ ವ್ಯವಸ್ಥಾಪಕ ಜಯಾನಂದ ಶಂಕಿನಮಠ, ತಾಂತ್ರಿಕ ವಿಭಾಗದ ಉಪ ವ್ಯವಸ್ಥಾಪಕ ಮಲ್ಲಿಕಾರ್ಜುನ ಸ್ವಾಮಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು