ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಸೇರಿಸುವ ನೆಪದಲ್ಲಿ ₹ 90 ಸಾವಿರ ವಂಚನೆ

Last Updated 10 ಜುಲೈ 2021, 16:41 IST
ಅಕ್ಷರ ಗಾತ್ರ

ಬೆಳಗಾವಿ: ಎಲ್‌ಕೆಜಿ ಪ್ರವೇಶ ಶುಲ್ಕ ಪಾವತಿಸುವುದಾಗಿ ತಿಳಿಸಿ ಶಾಲೆಯೊಂದರ ಬ್ಯಾಂಕ್ ಖಾತೆ ಸಂಖ್ಯೆ ಪಡೆದುಕೊಂಡು ₹ 90ಸಾವಿರ ಸೆಳೆದು ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ನಾನು ಭಾರತೀಯ ಸೇನೆಯಲ್ಲಿದ್ದು, ಕಾಶ್ಮೀರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ನನ್ನ ಪುತ್ರನಿಗೆ ನಿಮ್ಮ ಶಾಲೆಯಲ್ಲಿ ಎಲ್‌ಕೆಜಿ ಪ್ರವೇಶ ಬೇಕಾಗಿದೆ ಎಂದು ಶಾಲೆಯ ನಿಗದಿತ ಮೊಬೈಲ್‌ ಫೋನ್‌ ಸಂಖ್ಯೆಗೆ ಕರೆ ಮಾಡಿ ಎಂದು ವಂಚಕ ತಿಳಿಸಿದ್ದಾನೆ. ಪತ್ನಿ ಹಾಗೂ ಮಕ್ಕಳು ಬೆಳಗಾವಿಯಲ್ಲಿ ವಾಸವಿರುತ್ತಾರೆ ಎಂದು ಹೇಳಿ ವಾಟ್ಸ್‌ಆ್ಯಪ್‌ನಲ್ಲಿ ತನ್ನ, ಪತ್ನಿ ಹಾಗೂ ಮಗುವಿನ ನಕಲಿ ಫೋಟೊ ಮತ್ತು ವಿಳಾಸ ಕಳುಹಿಸಿದ್ದಾನೆ’.

‘ಪ್ರವೇಶ ಶುಲ್ಕವನ್ನು ಆನ್‌ಲೈನ್‌ನಲ್ಲಿ ಸೇನೆಯ ಬ್ಯಾಂಕ್ ಖಾತೆಯಿಂದ ವರ್ಗಾಯಿಸುವುದಾಗಿ ನಂಬಿಸಿ ಬ್ಯಾಂಕ್ ಖಾತೆ ಪಡೆದುಕೊಂಡಿದ್ದಾನೆ. ದೃಢಪಡಿಸಲು ಅದಕ್ಕೆ ₹ 1 ವರ್ಗಾಯಿಸುವುದಾಗಿ ಹೇಳಿ ₹ 90ಸಾವಿರವನ್ನು ಅವರ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ’ ಎಂಬ ದೂರು ಬಂದಿದ್ದು, ಪ್ರಕರಣ ದಾಖಲಾಗಿದೆ. ಶಾಲಾ ಆಡಳಿತ ಮಂಡಳಿಯವರು ಈ ರೀತಿಯ ವಂಚನೆಗೆ ಒಳಗಾಗಬಾರದು’ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ಹಲ್ಲೆ ನಡೆಸಿ ದೋಚಿದ್ದ ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ: ಇಲ್ಲಿನ ಗಾಂಧಿ ನಗರದ ಬೈಪಾಸ್ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಗುರುವಾರ ಬೆಳಗಿನ ಜಾವ ನಡೆಸಿ, ಅವರ ಬಳಿ ಇದ್ದ ವಸ್ತುಗಳೊಂದಿಗೆ ಎಟಿಎಂ ಕಾರ್ಡ್ ಕಿತ್ತುಕೊಂಡು ಹೋಗಿದ್ದ ಆರೋಪದ ಮೇಲೆ ಇಬ್ಬರನ್ನು ಮಾಳಮಾರುತಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ನ್ಯೂ ಗಾಂಧಿನಗರ ಆದಿಲ್ ಶಾ ಗಲ್ಲಿಯ ನಿವಾಸಿ ಪರ್ವೇಜ ಪಾರಿಶವಾಡಿ (20) ಹಾಗೂ ಖುದಾದಾದ ಗಲ್ಲಿಯ ಜುಬೇರ ದಾಲಾಯತ (20) ಬಂಧಿತರು.

‘ಹಿಂದಿನಿಂದ ಬಂದು ತಮ್ಮ ಮೇಲೆ ಹಲ್ಲೆ ನಡೆಸಿದ ಇಬ್ಬರು, ಬೇಜಿನಲ್ಲಿದ್ದ ₹ 1,200 ನಗದು, ಮೊಬೈಲ್ ಫೋನ್‌, ಕೈಗಡಿಯಾರ ಕಿತ್ತುಕೊಂಡರು. ಎರಡು ಎಟಿಎಂ ಕಾರ್ಡ್‌ಗಳನ್ನು ಬಲವಂತದಿಂದ ಕಿತ್ತುಕೊಂಡರು. ಬಳಿಕ ಬೆದರಿಸಿ ₹ 20ಸಾವಿರ ವಿತ್‌ಡ್ರಾ ಮಾಡಿಸಿಕೊಂಡು ಎಟಿಎಂ ಕಾರ್ಡ್‌ ಕಸಿದುಕೊಂಡು ಹೋದರು’ ಎಂದು ಚಿಕ್ಕೋಡಿಯ ಪಟ್ಟಣಕೋಡಿಯ ತಮ್ಮಣ್ಣ ಸೋಮನ್ನವರ ಶುಕ್ರವಾರ ದೂರು ನೀಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳಿಂದ ಎಟಿಎಂ ಕಾರ್ಡ್‌, ಕೈಗಡಿಯಾರ, ಮೊಬೈಲ್ ಫೋನ್ ಹಾಗೂ ₹ 18,500 ವಶಕ್ಕೆ ಪಡೆಯಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಪಿಎಸ್ಐ ಹೊನ್ನಪ್ಪ ತಳವಾರ, ಎಎಸ್‌ಐ ಎ.ಬಿ. ಕುಂಡೇದ, ಸಿಎಚ್‌ಸಿ ಎಂ.ಜಿ. ಕುರೇರ, ಕೆ.ಬಿ. ಗೌರಾಣಿ, ಕೆ.ಡಿ. ನದಾಫ, ಜೆ.ಎಂ. ಭೋಸಲೆ, ಬಿ.ಎಂ. ಕಲ್ಲಪ್ಪನವರ, ಸಿಪಿಸಿ ಎಲ್‌ಎಂ ಮುಶಾಪುರೆ, ಎಸ್‌.ಎಂ. ಗುಡದೈಗೋಳ, ಮಾರುತಿ ಮಾದರ ಹಾಗೂ ಸಿಬ್ಬಂದಿ ಈ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಅವರನ್ನು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಪ್ರಶಂಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT