ಬುಧವಾರ, ಮಾರ್ಚ್ 3, 2021
30 °C

ಬೆಳಗಾವಿ: 2020ಕ್ಕೆ ವಿದಾಯ, 2021ಕ್ಕೆ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಹೊಸ ವರ್ಷ 2021ನ್ನು ಒಳಿತಿನ ಆಶಯದೊಂದಿಗೆ ಬರ ಮಾಡಿಕೊಂಡರು.

2020ಕ್ಕೆ ವಿದಾಯ ಹೇಳುವ ಮೂಲಕ ಹೊಸ ನಿರೀಕ್ಷೆ ಮತ್ತು ಭರವಸೆಗಳೊಂದಿಗೆ ಜನರು ನವ ವಸಂತವನ್ನು ಸ್ವಾಗತಿಸಿದರು. ಕೋವಿಡ್–19 ಕಾರಣದಿಂದಾಗಿ ಈ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಮಟ್ಟದಲ್ಲಿ ಪಾರ್ಟಿ ಅಥವಾ ಕಾರ್ಯಕ್ರಮಗಳಿಗೆ ಅವಕಾಶ ಇರಲಿಲ್ಲ. ನಗರ ಹಾಗೂ ಸುತ್ತಮುತ್ತಲಿನ ದೊಡ್ಡ ಹೋಟೆಲ್‌ಗಳು, ರೆಸ್ಟೋರೆಂಟ್‌, ರೆಸಾರ್ಟ್‌, ಕ್ಲಬ್‌ಗಳಲ್ಲಿ ರಾತ್ರಿ 11ರವರೆಗೆ ಮಾತ್ರವೇ ಪಾರ್ಟಿಗೆ ಅವಕಾಶ ನೀಡಲಾಗಿತ್ತು. ಶೇ 50ರಷ್ಟು ಗ್ರಾಹಕರು ಮಾತ್ರವೇ, ಅಂತರ ಕಾಯ್ದುಕೊಂಡು ಭಾಗವಹಿಸಬೇಕು ಎಂದು ಸೂಚಿಸಲಾಗಿತ್ತು. ಹೀಗಾಗಿ, ಹಿಂದಿನ ವರ್ಷಗಳ ರೀತಿಯಲ್ಲಿ ಜನಜಂಗುಳಿ ಅಥವಾ ಅದ್ಧೂರಿ ಆಚರಣೆ ಕಂಡುಬರಲಿಲ್ಲ.

ಕ್ಲಬ್‌, ರೆಸಾರ್ಟ್‌ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವಾದರೂ, ಕೋವಿಡ್ ನಿಯಮಾವಳಿಗಳ ಕಾರಣದಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿಲ್ಲ. ಕೆಲವೆಡೆ ಕೆಲವರು ಕುಟುಂಬದೊಂದಿಗೆ ಭಾಗವಹಿಸಿದ್ದರು. ಸ್ನೇಹಿತರು ಗುಂಪು, ಗುಂಪಾಗಿ ಪಾಲ್ಗೊಂಡು ಸಂಭ್ರಮ ಹಂಚಿಕೊಂಡರು.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೇಕರಿಗಳಲ್ಲಿ ಕೇಕ್‌ಗಳಿಗೆ ಬೇಡಿಕೆ ಕಂಡುಬಂತು.

ಕೆಲವು ಬಡಾವಣೆಗಳ ಗಲ್ಲಿಗಳಲ್ಲಿ ಸ್ಥಳೀಯರು ಅನುಪಯುಕ್ತ ವಸ್ತುಗಳಿಂದ ಸಿದ್ಧಪಡಿಸಿದ್ದ ‘ಓಲ್ಡ್‌ ಮ್ಯಾನ್‌’ ಪ್ರತಿಕೃತಿಗಳನ್ನು ದಹಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡರು. ಮಕ್ಕಳು, ಯುವಜನರು, ಮಹಿಳೆಯರು ಹಾಗೂ ವೃದ್ಧರು ಪಾಲ್ಗೊಂಡಿದ್ದರು. ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

2021 ಬರುತ್ತಿದ್ದಂತೆಯೇ ಸಂಭ್ರಮ ಮುಗಿಲುಮುಟ್ಟಿತು. ಕೆಲವೆಡೆ ಕೇಕ್‌ ಕತ್ತರಿಸಿ ಸ್ಥಳೀಯರು ಸಂಭ್ರಮಿಸಿದರು. ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸುವುದು ಕಂಡುಬಂತು.

ಕೆಲವೆಡೆ, ಗುರುವಾರ ಬೆಳಿಗ್ಗೆಯಿಂದ ಪ್ರದರ್ಶಿಸಲಾಗಿದ್ದ ‘ಓಲ್ಡ್‌ ಮ್ಯಾನ್’ ಪ್ರತಿಕೃತಿಗಳನ್ನು ಪೊಲೀಸರು ವಶಕ್ಕೆ ಪಡೆದರು.

ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮಪ್ರದೇಶಗಳು, ವೃತ್ತಗಳು ಹಾಗೂ ಹೋಟೆಲ್‌ಗಳ ಬಳಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು