ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಅಭಿವೃದ್ಧಿ ಕಾಣದ ನಿಚ್ಚಣಕಿ ಗ್ರಾಮ

Published 27 ಸೆಪ್ಟೆಂಬರ್ 2023, 4:25 IST
Last Updated 27 ಸೆಪ್ಟೆಂಬರ್ 2023, 4:25 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಸಿಮೆಂಟ್ ಕಾಂಕ್ರೀಟ್ ರಸ್ತೆ; ವಿಶಾಲ ರಸ್ತೆಗಳು, ಕೆಲ ರಸ್ತೆಗಳಲ್ಲಿ ಎದ್ದು ಇಣುಕಿ ಹಾಕುತ್ತಿರುವ ಚಿಕ್ಕ ಗಾತ್ರದ ಖಡಿ, ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯ ಒದಗಿಸಬೇಕಿದ್ದ ಉಪಕೇಂದ್ರವೇ ಅನಾರೋಗ್ಯಕ್ಕೆ ತುತ್ತಾಗಿದೆ!

ಇದು ತಾಲ್ಲೂಕಿನ ನಿಚ್ಚಣಕಿ ಗ್ರಾಮದ ನೋಟವಿದು. ತಡಕೋಡ ಅಥವಾ ಮೇಟ್ಯಾಲ್ ಮಾರ್ಗವಾಗಿ ಬೈಲಹೊಂಗಲಕ್ಕೆ ತೆರಳುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಗ್ರಾಮವನ್ನು ದಾರಿ ಮೇಲೆ ನಿಂತು ಕಣ್ಣು ಹಾಯಿಸಿದರೆ ‘ಎಷ್ಟು ಚೆಂದೈತೆಲ್ಲಾ ಊರು’ ಎನ್ನಿಸದೇ ಇರದು. ಆದರೆ ಇಲ್ಲಿನ ಒಳನೋಟವೇ ಬೇರೆಯಿದೆ. ಮೂಲ ಸೌಲಭ್ಯಕ್ಕೆ ಕೆಲವು ಭಾಗಗಳಲ್ಲಿ ಇನ್ನೂ ಜನರು ಪರದಾಡುವ ಸ್ಥಿತಿಯಿದೆ ಎಂಬ ದೂರು ಗ್ರಾಮಸ್ಥರದು.

ಅವೈಜ್ಞಾನಿಕ ನೀರು ಸರಬರಾಜು

‘ಸುಮಾರು ಎಂಟು ಓಣಿಗಳನ್ನು ಹೊಂದಿರುವ ನಿಚ್ಚಣಕಿ ಗ್ರಾಮದ ಕೆಲವು ವಿಭಾಗಗಳಲ್ಲಿ ನೀರು ಪೂರೈಕೆ ಸಮರ್ಪಕವಾಗಿಲ್ಲ. ಕೆಲವು ಕಡೆಗಳಲ್ಲಿ ಹತ್ತಾರು ಗಂಟೆ ಹರಿಯುತ್ತಿರುತ್ತದೆ. ಮಗದೊಂದು ಕಡೆಗೆ ಹನಿ ನೀರಿಗೂ ಪರದಾಡಬೇಕು. ನೀರು ಸಾಕಷ್ಟಿದ್ದರೂ ಸರಬರಾಜು ಮಾಡುವಲ್ಲಿ ಪಂಚಾಯ್ತಿಯು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಮಳೆಯಿಂದ ಬಿದ್ದ ಮನೆಗಳಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ
ಆರ್. ಐ. ಪೊಲೀಸನವರ, ಪಿಡಿಒ

‘ಗ್ರಾಮದ ದಕ್ಷಿಣ ಭಾಗಕ್ಕೆ ಬಂದರೆ ಅಲ್ಲೊಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಈ ಶಾಲೆ ಬಳಿ ನೀರು ಪೂರೈಕೆಗಾಗಿ ಮೇಲ್ಮಟ್ಟದ ಜಲಸಂಗ್ರಹಾಲಯ (ಒವರ್ ಹೆಡ್ ಟ್ಯಾಕ್) ನಿರ್ಮಾಣ ಮಾಡಲಾಗಿದೆ. ನೀರಿನ ಈ ಟ್ಯಾಂಕ್ ಮೊದಲು ತುಂಬಿಸಬೇಕು. ಅನಂತರ ಊರಿನ ಕೆಲ ಭಾಗಗಳಿಗೆ ಪೂರೈಕೆ ಮಾಡಬೇಕು. ಆದರೆ, ಈ ನೀರು ಪೂರೈಸುವ ಪ್ರಮುಖ ಪೈಪ್‌ಲೈನ್‌ಗೆ ಕೆಲವರು ನಳ ಸಂಪರ್ಕ ಪಡೆದುಕೊಂಡಿದ್ದಾರೆ. ಅವರಿಗೆ ದಿನದ 24 ಗಂಟೆಯೂ ನೀರು ಪೂರೈಕೆಯಾಗುತ್ತದೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸಾರ್ವಜನಿಕರು ನೀರು ಬೀಳುವ ಕಡೆಗೆ ತೆರಳಿ ಹೊತ್ತು ತರಬೇಕಾಗಿದೆ’ ಎಂದು ಗ್ರಾಮಸ್ಥ ಅಪ್ಪೇಶ ದಳವಾಯಿ ತಿಳಿಸಿದರು.

ನೀರಿನ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಪಂಚಾಯ್ತಿ ಗಮನ ಸೆಳೆದಿದ್ದರೂ ಆಡಳಿತ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಾರ್ವಜನಿಕರೊಂದಿಗೆ ಪಿಡಿಒ ವರ್ತನೆಯೂ ಸರಿಯಾಗಿಲ್ಲ
ಅಪ್ಪೇಶ ದಳವಾಯಿ ಗ್ರಾಮಸ್ಥ

‘ಜಲಜೀವನ್ ಮಿಷನ್ ಯೋಜನೆಯೂ ಸಮರ್ಪಕ ಅನುಷ್ಠಾನವಾಗಿಲ್ಲ. ಈ ಯೋಜನೆಗೆ ಹಣ ಹರಿಯಿತು ವಿನಃ ನೀರು ಇನ್ನೂವರೆಗೆ ಹರಿದಿಲ್ಲ, ಹರಿಯುವ ಭರವಸೆಯೂ ಬತ್ತಿ ಹೋಗಿದೆ’ ಎಂದು ಅವರು ವಿಷಾದಿಸಿದರು.

ಪಿಡಿಒ ಸ್ಪಂದನೆಯಿಲ್ಲ

‘ಗ್ರಾಮದ ಜನರ ಸುಖ, ದುಃಖಕ್ಕೆ ಸ್ಪಂದಿಸಬೇಕಿದ್ದ ಪಿಡಿಒ ಊರಲ್ಲಿರುವ ಪಂಚಾಯ್ತಿಯಲ್ಲಿ ಹೆಚ್ಚು ಹೊತ್ತು ಇರುವುದನ್ನು ಜನರು ನೋಡಿಲ್ಲ. ಕೆಲಸದ ನಿಮಿತ್ತ ಸಾರ್ವಜನಿಕರು ಕಚೇರಿಗೆ ತೆರಳಿದರೆ, ‘ಸಭೆಗೆ ಹೋಗಿದ್ದಾರೆ. ಅಲ್ಲಿ ಹೋಗಿದ್ದಾರೆ, ಇಲ್ಲಿ ಹೋಗಿದ್ದಾರೆ’ ಎಂದು ಸಿಬ್ಬಂದಿಯಿಂದ ಉತ್ತರ ಬರುತ್ತದೆ. ಅವರನ್ನು ಪಂಚಾಯ್ತಿಯಲ್ಲಿ ನೋಡಿದ್ದ ತುಂಬಾ ಕಡಿಮೆ’ ಎಂಬುದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

‘ಬಿದ್ದ ಕೆಲವು ಮನೆಗಳಿಗೆ ಪರಿಹಾರ ಬಂದಿಲ್ಲ. ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ಊರ ಸ್ವಚ್ಛತೆ ಸರಿಯಾಗಿ ನಡೆಯುತ್ತಿಲ್ಲ. ದಶಕಗಳ ಕಾಲ ಕಾರ್ಯನಿರ್ವಹಿಸಿದ್ದ ಇಲ್ಲಿ ಸರ್ಕಾರಿ ಆರೋಗ್ಯ ಉಪಕೇಂದ್ರದ ಕಟ್ಟಡ ಅನಾಥವಾಗಿ ಬಿದ್ದಿದೆ. ಕಟ್ಟಡದ ಸುತ್ತಲೂ ಕಸಗಂಟಿ ಬೆಳೆದಿದೆ. ಕಿಟಕಿ, ಬಾಗಿಲು ಹಾಳಾಗಿವೆ. ಸಾರ್ವಜನಿಕರ ಮೂತ್ರ ವಿಸರ್ಜನೆಯ ತಾಣವಾಗಿ ಬದಲಾಗಿದೆ. ಕಟ್ಟಡ ಹಾಳಾಗುತ್ತ ನಡೆದಿದ್ದರೂ ಆರೋಗ್ಯ ಇಲಾಖೆಯೂ ಈ ಕಡೆಗೆ ಗಮನ ನೀಡುತ್ತಿಲ್ಲ. ಪಂಚಾಯ್ತಿಯೂ ಇದನ್ನು ಉಪಯೋಗಿಸಲು ಮುಂದಾಗುತ್ತಿಲ್ಲ’ ಎಂದು ಜನರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT