ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಪ್ಪಾಣಿ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲು

ಬಿಜೆಪಿ ಅಧಿಕಾರ ತಪ್ಪಿಸಲು ಕ್ರಮ– ಗುಮಾನಿ
Last Updated 7 ಸೆಪ್ಟೆಂಬರ್ 2018, 16:09 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಬದಲಾಯಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಈ ಮೊದಲು ಸಾಮಾನ್ಯ ಮಹಿಳೆ ಇದ್ದ ಮೀಸಲಾತಿಯನ್ನು ಎಸ್‌ಟಿಗೆ ಬದಲಾಯಿಸಲಾಗಿದೆ. ಬಿಜೆಪಿಗೆ ಅಧಿಕಾರ ಹೋಗುವುದನ್ನು ತಪ್ಪಿಸುವುದಕ್ಕಾಗಿಯೇ ಕಾಂಗ್ರೆಸ್‌ ಮುಖಂಡರು ಸರ್ಕಾರದ ಮೇಲೆ ಪ್ರಭಾವ ಬೀರಿ, ಮೀಸಲಾತಿ ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ನಿಪ್ಪಾಣಿ ನಗರಸಭೆಯ 31 ವಾರ್ಡ್‌ಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. 12 ವಾರ್ಡ್‌ಗಳಲ್ಲಿ ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿಗಳು ಪಕ್ಷದ ಹೆಸರಿನಲ್ಲಿಯೇ ಕಣಕ್ಕಿಳಿದಿದ್ದರು. ಶಾಸಕಿ, ಬಿಜೆಪಿಯ ಶಶಿಕಲಾ ಜೊಲ್ಲೆ ಹಾಗೂ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಅವರ ಸಂಘಟಿತ ಪ್ರಯತ್ನದ ಫಲವಾಗಿ 13 ಸದಸ್ಯರು ಗೆಲುವು ಸಾಧಿಸಿದ್ದರು. ಇನ್ನುಳಿದ 6 ವಾರ್ಡ್‌ಗಳಲ್ಲಿ ಪಕ್ಷೇತರರು ಜಯಗಳಿಸಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.

ಈ ಮೊದಲು ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದಾಗ ಬಿಜೆಪಿ ಅಭ್ಯರ್ಥಿ ನೀತಾ ಬಾಗಡೆ ಅವರು ಹೆಸರು ಕೇಳಿಬರುತ್ತಿತ್ತು. ಈಗ ಮೀಸಲಾತಿ ಬದಲಾವಣೆಯಾಗಿದ್ದು, ಎಸ್‌ಟಿ ಮೀಸಲಾಗಿದೆ. 14ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ ಬೆಂಬಲಿತ ದತ್ತಾ ನಾಯಿಕ ಅವರೊಬ್ಬರೆ ಎಸ್‌.ಟಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ. ಉಪಾಧ್ಯಕ್ಷ ಸ್ಥಾನವು ಸಾಮಾನ್ಯವಾಗಿದ್ದು, ಬದಲಾವಣೆಯಾಗಿಲ್ಲ.

ದತ್ತಾ ನಾಯಿಕ ಅವರು ಕಾಂಗ್ರೆಸ್‌ ಮುಖಂಡ ಸುಭಾಸ ಜೋಷಿ ಜೊತೆ ಬೆಂಬಲಿಗರಾಗಿದ್ದಾರೆ. ಜೊಲ್ಲೆ ದಂಪತಿ ಜೊತೆ ವೈರತ್ವ ಹೊಂದಿರುವ ಜೋಷಿ ಅವರು, ಅಧ್ಯಕ್ಷ ಸ್ಥಾನ ಬಿಜೆಪಿಗೆ ಹೋಗುವುದನ್ನು ತಪ್ಪಿಸಲು ಕಾಂಗ್ರೆಸ್‌ನ ಪ್ರಭಾವಿ ಮುಖಂಡರನ್ನು ಬಳಸಿಕೊಂಡು ಮೀಸಲಾತಿ ಬದಲಾಯಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT