ಶನಿವಾರ, ನವೆಂಬರ್ 28, 2020
22 °C

ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆ ಚುನಾವಣೆ: ನಾಮಪತ್ರ ಸಲ್ಲಿಕೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ಇಲ್ಲಿನ ಕೃಷ್ಣಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ ಕುಮಠಳ್ಳಿ ನೇತೃತ್ವದಲ್ಲಿ ರೈತ ಸಹಕಾರಿ ಪೆನಲ್‌ನವರು ಬುಧವಾರ ನಾಮಪತ್ರ ಸಲ್ಲಿಸಿದರು.

ನಂತರ ನಡೆದ ಸಭೆಯಲ್ಲಿ ಮಾತನಾಡಿದ ಸವದಿ, ‘2020–25ನೇ ಸಾಲಿನ ಚುನಾವಣೆಗೆ ರೈತ ಸಹಕಾರಿ ಪೆನಲ್‌ನ 16 ಮಂದಿಯಿಂದ ನಾಮಪತ್ರ ಸಲ್ಲಿಕೆಯಾಗಿದೆ’ ಎಂದರು.

‘ಸಹಕಾರ ಕ್ಷೇತ್ರಗಳ ಬೆಳವಣಿಗೆ ಬಗ್ಗೆ ವೈದ್ಯನಾಥನ್ ವರದಿ ಕೇಂದ್ರಕ್ಕೆ ಸಲ್ಲಿಕೆಯಾಗಿದೆ. ಈ ರಂಗದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದು ಶಿಫಾರಸು ಮಾಡಿದ್ದಾರೆ. ರೈತರಿಗೆ ಮುಕ್ತವಾಗಿ ಸಹಕಾರಿ ಕ್ಷೇತ್ರದ ಮಾಹಿತಿ ಇರಲೆಂದು ಈ ವರದಿ ಆಧರಿಸಿ, ಕೇಂದ್ರವು ಆಯೋಗ ರಚಿಸಿದೆ. ಶಿಫಾರಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಮೊದಲಿಗೆ ಜಾರಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಷೇರು ಹೊಂದಿರುವ ಸಹಕಾರಿ ಸಂಘದ ಸದಸ್ಯ ಕನಿಷ್ಠ ಮೂರು ಸಾಮಾನ್ಯ ಸಭೆಗಾದರೂ ಹಾಜರಾಗಬೇಕು. ಯಾರು ಹಾಜರಾಗುವುದಿಲ್ಲವೋ ಅವರ ಸದಸ್ಯತ್ವ ತೆಗೆಯಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಸದ್ಯಸ್ಯತ್ವ ರದ್ದತಿಗೆ ವಿರೋಧ ವ್ಯಕ್ತಪಡಿಸಿದ್ದೇನೆ. ಉಳಿದಂತೆ ವರದಿ ಅನುಷ್ಠಾನಕ್ಕೆ ತರಲಾಗಿದೆ ಎಂದರು.

‘ಕಾರ್ಖಾನೆ ಈಗಾಗಲೆ ₹ 39 ಕೋಟಿ ನಷ್ಟ ಅನುಭವಿಸಿದೆ. ಕೇಂದ್ರದಿಂದ ಸಬ್ಸಿಡಿ ಬಂದರೆ ಎಲ್ಲವೂ ಸರಿಯಾಗುತ್ತದೆ. ಬಾಕಿ ಉಳಿದ ಹಣವನ್ನೂ ಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

ಶಾಸಕ ಮಹೇಶ ಕುಮಠಳ್ಳಿ, ‘ರೈತರಿಗೆ ಈ ಕಾರ್ಖಾನೆ ಕಾಮಧೇನು ಆಗಿದೆ. ಪರಪ್ಪ ಸವದಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ’ ಎಂದು ಹೇಳಿದರು.

ಮುಖಂಡರಾದ ಶಾಂತಿನಾಥ ನಂದೇಶ್ವರ, ಗುಳಪ್ಪ ಜತ್ತಿ, ಮಲ್ಲೇಶ ಸವದಿ, ಶಿವಾನಂದ ಸವದಿ, ಚಿದಾನಂದ ಸವದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.