ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಥಳೀಯ ಸಂಸ್ಥೆಗಳಲ್ಲಿ ನೀರು, ಆಸ್ತಿ ಕರ ವಸೂಲಿ ಮಾಡದಿದ್ದರೆ ಅಮಾನತು: ಸುರೇಶ್‌

Published 6 ಅಕ್ಟೋಬರ್ 2023, 14:40 IST
Last Updated 6 ಅಕ್ಟೋಬರ್ 2023, 14:40 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಅಪಾರ ಪ್ರಮಾಣದ ನೀರಿನ ಕರ ಹಾಗೂ ಆಸ್ತಿ ಕರ ಬಾಕಿ ಉಳಿದಿದೆ. ವಸೂಲಿಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದೇನೆ’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕರ ಬರದಿದ್ದರೆ ಸರ್ಕಾರಕ್ಕೆ ಹೊರೆಯಾಗುತ್ತದೆ. ಹಾಗಾಗಿ, ಎಲ್ಲ ರೀತಿಯ ತೆರಿಗೆಗಳನ್ನೂ ಸಮರ್ಪಕವಾಗಿ ವಸೂಲಿ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡಲಾಗಿದೆ’ ಎಂದರು.

‘ಇದೇ ವರ್ಷದಿಂದ ವಾಣಿಜ್ಯ ಮಳಿಗೆಗಳ ಪರವಾನಗಿಯನ್ನು ಐದು ವರ್ಷದ ಅವಧಿಗೆ ನೀಡಲಾಗುತ್ತದೆ. ಐದೂ ವರ್ಷಗಳ ಶುಲ್ಕವನ್ನು ಏಕಕಾಲಕ್ಕೆ ಪಡೆಯಲಾಗುವುದು. ಇದರಿಂದ ವ್ಯಾ‍ಪಾರಿಗಳು ಪ್ರತಿ ವರ್ಷ ಕಚೇರಿಗೆ ಅಲೆಯುವದು ತಪ್ಪುತ್ತದೆ, ಸರ್ಕಾರಕ್ಕೂ ಒಳ್ಳೆಯ ಆದಾಯ ಬರುತ್ತದೆ’ ಎಂದರು.

‘ನಗರ ಮತ್ತು ಪಟ್ಟಣಗಳಲ್ಲಿ ಜಾಹೀರಾತು ಫಲಕ ಹಾಕಿಯೂ ಶುಲ್ಕ ನೀಡದಿದ್ದರೆ; ಅಂಥ ಫಲಕಗಳನ್ನು ಕಿತ್ತುಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ‍ಪುಕ್ಕಟೆ ಪ್ರಚಾರ ತೆಗೆದುಕೊಳ್ಳುವ ಕಂಪನಿಗಳಿಂದ ಸ್ಥಳೀಯ ಸಂಸ್ಥೆಗಳಿಗೂ ಬಿಡಿಗಾಸು ಆದಾಯ ಇಲ್ಲ, ಸರ್ಕಾರಕ್ಕೂ ಪ್ರಯೋಜನವಿಲ್ಲ. ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಪಾರಂಪರಿಕ ಕಟ್ಟಡ ಇರುವ ಕಾರಣ ಅಲ್ಲಿನ ಫಲಕ ತೆರವು ಮಾಡುವಂತೆಯೂ ತಿಳಿಸಲಾಗುವುದು’ ಎಂದರು.

ಉಪ ಸಮಿತಿ ರಚನೆ: ‘ಬೆಂಗಳೂರು ನಗರ ಮಾದರಿಯಲ್ಲೇ ಇತರ ನಗರಗಳೂ ಅಭಿವೃದ್ಧಿಯತ್ತ ಸಾಗಬೇಕಿದೆ. ಅದಕ್ಕಾಗಿ ಭೂ ಪರಿವರ್ತನೆ ನಿಯಮದಲ್ಲಿ ಬದಲಾವಣೆ ಮಾಡಲಾಗುವುದು. ಇದಕ್ಕಾಗಿ ಐವರು ಸಚಿವರನ್ನು ಒಳಗೊಂಡ ಸಂಪುಟ ಉಪಸಮಿತಿ ರಚಿಸಲಾಗಿದೆ. ಇದರಲ್ಲಿ ನಾನು, ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ, ಪೌರಾಡಳಿತ ಸಚಿವ ರಹೀಂ ಖಾನ್, ಕಂದಾಯ ಕೃಷ್ಣ ಭೈರೇಗೌಡ, ಅರಣ್ಯ ಸಚಿವ ಭೀಮಣ್ಣ ಖಂಡ್ರೆ ಇದ್ದೇವೆ. ಮುಂದಿನ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಯಲಿದೆ’ ಎಂದರು.

‘ಚಿತ್ರದುರ್ಗದಲ್ಲಿ ಮಲಿನ ನೀರು ಕುಡಿದು ಐವರು ಜೀವ ಕಳೆದುಕೊಂಡರು. ರಾಜ್ಯದಲ್ಲಿ ಇಂಥ ಘಟನೆ ಮರಳಬಾರದು. ಅದಕ್ಕಾಗಿ ಎಲ್ಲಿಯೂ ಮಲಿನ ನೀರು ಸರಬರಾಜು ಆಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಶಾಸಕರಾದ ಮಹೇಂದ್ರ ತಮ್ಮಣ್ಣವರ, ವಿಶ್ವಾಸ ವೈದ್ಯ, ಆಸೀಫ್‌ ಸೇಠ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT