ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್‌ ಬೆಂಬಲಿಸುವವರಿಗೆ ಬಿಸಿ ಮುಟ್ಟಿಸಿ, ಕಪಾಳಮೋಕ್ಷಕ್ಕೆ ₹25 ಸಾವಿರ–ಭೀಮಾಶಂಕರ

ಬಹುಮಾನ
Last Updated 16 ಅಕ್ಟೋಬರ್ 2018, 10:35 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಲ್ಲಿ ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯವರು ನಡೆಸುವ ಕರಾಳ ದಿನಾಚರಣೆ ಬೆಂಬಲಿಸುವ ರಾಜಕಾರಣಿಗಳಿಗೆ ಕಪಾಳಮೋಕ್ಷ ಮಾಡಿದವರಿಗೆ ₹ 25ಸಾವಿರ ಬಹುಮಾನ ನೀಡಲಾಗುವುದು’ ಎಂದು ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಇಲ್ಲಿ ಘೋಷಿಸಿದರು.

‘ಎಂಇಎಸ್‌ನವರು ಪ್ರತಿ ವರ್ಷವೂ ನಾಡದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇಲ್ಲಿನ ರಾಜಕಾರಣಿಗಳು ಮತ ಬ್ಯಾಂಕಿಗಾಗಿ ಅವರಿಗೆ ಬೆಂಗಾವಲಾಗಿ ನಿಲ್ಲುವುದನ್ನು ಬಿಡಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಕರಾಳ ದಿನಾಚರಣೆಗೆ ಯಾವುದೇ ಪಕ್ಷದ ರಾಜಕಾರಣಿಗಳೂ ಅವಕಾಶ ಕೊಡಬಾರದು.‌ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ಕೊಟ್ಟಲ್ಲಿ ಅದನ್ನು ಕನ್ನಡ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತವೆ. ನಮ್ಮ ಸಂಘಟನೆಯ ಮಹಿಳಾ ಕಾರ್ಯಕರ್ತರು ಒನಕೆ ಹಿಡಿದು ಪ್ರತಿಭಟನೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದಲ್ಲಿ ಅದಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರವೇ ಹೊಣೆಯಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪಾಠ ಕಲಿಸಬೇಕು:

‘ನಾಡದ್ರೋಹಿಗಳನ್ನು ಬೆಂಬಲಿಸುವ ರಾಜಕಾರಣಿಗಳಿಗೆ ಗಡಿನಾಡಿನ ಕನ್ನಡಿಗರು ತಕ್ಕಪಾಠ ಕಲಿಸಬೇಕು’ ಎಂದರು.

‌‘ಮಹಾರಾಷ್ಟ್ರದ ಹೋರಾಟಗಾರ ಬಾಪಟ್ ಅವರ ಉಪವಾಸಕ್ಕೆ ಮಣಿದ ಕೇಂದ್ರ ಸರ್ಕಾರ 1966ರಲ್ಲಿ ಮೆಹರಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಆಗಿದ್ದ ಪಿ.ವಿ. ನಾಯಕ ಅವರು ಆಯೋಗದ ವರದಿ ಹೇಗಿದ್ದರೂ ಅದನ್ನು ಒಪ್ಪುವುದಾಗಿ ಘೋಷಿಸಿದ್ದರು. ಆದರೆ, ವರದಿ‌ ಬಂದ ನಂತರ ನಿಲುವು ಬದಲಿಸಿದ ಮಹಾರಾಷ್ಟ್ರ ಸರ್ಕಾರ ಗಡಿ ತಂಟೆಗೆ ಜೀವ ತುಂಬುವ ಕೆಲಸ ಮಾಡುತ್ತಾ ಬಂದಿದೆ. ಆ ಪಾಪದ ಕೂಸೇ ಎಂಇಎಸ್ ಸಂಘಟನೆ’ ಎಂದು ಟೀಕಿಸಿದರು.

‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಬೇಕು. ವಿಶಾಲ ಮಹಾರಾಷ್ಟ್ರ ರಾಜ್ಯ ಸ್ಥಾಪಿಸಬೇಕು ಎಂಬ ಗುರಿ ಇಟ್ಟುಕೊಂಡಿರುವ ಎಂಇಎಸ್‌ ನಾಯಕರು ಭಾಷೆ ಹೆಸರಿನಲ್ಲಿ ಬೆಂಕಿ‌ ಹಚ್ಚುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಒತ್ತಾಯಿಸಿದರು.

‘ಎಪಿಎಂಸಿ ಚುನಾವಣೆಯಲ್ಲಿ ಎಂಇಎಸ್ ಬೆಂಬಲಿತ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಸರಿಯಲ್ಲ. ಕನ್ನಡಿಗನಿಗೆ ಅವಕಾಶ ದೊರೆಯುವಂತೆ ಮಾಡಬೇಕಿತ್ತು. ರಾಜಕಾರಣಿಗಳ ಈ ನಿಲುವು ಸರಿಯಲ್ಲ’ ಎಂದರು.

ಮುಖಂಡರಾದ ಬಾಬು ಸಂಗೋಡಿ, ಆನಂದ, ಗಿರೀಶ ಪೂಜಾರ, ಸುಷ್ಮಾ ಯಾದವಾಡ, ಶೋಭಾ,‌‌ ನಾಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT