ಶುಕ್ರವಾರ, ಆಗಸ್ಟ್ 6, 2021
25 °C
ಜೂನ್‌ 15ರವರೆಗೆ ಮುಂದುವರಿಕೆ: ವಿಟಿಯು ಮಾಹಿತಿ

ವಿದ್ಯಾರ್ಥಿಗಳನ್ನು ತಲುಪಿದ ಆನ್‌ಲೈನ್‌ ಪಾಠ: ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್–19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಿಂದ ನಡೆಸುತ್ತಿರುವ ಆನ್‌ಲೈನ್‌ ಪಾಠ ಗರಿಷ್ಠ ವಿದ್ಯಾರ್ಥಿಗಳನ್ನು ತಲುಪಿದೆ’ ಎಂದು ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದ್ದಾರೆ.

‘ಕೊರೊನಾ ಭೀತಿ ಇರುವುದರಿಂದ ಕಲಿಕಾ ಪ್ರಕ್ರಿಯೆ ಮುಂದುವರಿಸಲು ಡಿಜಿಟಲ್ ತಂತ್ರಜ್ಞಾನದ ಮೂಲಕ ಪರ್ಯಾಯ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ಎಂಜಿನಿಯರಿಂಗ್‌ ಕಾಲೇಜುಗಳು ನಡೆಸಿದ ಆನ್‌ಲೈನ್ ತರಗತಿಗಳು ವಿದ್ಯಾರ್ಥಿಗಳನ್ನು ಸರಿಯಾಗಿ ತಲುಪಿಲ್ಲ ಎಂಬ ಕೆಲವರ ಆರೋಪದಲ್ಲಿ ಹುರುಳಿಲ್ಲ’ ಎಂದು ಹೇಳಿದ್ದಾರೆ.

‌‘ಆನ್‌ಲೈನ್‌ ಬೋಧನೆಗೆ ಸಂಬಂಧಿಸಿದಂತೆ ಅಂಗಸಂಸ್ಥೆಗಳು ಹಾಗೂ ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳಿಂದ ಅಂಕಿಅಂಶ ಸಂಗ್ರಹಿಸಲಾಗಿದೆ. ಆ ಪ್ರಕಾರ, ರಾಜ್ಯದಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಈ ಕಲಿಕಾ ಅವಧಿಯಲ್ಲಿ ಸಂಪೂರ್ಣವಾಗಿ ಭಾಗವಹಿಸಿದ್ದಾರೆ’ ಎಂದು ಕುಲಸಚಿವ ಡಾ.ಎ.ಎಸ್. ದೇಶಪಾಂಡೆ ಸಮರ್ಥಿಸಿಕೊಂಡಿದ್ದಾರೆ.

‘ಶೇ 70ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಗೆ ಹಾಗೂ ಶೇ 95ರಷ್ಟು ಮಂದಿ ಸಿಐಇ (ನಿರಂತರ ಆಂತರಿಕ ಮೌಲ್ಯಮಾಪನ) ಅಂದರೆ ಆಂತರಿಕ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಆನ್‌ಲೈನ್‌ ಮೂಲಕವೇ ತಮ್ಮ ಕಾರ್ಯಯೋಜನೆ(ಅಸೈನ್ಮೆಂಟ್) ಸಲ್ಲಿಸಿದ್ದಾರೆ. ಇದೆಲ್ಲವನ್ನೂ ಎಂಜಿನಿಯರಿಂಗ್‌ ಕಾಲೇಜುಗಳ ಪ್ರಾಂಶುಪಾಲರು ದೃಢಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

‘ಲಾಕ್‌ಡೌನ್‌ಗೂ ಮುನ್ನ ಕಾಲೇಜುಗಳಲ್ಲಿ ತರಗತಿಗಳ ಮೂಲಕ ಶೇ 20ರಿಂದ ಶೇ 30ರಷ್ಟು ಪಠ್ಯಕ್ರಮ ಪೂರ್ಣಗೊಂಡಿತ್ತು. ಮೇ ಅಂತ್ಯದ ವೇಳೆಗೆ ಶೇ 70ರಿಂದ ಶೇ 75ರಷ್ಟು ಪಠ್ಯಕ್ರಮ ಪೂರ್ಣಗೊಂಡಿದೆ. ಜೂನ್ 15ರವರೆಗೆ ಆನಲೈನ್‌ ತರಗತಿಗಳನ್ನು ಮುಂದುವರಿಸಲು ತಿಳಿಸಲಾಗಿದೆ’ ಎಂದಿದ್ದಾರೆ.

‘ವಿದ್ಯಾರ್ಥಿಗಳು ಅವಶ್ಯ ಸಾಧನ (ಡೆಸ್ಕ್‌ಟಾಪ್‌ ಕಂಪ್ಯೂಟರ್/ ಲ್ಯಾಪ್‌ಟಾಪ್‌/ ಸ್ಮಾರ್ಟ್‌ ಫೋನ್‌) ಹೊಂದಿರುವುದು ಹಾಗೂ ಅವರ ಪ್ರದೇಶಗಳಲ್ಲಿ ನೆಟ್‌ವರ್ಕ್‌ ಲಭ್ಯತೆ ಇದೆಯೇ ಎಂಬಿತ್ಯಾದಿ ಮುಖ್ಯ ಅಂಶಗಳ ಮೇಲೆ ಪ್ರಾಂಶುಪಾಲರ ಮೂಲಕ ಸಮೀಕ್ಷೆ ನಡೆಸಲಾಗಿದೆ. ಅವರ ವರದಿ ಪ್ರಕಾರ, ಶೇ 80ರಿಂದ ಶೇ 85ರಷ್ಟು ವಿದ್ಯಾರ್ಥಿಗಳು ಡಿಜಿಟಲ್ ಸ್ವರೂಪದ ಕಲಿಕಾ ವಿಧಾನಕ್ಕೆ ತಯಾರಾಗಿದ್ದಾರೆ ಎನ್ನುವುದನ್ನು ಗಮನಿಸಲಾಗಿದೆ’.

‘ಕೆಲವೆಡೆ ಕಳಪೆ ನೆಟ್‌ವರ್ಕ್‌, ತಾಂತ್ರಿಕ ತೊಂದರೆ, ಬ್ಯಾಂಡ್ ವಿಡ್ತ್ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ವಿಟಿಯು ಇ-ಲರ್ನಿಂಗ್‌ ಘಟಕವು ತನ್ನದೆ ಆದ ಯುಟ್ಯೂಬ್ ವಾಹಿನಿ ಆರಂಭಿಸಿದೆ. ಅನುಭವಿ ಉಪನ್ಯಾಸಕರಿಂದ ಪಾಠ ಮಾಡಿಸಿದ 322 ಕೋರ್ಸ್‌ಗಳಿಗೆ ಸಂಬಂಧಿಸಿದ 10,200 ಉಪನ್ಯಾಸಗಳನ್ನು ಅಪ್‌ಲೋಡ್‌ ಮಾಡಲಾಗಿತ್ತು. ಅಧೀನ ಕಾಲೇಜುಗಳಿಗೂ ಅಪ್‌ಲೋಡ್‌ ಮಾಡಲು ಸೂಚಿಸಲಾಗಿತ್ತು. ಆ ಪ್ರಕಾರ ಸಾಕಷ್ಟು ಕಾಲೇಜುಗಳು ತಮ್ಮದೇ ಯೂಟ್ಯೂಬ್ ವಾಹಿನಿ ಆರಂಭಿಸಿ ಅದರಲ್ಲಿ ತರಗತಿಗಳನ್ನು ಹಾಕಿದ್ದಾರೆ. ವಿಟಿಯು ಚಾನೆಲ್‌ ವೀಕ್ಷಣೆಯು 2 ತಿಂಗಳಲ್ಲಿ 3ಲಕ್ಷಕ್ಕೂ ಹೆಚ್ಚಾಗಿದೆ’ ಎಂದು ವಿವರಿಸಿದ್ದಾರೆ.

‘ಎಲ್ಲ ಕಾಲೇಜುಗಳ ಉಪನ್ಯಾಸಕರು ವಾಟ್ಸ್‌ ಆ್ಯಪ್‌ ಗ್ರೂಪ್, ಗೂಗಲ್ ಮೀಟ್, ವೆಬ್ ಎಕ್ಸ್, ಜೂಮ್, ಎಂಎಸ್-ಟೀಮ್ ಹೀಗೆ ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಉಪನ್ಯಾಸ ಟಿಪ್ಪಣಿ, ಕಾರ್ಯಯೋಜನಗಳನ್ನು ನೀಡಿದ್ದಾರೆ ಮತ್ತು ದೂರವಾಣಿ ಮೂಲಕವೂ ಸಂಭಾಷಣೆ ನಡೆಸಿದ್ದಾರೆ’ ಎಂದು ತಿಳಿಸಿದ್ದಾರೆ.

'ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನ ಸಂಪಾದನೆ ಮತ್ತು ವಿಶ್ವಾಸ ಗಳಿಸಿದ ನಂತರವಷ್ಟೇ ಮೌಲ್ಯಮಾಪನ ಮಾಡಲು ಪ್ರಯತ್ನ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು