ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಲಾಕ್‌ಡೌನ್‌ ನೋವಿಗೆ ತೆರಿಗೆ ‘ಬರೆ’

ತೆರಿಗೆ ಹೆಚ್ಚಿಸುವ ಸ್ಥಳೀಯ ಸಂಸ್ಥೆಗಳ ನಿರ್ಧಾರಕ್ಕೆ ವಿರೋಧ
Last Updated 14 ಮೇ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್‌–19 ಲಾಕ್‌ಡೌನ್ ಪರಿಣಾಮವಾಗಿ ಬಹುತೇಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಿರುವಾಗ ನಗರಪಾಲಿಕೆಯು ಆಸ್ತಿ ತೆರಿಗೆಯನ್ನು ಶೇ 15ರಷ್ಟು ಹೆಚ್ಚಿಸಿ ಪರಿಷ್ಕರಣೆಗೆ ಕ್ರಮ ವಹಿಸಿರುವುದು ಹಾಗೂ ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ತೆರಿಗೆ ಹೊರೆ ಹೊರಿಸಲು ಸಿದ್ಧತೆ ಮಾಡಿಕೊಂಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆ ನಡೆಯುತ್ತದೆ. 2017ರಲ್ಲಿ ‌ಈ ಪ್ರಕ್ರಿಯೆ ನಡೆದಿತ್ತು. ಆಗಲೂ ಶೇ 15ರಷ್ಟು ತೆರಿಗೆ ಹೆಚ್ಚಿಸಲಾಗಿತ್ತು.

ಈ ಬಾರಿ, 01.04.2020ರಿಂದ ಜಾರಿಗೆ ಬರುವಂತೆ ತೆರಿಗೆ ಏರಿಕೆ ಆಗಿದೆ. ವಾಣಿಜ್ಯ, ವಾಸದ ಮನೆಗಳು, ವಾಸೇತರ ಹಾಗೂ ವಾಣಿಜ್ಯವಲ್ಲದ ಮತ್ತು ಖಾಲಿ ನಿವೇಶನ ಸೇರಿ ಎಲ್ಲ ರೀತಿಯ ಆಸ್ತಿಗಳಿಗೂ ತಲಾ ಕನಿಷ್ಠ ಶೇ 15ರಷ್ಟು ತೆರಿಗೆ ಹೆಚ್ಚಿಸಲಾಗಿದೆ.

ಪರಿಸ್ಥಿತಿ ಪೂರಕವಾಗಿಲ್ಲ:ಆದರೆ, ಈ ಸಾಲಿನಲ್ಲಿ ಪರಿಸ್ಥಿತಿ ಪೂರಕವಾಗಿಲ್ಲದಿರುವುದು ಕಂಡುಬಂದಿದೆ. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿ ಬಹುತೇಕ ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಅದರಲ್ಲೂ ಮಧ್ಯಮ ವರ್ಗದವರು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸವೇ ಸಿಗುತ್ತಿಲ್ಲ. ವ್ಯಾಪಾರ–ವಹಿವಾಟು ಸಂಪೂರ್ಣ ಚೇತರಿಕೆ ಕಂಡಿಲ್ಲ. ಈ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆಯಲು ಪಾಲಿಕೆ ಮೊದಲಾದ ಸ್ಥಳೀಯ ಸಂಸ್ಥೆಗಳು ಯೋಜಿಸಿರುವುದಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ.

ಹೋದ ವರ್ಷ ಜುಲೈ ಅಂತ್ಯದಿಂದ ಉಂಟಾದ ಪ್ರವಾಹ ಮತ್ತು ಅತಿವೃಷ್ಟಿಯಿಂದ ಕಂಗೆಟ್ಟಿದ್ದ ಜಿಲ್ಲೆಯ ಜನರು, ಇನ್ನೇನು ಸುಧಾರಿಸಿಕೊಳ್ಳುವ ವೇಳೆಗಾಗಲೆ ಲಾಕ್‌ಡೌನ್‌ ಬಲವಾದ ಪೆಟ್ಟು ಕೊಟ್ಟಿದೆ. ಪರಿಣಾಮ, ತೆರಿಗೆ ಪರಿಷ್ಕರಣೆಗೆ ಬೆಂಬಲ ದೊರೆಯುವುದು ಅನುಮಾನ ಎನ್ನುವಂತಹ ಸ್ಥಿತಿ ಇದೆ. 2019–20ನೇ ಸಾಲಿನ ತೆರಿಗೆ ವಸೂಲಾತಿಯೇ ಸಮರ್ಪಕವಾಗಿ ನಡೆದಿಲ್ಲ. ಬಹಳಷ್ಟು ಮಂದಿ ಇನ್ನೂ ತೆರಿಗೆ ಪಾವತಿಸುವುದು ಬಾಕಿ ಇದೆ. ಹೀಗಿರುವಾಗ ಹೆಚ್ಚಿನ ತೆರಿಗೆಯ ಹೊರೆಯನ್ನು ಹೊರಿಸುವುದಕ್ಕೆ ಸ್ಥಳೀಯ ಸಂಸ್ಥೆಗಳು ಮುಂದಾಗಿವೆ.

ಮುಂದೂಡಲು ಆಗ್ರಹ:ನಗರಪಾಲಿಕೆಯಲ್ಲಿ ಪ್ರಸ್ತುತ ಜನಪ್ರತಿನಿಧಿಗಳಿಲ್ಲ. ಹೀಗಾಗಿ, ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ತೆರಿಗೆ ಪರಿಷ್ಕರಣೆಗೆ ನಿರ್ಣಯಿಸಲಾಗಿದೆ. ಇದಕ್ಕೆ ನಗರದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈಚೆಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಲಾಗಿದೆ. ಈ ಬಾರಿ ತೆರಿಗೆ ಹೆಚ್ಚಿಸಿದರೆ ಅದನ್ನು ಕಟ್ಟುವ ಚೈತನ್ಯ ಜನರಲ್ಲಿ ಇಲ್ಲ. ಹೀಗಾಗಿ, ಮುಂದಿನ ವರ್ಷಕ್ಕೆ ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.

‘ನಿಯಮದ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆ ಮಾಡಬೇಕು. ಇದನ್ನು ಕಡ್ಡಾಯವಾಗಿ ಅನುಷ್ಠಾನ ಮಾಡುವಂತೆ ನಿರ್ದೇಶನವಿದೆ. ಅದರಂತೆ ಕ್ರಮ ಕೈಗೊಂಡಿದ್ದೇವೆ. ಕೋವಿಡ್–19 ಲಾಕ್‌ಡೌನ್‌ನಿಂದ ಜನರಿಗೆ ತೊಂದರೆ ಆಗಿರುವ ಹಿನ್ನೆಲೆಯಲ್ಲಿ ಈ ಬಾರಿ ತೆರಿಗೆ ಪರಿಷ್ಕರಣೆ ಬೇಡ ಎಂದು ಶಾಸಕರು ಮನವಿ ಸಲ್ಲಿಸಿದ್ದಾರೆ. ಸರ್ಕಾರದ ನಿರ್ದೇಶನದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತೆರಿಗೆ ಪರಿಷ್ಕರಣೆ ಮುಂದೂಡುವಂತೆ ಸರ್ಕಾರವನ್ನು ಆಗ್ರಹಿಸಿದ್ದೇವೆ. ಈ ಕುರಿತು ಇನ್ನೊಂದು ವಾರದಲ್ಲಿ ಅಧಿಕೃತ ಆದೇಶ ಹೊರಬೀಳಬಹುದು. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಶಾಸಕ ಅಭಯ ಪಾಟೀಲ ಪ್ರತಿಕ್ರಿಯಿಸಿದರು.

***

ಪ್ರತಿಕ್ರಿಯಿಸಿ

ಲಾಕ್‌ಡೌನ್‌ ತಂದಿತ್ತಿರುವ ಸಂಕಷ್ಟದ ಸಂದರ್ಭದಲ್ಲಿ, ಜಿಲ್ಲೆಯಲ್ಲಿ ನಗರಪಾಲಿಕೆಯೂ ಸೇರಿ ಸ್ಥಳೀಯ ಸಂಸ್ಥೆಗಳು ತೆರಿಗೆ ಹೆಚ್ಚಿಸಿ ಜನರಿಗೆ ಹೊರೆ ಹಾಕುವುದು ಸರಿಯೋ, ಸಮಂಜಸವೋ? ಓದಗರು ತಮ್ಮ ಅಭಿಪ್ರಾಯ ತಿಳಿಸಬಹುದು. ಆಯ್ದ ಪ್ರತಿಕ್ರಿಯೆಗಳನ್ನು ಪ್ರಕಟಿಸಲಾಗುವುದು. 94820 73752

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT