ಸೋಮವಾರ, ಮಾರ್ಚ್ 8, 2021
25 °C
ಡಾ.ಶೈಲೇಶ ಪಾಟೀಲ ಮಾಹಿತಿ

‘ಒಆರ್‌ಎಸ್ ದ್ರಾವಣ ಎಲ್ಲರೂ ಸೇವಿಸಬಹುದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ತುಂಬಾ ನಿಶಕ್ತಿ ಹೊಂದಿದಾಗ ಒಆರ್‌ಎಸ್‌ ದ್ರಾವಣವು ಅಮೃತದಂತೆ ಕೆಲಸ ನಿರ್ವಹಿಸುತ್ತದೆ. ಇದನ್ನು ಯಾವ ವಯಸ್ಸಿನವರು ಬೇಕಾದರೂ ಸೇವಿಸಬಹುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ’ ಎಂದು ಮಕ್ಕಳ ತಜ್ಞ ವೈದ್ಯರ ಸಂಘ ಬೆಳಗಾವಿ ಘಟಕದ ಅಧ್ಯಕ್ಷ ಡಾ.ಶೈಲೇಶ ಪಾಟೀಲ ಹೇಳಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದಿಂದ ಈಚೆಗೆ ಹಮ್ಮಿಕೊಂಡಿದ್ದ ‘ಒಆರ್‌ಎಸ್ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅತಿಸಾರ ಹಾಗೂ ವಾಂತಿಯಿಂದಾಗಿ ಪ್ರತಿ ವರ್ಷ ಭಾರತದಲ್ಲಿ ಮಿಲಿಯನ್‌ನಷ್ಟು ಮಕ್ಕಳು ಅಸುನೀಗುತ್ತಿದ್ದಾರೆ ಎಂಬ ಅಂಕಿ–ಅಂಶ ಆತಂಕ ಮೂಡಿಸುತ್ತದೆ. ಅನಾರೋಗ್ಯಕರ ಪರಿಸರ, ನೈರ್ಮಲ್ಯವಿಲ್ಲದ ವಾತಾವರಣ, ಕೆಟ್ಟ ಹವ್ಯಾಸಗಳ ಕಾರಣಗಳಿಂದ ಅತಿಸಾರ, ವಾಂತಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ’ ಎಂದು ತಿಳಿಸಿದರು.

ಹಿರಿಯ ವೈದ್ಯ ಡಾ.ಎಚ್.ಬಿ. ರಾಜಶೇಖರ ಮಾತನಾಡಿ, ‘ಅನಾದಿ ಕಾಲದಿಂದಲೂ ಮನುಕುಲವನ್ನು ಶೋಷಿಸುತ್ತಾ ಬಂದಿರುವ ಈ ನಿರ್ಜಲೀಕರಣ ಎಂಬ ಮಾರಿಯನ್ನು ಆರೋಗ್ಯಕರ ಹವ್ಯಾಸಗಳಿಂದ ದೂರವಿಡಬಹುದಾಗಿದೆ. ಒಂದು ವೇಳೆ ಇದಕ್ಕೆ ಸಿಲುಕಿದರೆ ಒಆರ್‌ಎಸ್ ದ್ರಾವಣ ತೆಗೆದುಕೊಳ್ಳಬೇಕು. ಇದು ಶರೀರದಲ್ಲಿ ನೀರಿನ ಪ್ರಮಾಣವನ್ನು ಸರಿದೂಗಿಸುವಲ್ಲಿ ಪ್ರಥಮ ಪಾತ್ರ ವಹಿಸುತ್ತದೆ. ಇದರ ಜೊತೆಗೆ ತಕ್ಕ ಚಿಕಿತ್ಸೆ ಪಡೆದುಕೊಂಡರೆ ರೋಗದಿಂದ ಮುಕ್ತಿ ಹೊಂದಬಹುದು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಆರ್.ಜಿ. ನೆಲವಗಿ ಮಾತನಾಡಿ, ‘ನಿರ್ಜಲೀಕರಣ ಹವಾಮಾನದ ಆಧಾರದ ಮೇಲೆ ಬರುವ ರೋಗವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಹಲವು ಸಾಮಾಜಿಕ ಸಂಘಗಳು ಕಾರ್ಯನಿರ್ವಹಿಸುತ್ತಿದ್ದರೂ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಇದು ನಿಜಕ್ಕೂ ವಿಷಾದನೀಯ. ರೋಗ ಮುಕ್ತ ಸಮಾಜ ನೀರ್ಮಾಣ ಮಾಡಲು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದರು.

ಸಂಪನ್ಮೂಲ ವ್ಯಕ್ತಿ ಪಾಲ್ಗೊಂಡಿದ್ದ ಚಿಕ್ಕ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್. ಕಡ್ಡಿ, ಡಾ.ಬಸವರಾಜ, ಡಾ.ಕೆ. ಪ್ರಜ್ಞಾ ಉಪನ್ಯಾಸ ನೀಡಿದರು. ಡಾ.ಸುರೇಶ ಕಾಖಂಡಕಿ, ಡಾ.ಕೆ. ಬಸವರಾಜ, ಡಾ.ಸೌಮ್ಯಾ, ಡಾ.ಅನಿತಾ, ವಿಕ್ರಾಂತ ನೇಸರಿ, ಡಾ.ನಿತೇಶ್ ಇದ್ದರು.

ಡಾ.ಸುರೇಶ ಕಾಖಂಡಕಿ ಸ್ವಾಗತಿಸಿದರು. ಅರುಣ ನಾಗಣ್ಣವರ ನಿರೂಪಿಸಿದರು. ಪ್ರಭಾವತಿ ಪಾಟೀಲ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.