ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಬೆಳಗಾವಿ ಡಿಸಿಸಿ ಬ್ಯಾಂಕ್‌ನಿಂದ ‘ಆಮ್ಲಜನಕ ಸೇವೆ’

ಹತ್ತರಗಿ ಟೋಲ್‌ನಾಕಾ ಸಮೀಪ ಸಿದ್ಧಗೊಳ್ಳುತ್ತಿರುವ ಘಟಕ
Last Updated 15 ಜುಲೈ 2021, 12:43 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ವತಿಯಿಂದ ಹತ್ತರಗಿ ಟೋಲ್‌ನಾಕಾ ಸಮೀಪ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಸಿದ್ಧಗೊಳ್ಳುವ ನಿರೀಕ್ಷೆ ಇದೆ.

ಒಂದೇ ಕಡೆ ಎರಡು ಘಟಕಗಳನ್ನು (ಒಟ್ಟು 90 ಕ್ಯುಬಿಕ್ ಲೀಟರ್ ಸಾಮರ್ಥ್ಯದವು) ಸಿದ್ಧಪಡಿಸಲಾಗುತ್ತಿದೆ. 60 ಕ್ಯುಬಿಕ್‌ ಲೀಟರ್ ಘಟಕದಲ್ಲಿ ನಿತ್ಯ 225ರಿಂದ 230 ಜಂಬೊ ಸಿಲಿಂಡರ್‌ಗಳು, 30 ಕ್ಯುಬಿಕ್‌ ಲೀಡರ್‌ ಘಟಕದಲ್ಲಿ ನಿತ್ಯ 150–200 ಜಂಬೊ ಸಿಲಿಂಡರ್‌ಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವ ಜೊತೆಗೆ ಜನರ ನೆರವಿಗೆ ಬರುವುದಕ್ಕೆ ಬ್ಯಾಂಕ್‌ ಮುಂದಾಗಿದೆ. ಅವಶ್ಯವಿದ್ದವರು ಜಿಲ್ಲಾಡಳಿತದಿಂದ ನಿಗದಿಪಡಿಸುವ ದರ ಪಾವತಿಸಿ ಮರುಪೂರಣ ಮಾಡಿಸಿಕೊಳ್ಳಬಹುದು. ಇದರೊಂದಿಗೆ ಆಮ್ಲಜನಕಕ್ಕೆ ಉಂಟಾಗಿದ್ದ ಕೊರತೆ ನೀಗಿಸುವತ್ತಹೆಜ್ಜೆ ಇಟ್ಟಂತಾಗಿದೆ.

ಆಸ್ತಿಯೂ ಆಗಲಿದೆ:ಇದು ಶಾಶ್ವತವಾದ ಘಟಕವಾಗಲಿದೆ ಹಾಗೂ ಜಿಲ್ಲೆಗೆ ಆಸ್ತಿಯೂ ಆಗಲಿದೆ. ₹ 2.06 ಕೋಟಿ ವೆಚ್ಚದಲ್ಲಿ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಘಟಕಗಳ ನಿರ್ವಹಣೆಯನ್ನು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯವರು ಮತ್ತು ಸಂಗಮ ಶುಗರ್ಸ್‌ ಕಾರ್ಖಾನೆಯವರಿಗೆ ವಹಿಸಲಾಗಿದೆ. ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆಗಿರುವ ಚಿಕ್ಕೋಡಿ ಮಾಜಿ ಸಂಸದ ರಮೇಶ ಕತ್ತಿ ಅವರು ತಮ್ಮ ಸ್ವಂತ ಜಾಗವನ್ನು 90 ವರ್ಷಗಳವರೆಗೆ ಗುತ್ತಿಗೆಗೆ ನೀಡಿದ್ದಾರೆ. ಘಟಕದಿಂದ 12 ಮಂದಿಗೆ ಉದ್ಯೋಗವೂ ಸಿಕ್ಕಂತಾಗಲಿದೆ.

‘ಸಾಮಾಜಿಕ ಜವಾಬ್ದಾರಿಯ ತಳಹದಿಯ ಮೇಲೆ ಬ್ಯಾಂಕ್‌ನಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಬ್ಯಾಂಕ್‌ನಿಂದ ಈಗಾಗಲೇ ಹಣ ನೀಡಲಾಗಿತ್ತು. ಹೀಗಾಗಿ, ಈಗಿನ ಅಗತ್ಯಕ್ಕೆ ತಕ್ಕಂತೆ ಹಾಗೂ ನಮ್ಮ ಜಿಲ್ಲೆಯಲ್ಲಿ ಇರುವ ಆಮ್ಲಜನಕ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಆಡಳಿತ ಮಂಡಳಿಯ ಎಲ್ಲರೂ ಇದಕ್ಕೆ ಸಮ್ಮತಿ ಸೂಚಿಸಿದರು’ ಎಂದು ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊರತೆ ನೀಗಿಸುವುದಕ್ಕೆ:‘ಜಿಲ್ಲಾಧಿಕಾರಿ, ‍ಪ್ರಾದೇಶಿಕ ಆಯುಕ್ತರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ರೂಪರೇಷೆ ಸಿದ್ಧಪಡಿಸಲಾಯಿತು. ಕೋವಿಡ್–19 ಮೂರನೇ ಅಲೆಯು ಮಕ್ಕಳನ್ನು ಬಾಧಿಸಲಿದೆ ಎಂಬ ವರದಿಗಳಿವೆ. ಹಾಗೇನಾದರೂ ಆದಲ್ಲಿ ಆಮ್ಲಜನಕದ ಅಗತ್ಯ ಹೆಚ್ಚಿರುತ್ತದೆ. ಉಂಟಾಗಬಹುದಾದ ಕೊರತೆ ನಿವಾರಿಸುವುದಕ್ಕೆ ಘಟಕವು ನಮ್ಮ ಕೊಡುಗೆ ಆಗಲಿದೆ. ಸಮಾಜದ ಸಂಕಷ್ಟದೊಂದಿಗೆ ನಾವಿದ್ದೇವೆ ಎನ್ನುವುದನ್ನು ಬ್ಯಾಂಕ್‌ ಮತ್ತೊಮ್ಮೆ ಈ ಮೂಲಕ ತೋರಿಸುತ್ತಿದೆ’ ಎನ್ನುತ್ತಾರೆ ಅವರು.

‘ಮಳೆಯಿಂದಾಗಿ ಕೆಲವು ದಿನಗಳು ಕೆಲಸ ಮಾಡಲಾಗಿಲ್ಲ. ಆದಾಗ್ಯೂ ಜುಲೈ ಅಂತ್ಯದೊಳಗೆ ಘಟಕ ಸಿದ್ಧವಾಗಿ, ಉತ್ಪಾದನೆ ಆರಂಭಿಸುವ ಉದ್ದೇಶವಿದೆ. ಜಿಲ್ಲಾಧಿಕಾರಿ, ಡಿಎಚ್‌ಒ ಮೊದಲಾದವರು ಇರುವ ಸಮಿತಿಯು ತಿಳಿಸಿದವರಿಗೆ ಆಮ್ಲಜನಕವನ್ನು ಮರುಪೂರಣ ಮಾಡಿಕೊಡಲಾಗುವುದು (ಸರ್ಕಾರ ನಿಗದಿಪಡಿಸಿದ ದರದಲ್ಲಿ). ಉತ್ಪಾದನಾ ವೆಚ್ಚವನ್ನು ಮಾತ್ರವೇ ಪಡೆಯಲು ನಿರ್ಧರಿಸಲಾಗಿದೆ. ಲಾಭವೂ–ನಷ್ಟವೂ ಇಲ್ಲದಂತೆ ದರ ನಿಗದಿಪಡಿಸಲಾಗುವುದು. ಅವಶ್ಯವಿದ್ದವರು ವಾಹನ ತಂದು ಸಿಲಿಂಡರ್‌ಗಳನ್ನು ಒಯ್ಯಬಹುದು’ ಎಂದು ಮಾಹಿತಿ ನೀಡಿದರು.

ಸಣ್ಣ ಕೈಗಾರಿಕೆಗೆ ರಿಯಾಯಿತಿ:‘ಕೋವಿಡ್‌ನಿಂದಾಗಿ ಸಣ್ಣ ಹಾಗೂ ಮಧ್ಯಮ ಪ್ರಮಾಣದವು ಸೇರಿದಂತೆ ಎಲ್ಲ ಕೈಗಾರಿಕೆಗಳು ಸಂಕಷ್ಟದಲ್ಲಿವೆ. ಹೀಗಾಗಿ, ಅವರಿಗೆ ರಿಯಾಯಿತಿ ದರದಲ್ಲಿ ಕೊಡಲಾಗುವುದು. ಜಿಲ್ಲೆಯ ಮಧ್ಯ ಭಾಗದಲ್ಲಿರುವುದರಿಂದ ಚಿಕ್ಕೋಡಿ ಭಾಗದವರೂ ಬಂದು ಒಯ್ಯಬಹುದಾಗಿದೆ. ರಸ್ತೆ ಸಂಪರ್ಕ ಉತ್ತಮವಾಗಿದೆ. ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಸೂಚಿಸಿದವರಿಗೆ ಮಾತ್ರವೇ ಅಂದರೆ ವೈದ್ಯಕೀಯ ಉದ್ದೇಶಕ್ಕೆ ಮಾತ್ರವೇ ಆಸ್ಪತ್ರೆಗಳಿಗೆ ಆಮ್ಲಜನಕ ಮರುಪೂರಣ ಮಾಡಿಕೊಡಲಾಗುವುದು. ಸಾಮಾನ್ಯ ದಿನಗಳಲ್ಲಿ ಕೈಗಾರಿಕೆಗಳಿಗೆ ಇಂತಿಷ್ಟು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ತಂದೆ–ತಾಯಿ ಹೆಸರಲ್ಲೂ ಘಟಕ: ಬಿಡಿಸಿಸಿ ಬ್ಯಾಂಕ್‌ ಆಮ್ಲಜನಕ ಉತ್ಪಾದನಾ ಘಟಕದ ಸಮೀಪದಲ್ಲೇ ಕತ್ತಿ ಸಹೋದರರಾದ ಸಚಿವ ಉಮೇಶ ಕತ್ತಿ–ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಅವರು ತಾಯಿ ರಾಜೇಶ್ವರಿ ಹಾಗೂ ತಂದೆ ವಿಶ್ವನಾಥ ಕತ್ತಿ ಹೆಸರಿನಲ್ಲಿ ಪ್ರತ್ಯೇಕವಾಗಿ ಮತ್ತೊಂದು ಘಟಕ ಸ್ಥಾಪಿಸುತ್ತಿದ್ದಾರೆ.

90 ಕ್ಯುಬಿಕ್‌ ಲೀಟರ್‌ ಸಾಮರ್ಥ್ಯದ ಈ ಘಟಕದಲ್ಲಿ ನಿತ್ಯ 350 ಜಂಬೊ ಸಿಲಂಡರ್‌ ಮರುಪೂರಣ ಮಾಡಬಹುದಾಗಿದೆ. ಇದರ ನಿರ್ವಹಣೆಯನ್ನು ವಿಶ್ವನಾಥ ಶುಗರ್ಸ್‌ ಕಾರ್ಖಾನೆಗೆ ವಹಿಸಲಾಗಿದೆ. ರಾಜೇಶ್ವರಿ–ವಿಶ್ವನಾಥ ಕತ್ತಿ ಪ್ರತಿಷ್ಠಾನದ ಸೇವಾ ಕಾರ್ಯ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT