ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ‘ಕೈ’ ಹಿಡಿಯದ ಪಶುಭಾಗ್ಯ!

ಜಿಲ್ಲೆಗೆ ಕೇವಲ 490 ಗುರಿಯನ್ನಷ್ಟೇ ನೀಡಲಾಗಿದೆ
Last Updated 7 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೆರೆ ಪರಿಹಾರ ಕಾರ್ಯ ಕೈಗೊಳ್ಳುವುದಕ್ಕಾಗಿ ಸರ್ಕಾರವು ‘ಪಶುಭಾಗ್ಯ’ ಯೋಜನೆಯನ್ನು ‘ಸೊರಗು’ವಂತೆ ಮಾಡಿದೆ. ಜಿಲ್ಲೆಗೆ ಕಡಿಮೆ ಪ್ರಮಾಣದ (490) ಗುರಿ ಕೊಟ್ಟಿದೆ.

ಕಾಂಗ್ರೆಸ್‌ ಸರ್ಕಾರದಲ್ಲಿ ಜಾರಿಗೊಳಿಸಲಾಗಿದ್ದ ‘ಪಶು ಭಾಗ್ಯ’ ಯೋಜನೆಯ ಗುರಿಯನ್ನು ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗಣನೀಯವಾಗಿ ಇಳಿಕೆ ಮಾಡಲಾಗಿತ್ತು. ಆಗ ರೈತರ ಸಾಲ ಮನ್ನಾಕ್ಕೆ ಹಣ ಸಂಗ್ರಹಿಸಬೇಕು ಎನ್ನುವ ಕಾರಣ ಕೊಡಲಾಗಿತ್ತು. ಈ ಸಾಲಿನಲ್ಲಿ ನೆರೆ ಪರಿಹಾರಕ್ಕೆ ಹಣ ಹೊಂದಿಸುವುದಕ್ಕಾಗಿ ಗುರಿಯಲ್ಲಿ ಇಳಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಯೋಜನೆಯನ್ನು, ನೆರೆಯಿಂದ ನೊಂದಿರುವ ಗ್ರಾಮೀಣ ಪ್ರದೇಶಗಳ ಸಂತ್ರಸ್ತರರಿಗೆ ನೆರವಾಗುವ ನಿಟ್ಟಿನಲ್ಲಿ ಬಳಸಿಕೊಳ್ಳಲು ಬಹಳಷ್ಟು ಅವಕಾಶವಿತ್ತು. ಆದರೆ, ಕಡಿಮೆ ಸಂಖ್ಯೆಯ ಫಲಾನುಭವಿಗಳಷ್ಟೇ ಸಹಾಯಧನ ‘ಸೌಲಭ್ಯ’ ಸಿಗಲಿದೆ.

ಅಸಮಾಧಾನಕ್ಕೆ ಕಾರಣ:

ಇಲ್ಲಿ 2015–16ನೇ ಸಾಲಿನಲ್ಲಿ 892 ಫಲಾನುಭವಿಗಳ ಗುರಿ ಇತ್ತು. 23ಸಾವಿರ ಅರ್ಜಿಗಳು ಬಂದಿದ್ದವು! 2016–17ರಲ್ಲಿ 615 ಗುರಿ ಇತ್ತು. 19ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದವು. 2017–18ನೇ ಸಾಲಿನಲ್ಲಿ 595 ಗುರಿ ನೀಡಲಾಗಿತ್ತು. 2018–19ನೇ ಸಾಲಿಗೆ 212 ಗುರಿಯನ್ನಷ್ಟೇ ಕೊಡಲಾಗಿತ್ತು. ಕಳೆದ ಸಾಲಿಗೆ ಹೋಲಿಸಿದರೆ 2019–20ನೇ ಸಾಲಿನಲ್ಲಿ ಗುರಿಯನ್ನು ಕೊಂಚ ಹೆಚ್ಚಿಸಲಾಗಿದೆ. ಬಹಳ ಬೇಡಿಕೆಯ ನಡುವೆಯೂ ಗುರಿಯನ್ನು ಹೆಚ್ಚಿಸದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಶಾಸಕರ ತಲೆನೋವಿಗೂ ಕಾರಣವಾಗಿದೆ.

ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಫಲಾನುಭವಿಗಳನ್ನು ಶಾಸಕರು ಆಯ್ಕೆ ಮಾಡಬೇಕು. ಗುರಿಯೇ ಕಡಿಮೆ ಇರುವುದರಿಂದಾಗಿ, ಮತಕ್ಷೇತ್ರವಾರು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರವೇ ‘ಫಲ’ ದೊರೆಯಲಿದೆ. ಭೌಗೋಳಿಕವಾಗಿ ದೊಡ್ಡದಾದ ಜಿಲ್ಲೆಗೆ ನಿಗದಿಪಡಿಸಿರುವ ಗುರಿಯು ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗಿದೆ ಎಂಬ ಅಭಿಪ್ರಾಯ ಇಲಾಖೆಯ ಅಧಿಕಾರಿಗಳಿಂದಲೇ ವ್ಯಕ್ತವಾಗುತ್ತಿದೆ.

ತಲೆನೋವಿಗೆ ಕಾರಣವಾಗಿದೆ:

‘ಗುರಿ ಕಡಿಮೆ ಇರುವುದು ನಮಗೆ ತಲೆನೋವಾಗಿ ಪರಿಣಮಿಸಿದೆ. ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಕೆಲವರಿಗಷ್ಟೇ ಅವಕಾಶ ನೀಡಲು ಸಾಧ್ಯವಾಗುತ್ತಿದೆ. ಯಾರಿಗೆ ಕೊಡುವುದು, ಯಾರಿಗೆ ಬಿಡುವುದು ಎನ್ನುವುದೇ ತಿಳಿಯದಾಗಿದೆ’ ಎನ್ನುವುದು ಶಾಸಕರ ಹೇಳಿಕೆಯಾಗಿದೆ.

‘ನೆರೆ ಪರಿಹಾರ ಕಾರ್ಯಕ್ಕಾಗಿ ಹಣ ಹೊಂದಿಸುವುದಕ್ಕಾಗಿ ಈ ಯೋಜನೆಗೆ ಅನುದಾನ ಕಡಿತಗೊಳಿಸಲಾಗಿದೆ. ಪರಿಣಾಮ, ಫಲಾನುಭವಿಗಳ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಗುರಿ ಹೆಚ್ಚಿಸಿದರೆ ಅನುಕೂಲವಾಗುತ್ತದೆ ಎಂದು ಶಾಸಕರಿಗೆ ತಿಳಿಸಿದ್ದೇವೆ’ ಎಂದು ಪಶುವೈದ್ಯ ಇಲಾಖೆಯ ಹೆಸರು ಬಹಿರಂಗಪಡಿಸಲು ಇಚ್ಛಿಸಿದ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಕ್ರಿಯೆ ನಡೆಯುತ್ತಿದೆ:

‘ಹೈನುಗಾರಿಕೆ ಉತ್ತೇಜಿಸುವುದು ಹಾಗೂ ಈ ಮೂಲಕ ಗ್ರಾಮೀಣ ಜನರನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರು ಹಾಗೂ ಪರಿಶಿಷ್ಟ ಜಾತಿಯವರು ಹೈನುಗಾರಿಕೆ ಮೂಲಕ ಉಪ ಜೀವನ ಕಂಡುಕೊಳ್ಳಲು ನೆರವಾಗುವ ಉದ್ದೇಶದಿಂದ ಸರ್ಕಾರವು ಸಹಾಯಧನ ನೀಡುತ್ತದೆ. ಆಯ್ಕೆಯಾದವರು ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಖರೀದಿಸುವುದಕ್ಕೆ ಅವಕಾಶವಿದೆ. ಈ ಕುರಿತು ಪ್ರಕ್ರಿಯೆ ನಡೆಯುತ್ತಿವೆ’ ಎಂದು ಇಲಾಖೆಯ ಉಪನಿರ್ದೇಶಕ ಡಾ.ಎ.ಕೆ. ಚಂದ್ರಶೇಖರ ತಿಳಿಸಿದರು.

ಯೋಜನೆಯಡಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ, ಘಟಕ ವೆಚ್ಚದಲ್ಲಿ ಶೇ 50ರಷ್ಟು ಹಾಗೂ ಸಾಮಾನ್ಯ ವರ್ಗದವರಿಗೆ ಶೇ 25ರಷ್ಟು ಸಹಾಯಧನ ದೊರೆಯಲಿದೆ. ಸಹಾಯಧನವನ್ನು ಫಲಾನುಭವಿಗಳಿಗೆ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಆ ಭಾಗದ ಪಶು ವೈದ್ಯಾಧಿಕಾರಿಗಳು ಸ್ವತ್ತು ಖರೀದಿಗೆ ಸಹಕರಿಸುತ್ತಾರೆ. ಫಲಾನುಭವಿಗಳ ಆಯ್ಕೆ ಅಧಿಕಾರವನ್ನು ಶಾಸಕರಿಗೆ ಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT