ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಪಿಡಿಒಗಳಿಗೆ ಇನ್ನೂ ಸಿಗದ ಸೇವಾ ಬಡ್ತಿ

Published 17 ಮಾರ್ಚ್ 2024, 22:30 IST
Last Updated 17 ಮಾರ್ಚ್ 2024, 22:30 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದಲ್ಲಿ ನೇರ ನೇಮಕಾತಿಯಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿ (ಪಿಡಿಒ) 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿ ರುವ ಹಲವರಿಗೆ ಇನ್ನೂ ಸೇವಾಬಡ್ತಿ ಸಿಕ್ಕಿಲ್ಲ. ಅವರ ಸೇವೆ ಇನ್ನೂ ಗ್ರಾಮ ಪಂಚಾಯಿತಿಗೇ ಸೀಮಿತವಾಗಿದೆ.

‘ನಾವು 2009–10ರಲ್ಲೇ ಪಿಡಿಒ ಆಗಿದ್ದೇವೆ. ನಮ್ಮ ನಂತರದಲ್ಲಿ ಗ್ರಾಮ ಪಂಚಾಯಿತಿ ಗ್ರೇಡ್‌–1 ಕಾರ್ಯದರ್ಶಿ ಹುದ್ದೆಯಿಂದ ಪಿಡಿಒ ಹುದ್ದೆಗೆ ಪದೋನ್ನತಿ ಹೊಂದಿದವರಲ್ಲಿ ಕೆಲವರು, ಮತ್ತೊಂದು ಬಡ್ತಿ ಪಡೆದು ಸಹಾಯಕ ನಿರ್ದೇಶಕ ರಾಗಿದ್ದಾರೆ. ನಾವು ಇನ್ನೂ ಪಿಡಿಒ ಹುದ್ದೆಯಲ್ಲೇ ಮುಂದುವರಿದಿದ್ದೇವೆ. ಕ್ರಮಬದ್ಧವಾಗಿ ಸೇವಾಜ್ಯೇಷ್ಠತೆ ಪಟ್ಟಿ ಸಿದ್ಧಪಡಿಸದ ಪರಿಣಾಮ, ನಮಗೆ ಅನ್ಯಾಯವಾಗಿದೆ’ ಎಂದು ಪಿಡಿಒಗಳು ದೂರುತ್ತಾರೆ.

‘2008–09ರಲ್ಲಿ ಪಿಡಿಒ ಹುದ್ದೆ ಸೃಜಿಸಲಾಯಿತು. ಶೇ 66ರಷ್ಟು ಹುದ್ದೆ ನೇರ ನೇಮಕಾತಿಯಡಿ ಮತ್ತು ಶೇ 33ರಷ್ಟು ಹುದ್ದೆ ಬಡ್ತಿ ಮೂಲಕ ತುಂಬಲು ಸರ್ಕಾರ ತೀರ್ಮಾನಿಸಿತು. ಪ್ರತಿ ವರ್ಷ ಶೇ 33ರಷ್ಟು ಹುದ್ದೆಗಳಂತೆ ಮೂರು ವರ್ಷಗಳಲ್ಲಿ 5,628 ಹುದ್ದೆ ಭರ್ತಿಗೊಳಿಸಲು ನಿರ್ಣಯಿಸಿತ್ತು. ನೇರ ನೇಮಕಾತಿ ಹುದ್ದೆಗಳನ್ನು ಮೂರು ವರ್ಷಗಳಲ್ಲಿ ನಿಯಮದಂತೆ  ಭರ್ತಿ ಮಾಡಿದ್ದಾರೆ. ಬಡ್ತಿ ಮೂಲಕ ತುಂಬಬೇಕಿದ್ದ ಹುದ್ದೆಗಳನ್ನು ಮೂರು ವರ್ಷ ಬದಲು ಎರಡೇ ವರ್ಷದಲ್ಲಿ ತುಂಬಿದ್ದಾರೆ. ಇದರಿಂದ ಬಡ್ತಿ ಮೂಲಕ ಪಿಡಿಒ ಆದವರು, ಸೇವಾಜ್ಯೇಷ್ಠತೆ ಪಟ್ಟಿಯಲ್ಲಿ ಮುಂದಿದ್ದಾರೆ’ ಎಂಬುದು ತಕರಾರು.

‘2014, 2017ರಲ್ಲಿ ಸೇವಾಜ್ಯೇಷ್ಠತೆ ಪಟ್ಟಿ ಕ್ರಮಬದ್ಧವಾಗಿರದ ಕಾರಣ, ಕೆಎಟಿ ರದ್ದುಪಡಿಸಿದೆ. ನಂತರದಲ್ಲಿ ಸೇವಾಜ್ಯೇಷ್ಠತೆ ಪಟ್ಟಿಯೇ ಸಿದ್ಧವಾಗದ್ದರಿಂದ ಬಡ್ತಿ ಪ್ರಕ್ರಿಯೆಯೇ ನನೆಗುದಿಗೆ ಬಿದ್ದಿದೆ’ ಎಂದು
ಆರೋಪಿಸಿದರು.

‘ಗ್ರಾ.ಪಂ ಕಾರ್ಯದರ್ಶಿ ಆಗಿದ್ದವರಿಗೆ ಪಿಡಿಒ ಹುದ್ದೆಗೆ ಪದೋನ್ನತಿ ನೀಡಿ, 2010ರ ಮಾರ್ಚ್‌ 11ರಂದು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಹಲವು ಜಿಲ್ಲಾ ಪಂಚಾಯಿತಿಗಳು ಈ ಆದೇಶ ಹೊರಡಿಸಿದ ದಿನಕ್ಕಿಂತ ಪೂರ್ವದಲ್ಲಿನ ದಿನಾಂಕ ನಮೂದಿಸಿ, ಹಲವರಿಗೆ ಅಕ್ರಮವಾಗಿ ಬಡ್ತಿ ಆದೇಶ ನೀಡಿವೆ. 2010ರ ಮಾರ್ಚ್‌ನಲ್ಲಿ ಪಿಡಿಒ ಆಗಿ ಬಡ್ತಿ ಪಡೆದವರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿಯೂ ಅದೇ ತಿಂಗಳ ವೇತನ ಪಡೆದಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ಆಯುಕ್ತರಿಗೆ ಪತ್ರ:

‘ಒಂದು ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ನಿಯಮಾನುಸಾರ ಪಿಡಿಒ ಹುದ್ದೆಗೆ ಬಡ್ತಿ ನೀಡಿದ್ದರೆ, ಎಲ್ಲರೂ 2010ರ ಮಾರ್ಚ್‌ನಲ್ಲೇ ಎಚ್ಆರ್‌ಎಂಎಸ್‌ ತಂತ್ರಾಂಶದ ಮೂಲಕ ವೇತನ ಪಡೆಯಬೇಕಿತ್ತು. ಕೆಲವರಷ್ಟೇ ಆ ತಿಂಗಳ ವೇತನ ಪಡೆದಿರುವುದರಿಂದ ಅಕ್ರಮಕ್ಕೆ ಎಡೆಮಾಡಿ ಕೊಟ್ಟಂತಾಗುತ್ತದೆ. ಈ ಬಗ್ಗೆ ತನಿಖೆಯಾಗಬೇಕು. 12 ಜಿಲ್ಲೆಗಳಲ್ಲಿ 91ಕ್ಕೂ ಅಧಿಕ ‍ಪಿಡಿಒ ಹುದ್ದೆಗಳಿಗೆ ಅಕ್ರಮವಾಗಿ ಬಡ್ತಿ ನೀಡಲಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು’ ಎಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆಯುಕ್ತರಿಗೆ 2024ರ ಫೆ.8ರಂದು ಪತ್ರ ಬರೆದಿದ್ದಾರೆ.

ವಿವಿಧ ಆರೋಪ, ದೂರುಗಳ ಹಿನ್ನೆಲೆಯಲ್ಲಿ, ಪಿಡಿಒಗಳಿಗೆ ಬಡ್ತಿ ನೀಡಲು ಹೊಸ ಸೇವಾಜ್ಯೇಷ್ಠತೆ ಪಟ್ಟಿ ಸಿದ್ಧಪಡಿಸುವಂತೆ ನ್ಯಾಯಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ನೀಡಿದ್ದ ಗಡುವು ಮುಗಿದಿತ್ತು. ಈಗ ಮತ್ತೆ ಗಡುವು ವಿಸ್ತರಿಸಿದ ನ್ಯಾಯಾಲಯ, 2024ರ ಜುಲೈ 16ರೊಳಗೆ ಪಟ್ಟಿ ಪ್ರಕಟಿಸಲು ನಿರ್ದೇಶನ
ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT