ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮತ್ತೆ ಕಾಳಜಿ ಕೇಂದ್ರಗಳ ಮೊರೆ

ನಗರದ 2 ಕಡೆಗಳಲ್ಲಿ 415 ಜನರಿಗೆ ತಾತ್ಕಾಲಿಕ ಆಶ್ರಯ
Last Updated 24 ಜುಲೈ 2021, 14:38 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ಅಬ್ಬರಿಸಿದ್ದ ವರುಣ ಶನಿವಾರ ತುಸು ಬಿಡುವು ಕೊಟ್ಟಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಆಗಾಗ ತುಂತುರು ಮಳೆಯಷ್ಟೇ ಆಯಿತು. ಬಹುತೇಕ ಸಮಯ ಬಿಸಿಲಿನ ವಾತಾವರಣ ಇತ್ತು. ಮಾರುಕಟ್ಟೆ ಪ್ರದೇಶದಲ್ಲಿ ಚಟುವಟಿಕೆಗಳು ಎಂದಿನಂತಿದ್ದವು.

ಧಾರಾಕಾರ ಮಳೆಯಿಂದಾಗಿ ಇಲ್ಲಿನ ಸಾಯಿನಗರದ ನೇಕಾರ ಕಾಲೊನಿ, ಚೌಗುಲೆವಾಡಿ, ಸಮರ್ಥ ನಗರ, ಶಿವಾಜಿ ನಗರ, ಗಾಂಧಿನಗರ ಮತ್ತಿತರ ಪ್ರದೇಶಗಳ ಮನೆಗಳಿಗೆ ಶುಕ್ರವಾರ ನೀರು ನುಗ್ಗಿತ್ತು. ನಾನಾವಾಡಿ, ಶಾಸ್ತ್ರಿನಗರ, ಕರಿಯಪ್ಪ ಕಾಲೊನಿ, ಮರಾಠಾ, ಶಾಹೂನಗರದ ಬೆನಕೆ ಬಡಾವಣೆಗಳ ಮನೆಗಳು ಜಲಾವೃತವಾಗಿದ್ದವು. ಮುಖ್ಯ ರಸ್ತೆಗಳಲ್ಲೂ ನೀರು ಸಂಗ್ರಹವಾಗಿತ್ತು. ಮಳೆ ಇಳಿಮುಖ ಆಗುತ್ತಿದ್ದಂತೆಯೇ, ಆ ಬಡಾವಣೆಗಳಲ್ಲಿ ಸಂಗ್ರಹವಾಗಿದ್ದ ನೀರಿನ ಪ್ರಮಾಣವೂ ಇಳಿದಿದೆ. ಇದರಿಂದಾಗಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಊಟೋಪಚಾರ:ಸಾಯಿನಗರದ ನೇಕಾರ ಕಾಲೊನಿ ಸೇರಿದಂತೆ ವಿವಿಧ ಬಡಾವಣೆಗಳ ಜನರು ಈ ವರ್ಷವೂ ಕಾಳಜಿ ಕೇಂದ್ರ ಅವಲಂಬಿಸಬೇಕಾದ ಸ್ಥಿತಿ ಎದುರಾಗಿದೆ.

‘ಮನೆಗಳು ಜಲಾವೃತವಾಗಿರುವ ಪ್ರದೇಶಗಳಲ್ಲಿನ ಜನರಿಗಾಗಿ ನಗರದ ಹಳೇ ಪಿ.ಬಿ. ರಸ್ತೆಯ ಸಾಯಿ ಭವನ ಹಾಗೂ ಚೌಗುಲೆವಾಡಿಯ ಕೈವಲ್ಯ ಯೋಗ ಮಂದಿರದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ 415 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರ ಆರೋಗ್ಯ ದೃಷ್ಟಿಯಿಂದ ವೈದ್ಯಕೀಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ತಿಳಿಸಿದರು.

ಜಾಗದ ವ್ಯವಸ್ಥೆ ಕಡಿಮೆ ಇರುವುದರಿಂದ ಸಂತ್ರಸ್ತರು ಅಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸುವುದಕ್ಕೆ ಸಾಧ್ಯವಾಗದಿರುವುದು ಕಂಡುಬಂತು.

ಕಾಳಜಿ ಕೇಂದ್ರಕ್ಕೆ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.

ಮುಖ್ಯಮಂತ್ರಿಗೆ ಮನವಿ:ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅತಿವೃಷ್ಟಿಯಿಂದ ದಕ್ಷಿಣ ಕ್ಷೇತ್ರದಲ್ಲಿ ಮೂರ್ನಾಲ್ಕು ಸಾವಿರ ಮಂದಿಗೆ ತೀವ್ರ ತೊಂದರೆಯಾಗಿದೆ. ಸಾವಿರಾರು ಮನೆಗಳು ಮುಳುಗಿವೆ. ರಸ್ತೆಗಳು ಕೊಚ್ಚಿ ಹೋಗಿವೆ. ಕ್ಷೇತ್ರದಲ್ಲಿ ತಗ್ಗು ಪ್ರದೇಶದಲ್ಲಿರುವುದರಿಂದ ಸುತ್ತಮುತ್ತಲಿನ ನೀರು ನುಗ್ಗುತ್ತದೆ. ಮಳೆಯೂ ಬಹಳ ಆಗಿದೆ. ಕೆಲವರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ನೂರಾರು ಮಂದಿ ಸಂಬಂಧಿಕರ ಮನೆಗಳಿಗೆ ಹೋಗಿದ್ದಾರೆ’ ಎಂದು ತಿಳಿಸಿದರು.

‘2019ರಲ್ಲಿ ಅತಿವೃಟಿಯಿಂದ ಬಿದ್ದ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳ ತಪ್ಪಿನಿಂದ ಜನರು ಬೀದಿಗೆ ಬಿದ್ದಿದ್ದಾರೆ. 500 ಜನರಿಗೆ ಪರಿಹಾರ ಬಂದಿಲ್ಲ. ಅದೆಲ್ಲವನ್ನೂ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು. ಈ ಬಾರಿ ಆಗಿರುವ ಹಾನಿಗೂ ಹಣ ಕೋರಲಾಗುವುದು’ ಎಂದರು.

‘ಬಳ್ಳಾರಿ ನಾಲಾ, ಚರಂಡಿಗಳು ಉಕ್ಕಿ ಹರಿದಿದ್ದರಿಂದ ನೇಕಾರರ ಕಾಲೊನಿಯಲ್ಲಿ ಪ್ರತಿ ಮಳೆಗಾಲದಲ್ಲೂ ಮನೆಗಳಿಗೆ ನೀರು ನುಗ್ಗುತ್ತದೆ. ಇದರಿಂದ ಬಹಳ ತೊಂದರೆ ಆಗುತ್ತಿದೆ. ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಸಂತ್ರಸ್ತೆ ಶೋಭಾ ಸತೀಶ ಪತ್ತಾರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT