ಬೆಳಗಾವಿ: ಲಾಕ್‌ಡೌನ್ ಸಡಿಲಿಕೆ ನಂತರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಸಂಭಾವ್ಯ 3ನೇ ಅಲೆಯ ಭೀತಿಯ ನಡುವೆಯೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ‘ಮಾಯ’ವಾಗಿದೆ.
ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಜ್ಞರು ನೀಡಿರುವ ಸಲಹೆಗಳನ್ನು ಆಧರಿಸಿ ಸರ್ಕಾರವು ರೂಪಿಸಿರುವ ಮಾರ್ಗಸೂಚಿಗಳನ್ನು ಬಹುತೇಕರು ಗಾಳಿಗೆ ತೂರುತ್ತಿರುವುದು ಅಥವಾ ಪಾಲಿಸದಿರುವುದು ಜುಲೈ 5ರಿಂದ ಜುಲೈ 9ರವರೆಗೆ ‘ಪ್ರಜಾವಾಣಿ’ ನಡೆಸಿದ ‘ರಿಯಾಲಿಟಿ ಚೆಕ್’ ವೇಳೆ ಕಂಡುಬಂತು. ಜನರ ಈ ನಡವಳಿಕೆಯು 3ನೇ ಅಲೆಗೆ ಆಹ್ವಾನ ನೀಡುವಂತಿದೆ.
ಕೋವಿಡ್ ಲಸಿಕಾಕರಣವೂ ಚುರುಕಾಗಿಲ್ಲ. ವಿತರಣೆಯಲ್ಲಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಬೆಳಗಾವಿಯೂ ಸ್ಥಾನ (ಶೇ 28) ಪಡೆದಿದೆ. ಜನರಿಂದ ಬೇಡಿಕೆ ಇದ್ದರೂ ಪೂರೈಕೆಯಲ್ಲಿ ವ್ಯತ್ಯಯ ಇರುವುದು ತೊಡಕಾಗಿದೆ. ‘ಲಸಿಕೆಯು ಸುರಕ್ಷಾ ಕವಚದಂತೆ ಕೆಲಸ ಮಾಡಲಿದೆ. ತಪ್ಪದೇ ಎಲ್ಲರೂ ಪಡೆದುಕೊಳ್ಳಿ’ ಎಂದು ಪ್ರಚಾರ ಮಾಡುವ ಸರ್ಕಾರ ಅದಕ್ಕೆ ತಕ್ಕಂತೆ ಸರಬರಾಜು ಮಾಡುತ್ತಿಲ್ಲ.
ಮರೆಯುತ್ತಿದ್ದಾರೆ!
ಲಾಕ್‌ಡೌನ್ ಬಹುತೇಕ ತೆರವಾದ ಬಳಿಕ, ಅತ್ತ ಜನರು ಮುಂಜಾಗ್ರತೆ ವಹಿಸುತ್ತಿಲ್ಲ; ಇತ್ತ ಸರ್ಕಾರ ಲಸಿಕೆಯನ್ನೂ ಒದಗಿಸುತ್ತಿಲ್ಲ. ಪರಿಣಾಮ ಕೋವಿಡ್ ಪ್ರಕರಣಗಳು ಕಡಿಮೆ ಆಗುತ್ತಿಲ್ಲ. ನಿತ್ಯವೂ ಏರಿಕೆ ಆಗುತ್ತಲೇ ಇರುವುದನ್ನು ಆರೋಗ್ಯ ಇಲಾಖೆ ನೀಡುವ ಅಂಕಿ ಅಂಶಗಳು ಹೇಳುತ್ತಿವೆ. ಇನ್ನೊಂದೆಡೆ ಸಾವಿರ ಸರಣಿಯೂ ಮುಂದುವರಿದಿದೆ. ಹೀಗಿದ್ದರೂ ಅಲ್ಲಲ್ಲಿ ವಿವಿಧ ಕಾರ್ಯಕ್ರಮಗಳು, ಪ್ರತಿಭಟನೆಗಳು ನಡೆಯುತ್ತಲೇ ಇವೆ. ಅಲ್ಲಿ ಅಂತರ ‘ಮಾಯ’ವಾಗಿರುತ್ತದೆ! ಮಾಸ್ಕ್ ಧರಿಸಿಲ್ಲವೆಂದು ಪೊಲೀಸರು ದಂಡ ವಿಧಿಸುವುದು ವರದಿ ಆಗುತ್ತಲೇ ಇದೆ.
‘ಜನರು ಎಚ್ಚೆತ್ತುಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಮತ್ತು ಸರಿಯಾದ ಕ್ರಮದಲ್ಲಿ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಜನಸಂದಣಿಯಲ್ಲಿ ಅನವಶ್ಯವಾಗಿ ಹೋಗಲೇಬಾರದು. ಕೈಗಳನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳಬೇಕು. ಕೊರೊನಾ ಹೋಗಿಲ್ಲ. ಹೀಗಾಗಿ, ಮೈಮರೆಯಬಾರದು. ಜೀವವನ್ನೂ ಉಳಿಸಿಕೊಂಡು ಜೀವನ ನಡೆಸುವ ಸುರಕ್ಷತಾ ಕ್ರಮಗಳ ಬಗ್ಗೆ ಆದ್ಯತೆ ಕೊಡಬೇಕು’ ಎನ್ನುವುದು ಅಧಿಕಾರಿಗಳು ಮತ್ತು ಪ್ರಜ್ಞಾವಂತರ ಸಲಹೆಯಾಗಿದೆ.
ಪೊಲೀಸರು ಬಂದರೆಂದರೆ...
ಸವದತ್ತಿ: ಇಲ್ಲಿನ ಕೆಲವರು ಕೋವಿಡ್‍ಗೆ ಲಸಿಕೆ ಸಿಕ್ಕಿದೆ ಎಂಬ ಭಾವನೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸುತ್ತಿಲ್ಲ. ಮಾಸ್ಕ್ ಉಪಯೋಗಿಸುತ್ತಿಲ್ಲ.
‘ಪೊಲೀಸರ ವಾಹನ ಬಂದಲ್ಲಿ ಮಾತ್ರ ಮಾಸ್ಕ್ ಉಪಯೋಗಿಸುವುದು, ನಂತರ ತೆಗೆಯುವುದು ಕಂಡುಬರುತ್ತಿದೆ. ಕೆಲವರು ದಂಡ ಪಾವತಿಸುತ್ತಾರೆಯೇ ಹೊರತು ಮಾಸ್ಕ್ ಉಪಯೋಗಿಸುತ್ತಿಲ್ಲ. ಈ ರೀತಿಯ ನಿರ್ಲಕ್ಷ್ಯ ಸರಿಯಲ್ಲ’ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಮತ್ತಷ್ಟು ಎಚ್ಚರಿಕೆ ಬೇಕು
ಮೂಡಲಗಿ: ಕೋವಿಡ್ 2ನೇ ಅಲೆಯಿಂದ ತತ್ತರಿಸಿದ ಜನ ಕೆಲವು ದಿನಗಳಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಹೊತ್ತು ವಾಯು ವಿಹಾರಕ್ಕೆ ಬರುವವರ ಸಂಖ್ಯೆ ವೃದ್ಧಿಯಾಗಿದೆ. ತರಕಾರಿ, ದಿನಸಿಗಾಗಿ ಜನಸಂದಣಿ ಸೇರುತ್ತಿದೆ.
ಅಲ್ಲಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳು ಕೂಡ ನಡೆಯುತ್ತಿವೆ. ಶೇ. 50ಕ್ಕೂ ಅಧಿಕ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯುಕೊಳ್ಳುತ್ತಿದ್ದಾರೆ. ಉಳಿದವರು ಕೋವಿಡ್ ಹೋಗಿಯೇ ಬಿಟ್ಟಿತೇನೋ ಎಂಬ ಭಾವನೆಯಲ್ಲಿ ಭಯವಿಲ್ಲದೆ ತಿರುಗುಡುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದ್ದು ಕೇಂದ್ರದ ಬಳಿ ಸರದಿ ಸಾಲು ಕಂಡುಬರುತ್ತಿದೆ. ಈ ವೇಳೆ ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸುವುದು ಕಂಡುಬರುತ್ತಿಲ್ಲ.
ಲಕ್ಷ್ಯ ವಹಿಸುತ್ತಿಲ್ಲ
ರಾಯಬಾಗ: ಪಟ್ಟಣದ ವಾಣಿಜ್ಯ ಪ್ರದೇಶಗಳಲ್ಲಿ ಜನಸಂದಣಿ ಕಂಡುಬರುತ್ತಿದೆ. ಬಹುತೇಕರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಈಗಾಗಲೇ ಹಲವು ಕುಟುಂಬಗಳು ತಮ್ಮವರನ್ನು ಕಳೆದುಕೊಂಡು ನೋವಿನಲ್ಲಿವೆ. ಆದರೆ, ಜನರು ಸಾವು-ನೋವು ಸಂಭವಿಸಿಯೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸರ್ಕಾರ ಮತ್ತು ತಾಲ್ಲೂಕು ಆಡಳಿತದ ಸೂಚನೆಗಳನ್ನು ಪಾಲಿಸುತ್ತಿಲ್ಲ.
ಕಚೇರಿಗಳಲ್ಲಿ ಮಾತ್ರ ಪಾಲನೆ
ಖಾನಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ನಾಗರಿಕರು ಕೋವಿಡ್ ಸುರಕ್ಷತಾ ನಿಯಮಗಳಾದ ಮಾಸ್ಕ್ ಧಾರಣೆ, ಅಂತರ ಪಾಲನೆ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಹಲವು ದಿನಗಳ ಕಾಲ ಜನರಿಲ್ಲದೇ ಭಣಗುಡುತ್ತಿದ್ದ ಮಾರುಕಟ್ಟೆ ಪ್ರದೇಶದಲ್ಲಿ ದಿನವಿಡೀ ಜನದಟ್ಟಣೆ ನಿರ್ಮಾಣವಾಗುತ್ತಿದೆ. ವ್ಯಾಪಾರಿಗಳು ಮತ್ತು ಗ್ರಾಹಕರು ಮಾಸ್ಕ್ ಧರಿಸದೆ ವ್ಯವಹರಿಸುತ್ತಿದ್ದಾರೆ. ಬ್ಯಾಂಕ್‌ಗಳು, ಅಂಚೆ ಕಚೇರಿ, ಜೀವ ವಿಮಾ ಕಚೇರಿ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಮಾತ್ರ ನಿಯಮ ಪಾಲನೆ ಕಂಡುಬರುತ್ತಿದೆ.
ಕೋವಿಡ್ ಭಯವಿಲ್ಲ!
ಚನ್ನಮ್ಮನ ಕಿತ್ತೂರು: ಲಾಕ್‌ಡೌನ್ ತೆರವುಗೊಳಿಸಿದ ನಂತರ ಕೊರೊನಾ ವಿರುದ್ಧ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಜನರು ಬೀದಿಗೆ ಇಳಿಯುತ್ತಿದ್ದಾರೆ. ಮಾಸ್ಕ್ ಧರಿಸುತ್ತಾರೆ. ಆದರೆ, ಅಂತರ ಕಾಯ್ದುಕೊಳ್ಳುವುದು ಕಾಣಿಸುತ್ತಿಲ್ಲ.
‘ಮುನ್ನೆಚ್ಚರಿಕೆ ವಹಿಸದೆ ಮತ್ತು ಕೊರೊನಾ ಬಗ್ಗೆ ಭಯವಿಲ್ಲ ಎನ್ನುವಂತೆ ಜನರು ವರ್ತಿಸುತ್ತಿದ್ದಾರೆ. ಕೊರೊನಾ ಸೋಂಕು ಹೊರಟೇ ಹೋಗಿದೆ ಎಂದು ಭಾವಿಸಿದಂತಿದೆ. ಬೆಳಿಗ್ಗೆ ಮತ್ತು ಸಂಜೆ ಹೋಟೆಲ್‌ಗಳಲ್ಲಿ ಗ್ರಾಹಕರು ಕಿಕ್ಕಿರಿದು ತುಂಬಿರುತ್ತಾರೆ. ಇದು ಸಲ್ಲದು’ ಎನ್ನುವುದು ಪ್ರಜ್ಞಾವಂತರ ಸಲಹೆಯಾಗಿದೆ.
ಜಾಗೃತಿ ಮೂಡಿಲ್ಲ
ಗೋಕಾಕ: ಕೋವಿಡ್‌ನಿಂದ ಅಪಾರ ಸಾವು–ನೋವು ಸಂಭವಿಸಿದ್ದರೂ ಬಹುತೇಕರಲ್ಲಿ ಜಾಗೃತಿ ಮೂಡಿಲ್ಲ. ‘ಕೊರೊನಾ ಏನ್ ಮಾಡತೈತಿ’ ಎಂಬ ಧೋರಣೆಯಲ್ಲಿದ್ದಾರೆ.
‘ಮಾಸ್ಕ್ ಧರಿಸುವಂತೆ ಸರ್ಕಾರವು ವಿವಿಧ ಮಾಧ್ಯಮದ ಮೂಲಕ ನಿರಂತರವಾಗಿ ಪ್ರಚಾರ ಮಾಡುತ್ತಿದೆ. ಆದರೂ ಅದು ನಮಗೆ ಸಂಬಂಧಿಸಿದ್ದಲ್ಲ ಎಂಬ ಮನೋಭಾವ ಜನರಲ್ಲಿ ಕಂಡುಬರುತ್ತಿದೆ. ಇದು ನಿಜಕ್ಕೂ ಆಘಾತಕಾರಿಯಾದುದು’ ಎಂದು ಶಿಲ್ಪಭಾಂವಿಯ ರುದ್ರಪ್ಪ ಗುರುಬಸಪ್ಪ ಅಕ್ಕಿ ಹೇಳಿದರು.
‘ಕೊರೊನಾ ಎಲ್ಲಿದೆ ತೋರಿಸಿ ಎಂದು ವ್ಯಂಗ್ಯವಾಗಿ ಪ್ರಶ್ನಿಸುವವರೂ ಇದ್ದಾರೆ’ ಎಂದು ನಿವೃತ್ತ ಕಾರ್ಮಿಕ ಸುಭಾಸ ಮೇಲ್ಮಟ್ಟಿ ತಿಳಿಸಿದರು. ಜನರು ಎಚ್ಚೆತ್ತುಕೊಂಡು ಸಾಂಘಿಕ ಹೋರಾಟ ನಡೆಸಿದರೆ ಮತ್ತು ಮಾರ್ಗಸೂಚಿ ಅನುಸರಿಸಿದರೆ ಕೊರೊನಾದಿಂದ ಮುಕ್ತರಾಗಬಹುದು ಎನ್ನುವುದು ಬಹುತೇಕರ ಸಲಹೆಯಾಗಿದೆ.
ಎಚ್ಚರ ವಹಿಸಬೇಕು
ಕೋವಿಡ್ ಬಗ್ಗೆ ಎಚ್ಚರಿಕೆ ವಹಿಸಲೇಬೇಕು. 2ನೇ ಅಲೆಯಲ್ಲಿ ಬಹಳಷ್ಟು ಮಂದಿ ಸಾವಿಗೀಡಾದರು. ಸಂಭವನೀಯ ಮೂರನೇ ಅಲೆ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.
– ಪ್ರೊ.ಎಸ್.ಎಂ. ಕಮದಾಳ, ನಿವೃತ್ತ ಉಪನ್ಯಾಸಕ, ಮೂಡಲಗಿ
ತಿಳಿವಳಿಕೆಯೂ ಇಲ್ಲದಂತೆ
ನಮ್ಮಿಂದ ಇತರರಿಗೆ ತೊಂದರೆ ಆಗಬಾರದೆಂಬ ಸಾಮಾನ್ಯ ತಿಳಿವಳಿಕೆಯೂ ಇಲ್ಲದೆ ಜನರು ನಡೆದುಕೊಳ್ಳುತ್ತಿದ್ದಾರೆ. ಕೋವಿಡ್ ನಿಯಮಗಳನ್ನು ಮರೆತಿದ್ದಾರೆ. ಹೀಗೆಯೇ ಮುಂದುವರಿದರೆ ಕೊರೊನಾ ಹರಡುವಿಕೆ ತಪ್ಪಿಸಲಾಗುವುದಿಲ್ಲ.
–ಸದಾಶಿವ ರುಪ್ಪಾಳೆ, ದಿಗ್ಗೇವಾಡಿ ನಿವಾಸಿ, ರಾಯಬಾಗ
ಮುನ್ನೆಚ್ಚರಿಕೆ ವಹಿಸುತ್ತಿಲ್ಲ
ಲಾಕ್‌ಡೌನ್‌ನಲ್ಲಿದ್ದಷ್ಟು ಕಾಳಜಿ ಜನರಲ್ಲಿ ಈಗ ಕಾಣಿಸುತ್ತಿಲ್ಲ. ಗುಂಪಾಗಿ ಸೇರುತ್ತಿದ್ದಾರೆ. ಸಂತೆಗಳಲ್ಲಿ ಮುನ್ನೆಚ್ಚರಿಕೆ ವಹಿಸುತ್ತಿಲ್ಲ. ನಿರ್ಲಕ್ಷ್ಯ ವಹಿಸಿದರೆ ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಲಿ ಎನ್ನುವಂತೆ 3ನೇ ಅಲೆ ವ್ಯಾಪಿಸಿದರೆ ಅಚ್ಚರಿ ಇಲ್ಲ.
– ಕಿರಣ ಯಲಿಗಾರ, ಮುನವಳ್ಳಿ
ವಿಷಾದದ ಸಂಗತಿ
ಜನಸಾಮಾನ್ಯರನ್ನು ಬಿಡಿ, ಪ್ರಬುದ್ಧರು ಕೂಡ ಊರು ಕೊರೊನಾ ಮುಕ್ತವಾಯಿತು ಎಂಬ ಅರ್ಥದಲ್ಲಿ ಮಾತನಾಡುತ್ತಾರೆ. ಮಾರ್ಗಸೂಚಿ ಅನುಸರಿಸುತ್ತಿಲ್ಲ. ಇದು ವಿಷಾದನೀಯ ಸಂಗತಿ.
– ಎಸ್.ಎಚ್. ಮಿರ್ಜಾನಾಯಿಕ, ನಿವೃತ್ತ ಮುಖ್ಯ ಶಿಕ್ಷಕ, ಗೋಕಾಕ
(ಪ್ರಜಾವಾಣಿ ತಂಡ: ರಾಮೇಶ್ವರ ಕಲ್ಯಾಣಶೆಟ್ಟಿ, ಪ್ರದೀಪ ಮೇಲಿನಮನಿ, ಬಾಲಶೇಖರ ಬಂದಿ, ರವಿ ಎಂ.ಹುಲಕುಂದ, ಪ್ರಸನ್ನ ಕುಲಕರ್ಣಿ, ಆನಂದ ಮನ್ನಿಕೇರಿ, ಬಿ.ಎಂ. ಶಿರಸಂಗಿ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.